ಕೇಂದ್ರದ ಗೃಹ ಸಚಿವರನ್ನು ಸಂಪುಟದಿಂದ ಕೈಬಿಡಲು ಒತ್ತಾಯ

ಪ್ರಿಯಾಂಕ ಗಾಂಧಿ ಬಂಧನಕ್ಕೆ ಪರಂ ಖಂಡನೆ

338

Get real time updates directly on you device, subscribe now.

ತುಮಕೂರು: ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವರ ಪುತ್ರ ಕಾರು ಹರಿದು ಮೃತಪಟ್ಟ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿರುವ ಕೇಂದ್ರ ಹಾಗೂ ಉತ್ತರ ಪ್ರದೇಶದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ರೈತರ ಸಾವಿಗೆ ಕಾರಣರಾಗಿರುವ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ಸಂಪುಟದಿಂದ ಕೈ ಬಿಟ್ಟು, ಕೂಡಲೇ ಅವರ ಪುತ್ರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಜಾರಿಗೆ ತಂದಿರುವ ಮೂರು ರೈತ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ಉತ್ತರ ಪ್ರದೇಶದಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶೀಸ್‌ ಮಿಶ್ರಾ ಅವರು ಕಾರು ಹತ್ತಿಸಿ ನಾಲ್ವರು ರೈತರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆ ನಿಜಕ್ಕೂ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದ ರೈತರ ಮನೆಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲು ತೆರಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ 1977 ರ ಅಕ್ಟೋಬರ್‌ 3 ರಂದು ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್‌ ನಾಯಕಿ ದಿ.ಇಂದಿರಾ ಗಾಂಧಿಯವರನ್ನು ಬಂಧಿಸಿದ ದಿನ, ಮತ್ತೆ ಅದೇ ಅಕ್ಟೋಬರ್‌ 3ನೇ ತಾರೀಕು ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ ನಡೆದಿರುವುದು ಇಡೀ ಜಗತ್ತಿಗೆ ಗೊತ್ತಿದೆ. ಈ ದೇಶದ ರೈತರು ಕಳೆದ 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ಅನೇಕ ಕಾನೂನು ಬಿಜೆಪಿ ಅನುಕೂಲವಾಗುವಂತೆ ಕಾನೂನು ಜಾರಿಗೆ ತಂದಿದೆ. ಆದರೆ ಈ ಕಾನೂನಿನ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿ ಅದರಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಕೇಂದ್ರಕ್ಕೆ ಪರಿಪರಿಯಾಗಿ ಮನವಿ ಮಾಡಿದರೂ ಕೇಂದ್ರ ಸರಕಾರ ಮಾತ್ರ ರೈತರ ಕೂಗಿ ಕಿವಿಗೊಟ್ಟು ರೈತರ ಮನವಿಯನ್ನು ಪುರಸ್ಕಾರ ಮಾಡಲಿಲ್ಲ ಎಂದು ಆರೋಪಿಸಿದರು.
ಅ.3 ರಂದು ಉತ್ತರ ಪ್ರದೇಶದಲ್ಲಿ ಸಾವಿರಾರು ರೈತರು ಸೇರಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ದೊಡ್ಡ ದುರಂತ ಘಟನೆ ನಡೆದಿದ್ದು, ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶೀಶ್‌ ಮಿಶ್ರಾ ಅವರು ತಮ್ಮ ವಾಹನವನ್ನು ರೈತರ ಮೇಲೆ ಓಡಿಸುವ ಮೂಲಕ ಪ್ರತಿಭಟನಾ ನಿರತರಾಗಿದ್ದವರ ಪೈಕಿ 4 ಜನ ಸ್ಥಳದಲ್ಲೇ ಹತ್ಯೆಗೈದಿದ್ದಾರೆ. ಅಲ್ಲದೆ ಪೊಲೀಸರಿಂದಲೂ 4 ಜನ ರೈತರು ಸತ್ತಿದ್ದಾರೆ, ಒಟ್ಟು 8 ಜನ ರೈತರು ದೇಶದಲ್ಲಿ ಸತ್ತಿದ್ದಾರೆ, ಇದು ಎಲ್ಲರಿಗೂ ಒಂದು ರೀತಿಯ ಆಶ್ಚರ್ಯದ ಜೊತೆಗೆ ದಿಗ್ಬ್ರೆಮೆ ಉಂಟು ಮಾಡಿದೆ ಎಂದು ಡಾ.ಜಿ.ಪರಮೇಶ್ವರ್‌ ನುಡಿದರು.
