ಮಧುಗಿರಿ: ರೈತರ ವಿರುದ್ಧ ಪ್ರಚೋದನೆ ನಡೆಸುವವರನ್ನು ಬಿಟ್ಟು ಹತ್ಯೆಯಾದ ರೈತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಹೋದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿರುವುದು ಕಾನೂನು ಬಾಹಿರವಾಗಿದ್ದು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕ್ರೀಬ್ಕೋ ನಿರ್ದೇಶಕ ಆರ್.ರಾಜೇಂದ್ರ ಒತ್ತಾಯಿಸಿದರು.
ಬುಧವಾರ ಮಧುಗಿರಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಇರುವ ತಾಲ್ಲೂಕು ಕಾಂಗ್ರೆಸ್ ಕಚೇರಿ ಮುಂಭಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಕಪ್ಪುಪಟ್ಟಿ ಧರಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಪೊಲೀಸರು ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿ 40 ಗಂಟೆ ಕಳೆದರೂ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಇದು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ನಡೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಹರ್ಯಾಣ ಮುಖ್ಯಮಂತ್ರಿ ಖಟ್ಟರ್ ಮತ್ತು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಮಿಶ್ರಾ ರೈತರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದರು. ಪರಿಣಾಮ ಗೃಹಖಾತೆ ರಾಜ್ಯ ಸಚಿವರ ಪುತ್ರ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹತ್ತಿಸಿ 6 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಈಗಿನ ಮಾಹಿತಿಯಂತೆ ಹತ್ತು ರೈತರು ಮೃತಪಟ್ಟಿದ್ದಾರೆ. ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಸಚಿವರ ಪುತ್ರ ವಾಹನದ ಎಡಭಾಗದಲ್ಲಿ ಕುಳಿತು ರೈತರ ಹತ್ಯೆಯ ನಂತರ ಅಲ್ಲಿಂದ ಓಡಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ, ಆದರೂ ತಮ್ಮ ಪುತ್ರ ರೈತರ ಮೇಲೆ ವಾಹನ ಹರಿಸಿಲ್ಲ ಎಂದು ಸಚಿವರು ಹೇಳುತ್ತಾರೆ. ಇದನ್ನು ನೋಡಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರೈತರ ಬಗೆಗೆ ಕಾಳಜಿ ಇಲ್ಲ ಎಂಬುದು ತಿಳಿಯುತ್ತದೆ ಎಂದು ಟೀಕಿಸಿದರು.
ಈ ಘಟನೆಯಲ್ಲಿ ಹತ್ಯೆಯಾದ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋದ ಪ್ರಿಯಾಂಕ ಗಾಂಧಿ ಅವರನ್ನು ಯಾವುದೇ ಮಾಹಿತಿ ನೀಡದೆ ಬಂಧಿಸಿರುವುದು ಖಂಡನೀಯ. ಬಂಧನದ ವೇಳೆ ಅನುಸರಿಸಬೇಕಿದ್ದ ಪ್ರಕ್ರಿಯೆಗಳನ್ನು ಗಾಳಿಗೆ ತೂರಿದ್ದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಇಡೀ ಘಟನೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ರೈತರನ್ನು ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು, ಕೇಂದ್ರ ಗೃಹಖಾತೆ ರಾಜ್ಯ ಸಚಿವ ಮಿಶ್ರಾ ಸುಳ್ಳು ಹೇಳುತ್ತಿದ್ದು ಸಚಿವರಾಗಲು ಅವರು ನಾಲಾಯಕ್ ಆಗಿದ್ದಾರೆ, ಹಾಗಾಗಿ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಪ್ರಚೋದನೆ ನೀಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಪ್ರಿಯಾಂಕಗಾಂಧಿ ಮಾಡಿದ ಅಪರಾಧ ಏನು? ಬಂಧಿಸಿದ್ದು ಯಾಕೆ? ಇದಕ್ಕೆ ಉತ್ತರ ಕೊಡಬೇಕು. ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಮಾಡಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸಾಧುಬಟ್ಟೆ ಧರಿಸಿದ್ದರೂ ಕೆಟ್ಟ ವ್ಯವಸ್ಥೆಗೆ ಬೆಂಬಲ ನೀಡುತ್ತಿದ್ದಾರೆ. ದಬ್ಬಾಳಿಕೆ, ದೌರ್ಜನ್ಯಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಎಲ್ಲರೂ ಇದರ ವಿರುದ್ಧ ನಿಲ್ಲಬೇಕು ಎಂದು ತಿಳಿಸಿ,ರಾಹುಲ್ ಗಾಂಧಿ ಸಾಂತ್ವನ ಹೇಳಲು ಕೇಂದ್ರ ಸರ್ಕಾರ ಇಲ್ಲಿಯವರೆಗೂ ಅನುಮತಿ ನೀಡದಿರುವುದನ್ನು ರಾಜೇಂದ್ರ ಖಂಡಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಎನ್. ಗಂಗಣ್ಣ ಮಾತನಾಡಿ ಉತ್ತರ ಪ್ರದೇಶದ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯದ ಮೇಲೆ , ದೇಶದಾದ್ಯಂತ ಬೆಳೆಯುತ್ತಿರುವ ಚಳವಳಿ ಮುರಿಯುವ ಸಂಚಿನ ಭಾಗವಾಗಿ ಸಚಿವರ ಬೆಂಗಾವಲಿನ ವಾಹನಗಳನ್ನು ಚಲಾಯಿಸಿ ಎಂಟು ಜನರ ಬರ್ಬರ ಹತ್ಯೆ ನಡೆಸಲಾದ ಕುಕೃತ್ಯವು ದೇಶದಾದ್ಯಂತ ತೀವ್ರ ಆತಂಕ ಮತ್ತು ತಲ್ಲಣವನ್ನುಂಟು ಮಾಡಿದೆ ಎಂದರು.
ತುಮಕೂರು ಡಿಸಿಸಿ ನಿರ್ದೇಶಕ ಬಿ.ನಾಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್.ರಾಜಗೋಪಾಲ್ , ಎಂ.ಎಸ್.ಮಲ್ಲಿಕಾರ್ಜುನಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಡಿ.ವೆಂಕಟೇಶ್, ಪುರಸಭಾ ಮಾಜಿ ಅಧ್ಯಕ್ಷ ಮಹಮದ್ ಅಯೂಬ್, ಐ.ಡಿ.ಹಳ್ಳಿ ಗ್ರಾಪಂ ಅಧ್ಯಕ್ಷ ನರಸಿಂಹರೆಡ್ಡಿ, ಮಾಜಿ ಎಪಿಎಂಸಿ ಡಿ.