ಕೇಂದ್ರ ಸರಕಾರದ ದಬ್ಬಾಳಿಕೆ, ದೌರ್ಜನ್ಯ ಕೇಳಲು ರೈತರಿಗೆ ಸಹಾಯ ಮಾಡಿ, ರೈತರ ಸಮಸ್ಯೆ ಕೇಳಲು ಹೋದ ನಮ್ಮ ನಾಯಕಿ ಪ್ರಿಯಾಂಕ ಗಾಂಧಿಯವರು ಗಲಾಟೆ ಮಾಡಲಿಲ್ಲ, ರೈತರ ಜತೆ ಸೇರಿಕೊಂಡು ಪ್ರತಿಭಟನೆ ಮಾಡಲಿಲ್ಲ, ಇನ್ಯಾರೋ ಉಗ್ರಗಾಮಿಗಳ ಜತೆ ಸೇರಿಕೊಂಡು ಪೊಲೀಸರನ್ನು ಹೊಡೆಯಲು ಹೋಗಲಿಲ್ಲ, ಆದರೂ ಅವರನ್ನು ಬಂಧಿಸಿದ್ದಾರೆ, ಅದರಲ್ಲೂ ಮಹಿಳಾ ಪೊಲೀಸ್‌ ಸಿಬ್ಬಂದಿ ಇಲ್ಲದೆ ಪುರುಷ ಪೊಲೀಸರೇ ಅರೆಸ್ಟ್ ಮಾಡಿದ್ದಾರೆ ಎಂದರೆ ನಮ್ಮ ದೇಶದಲ್ಲಿ ಯಾವ ರೀತಿ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ನಾವೆಲ್ಲಾ ಊಹೆ ಮಾಡಿಕೊಳ್ಳಬೇಕು, ಇನ್ನೂ ಅವರನ್ನು ಬಿಡುಗಡೆ ಮಾಡಿಲ್ಲ, ಪ್ರಿಯಾಂಕ ಗಾಂಧಿಯವರ ಜತೆ ಕಾಂಗ್ರೆಸ್‌ ಸದಾ ಇರುತ್ತದೆ, ಯಾವ ಹಂತ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ರೈತ ವಿರೋಧಿ, ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವುದನ್ನು ಖಂಡಿಸಿ ಉತ್ತರ ಪ್ರದೇಶದಲ್ಲಿ ಸುಮಾರು 300 ದಿನಗಳಿಂದ ಚಳಿ ಮಳೆಯನ್ನು ಲೆಕ್ಕಿಸದೇ ರೈತರು ಅಹೋರಾತ್ರಿ ಹೋರಾಟ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ 15 ದಿನಗಳ ಕಾಲ ಕಾಂಗ್ರೆಸ್‌ ಒಳಗೊಂಡಂತೆ ವಿರೋಧ ಪಕ್ಷಗಳು ಈ ಕರಾಳ ಶಾಸನಗಳ ಬಗ್ಗೆ ಚರ್ಚೆಗೆ ಅವಕಾಶ ಕೋರಿ ಮನವಿ ಮಾಡಿದರೂ ಅವಕಾಶ ನೀಡಲಿಲ್ಲ, ಹೀಗಾದರೆ ಲೋಕಸಭೆ ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ಸಂವಿಧಾನ ಬದ್ಧವಾಗಿ ಲೋಕಸಭೆಯಲ್ಲಿ ಚರ್ಚೆ ಮಾಡಿ ಕಾನೂನು ತಂದಿಲ್ಲ, ಸುಗ್ರಿವಾಜ್ಞೆ ಮೂಲಕ ಕೇಂದ್ರ ಜಾರಿಗೆ ತಂದಿರುವ ಕಾನೂನನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ ಕೊಟ್ಟಿದ್ದಾರೆ. ಇದನ್ನು ವಿರೋಧಿಸಿ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದರು.
ಈ ದೇಶದ ಕಾನೂನು ಸುವ್ಯವಸ್ಥೆ, ಸಂವಿಧಾನದ ಬಗ್ಗೆ ಬಿಜೆಪಿಯವರಿಗೆ ಗೌರವ ಇಲ್ಲ, ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾಕ್ಕೆ ಪ್ರವಾಸ ಹೋಗಿ ಭಾಷಣ ಮಾಡಿದಾಕ್ಷಣ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಈ ಕರಾಳ ಶಾಸನಗಳ ಬಗ್ಗೆ ಒಂದು ದಿನವೂ ಚರ್ಚೆ ಮಾಡಿಲ್ಲ, ಬದಲಾಗಿ ತಾವು ತಂದಿರುವ ಕಾನೂನು ಸರಿಯಿದೆ ಎಂದು ಸಮರ್ಥನೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎಸ್‌.ಷಫಿಅಹಮದ್‌, ಆರ್‌.ನಾರಾಯಣ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಮುರುಳೀಧರ ಹಾಲಪ್ಪ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶಶಿಹುಲಿಕುಂಟೆ, ಕೆಪಿಸಿಸಿ ವಕ್ತಾರ ನಿಖಿಲ್‌ರಾಜ್‌ ಮೌರ್ಯ, ಮರಿಚನ್ನಮ್ಮ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!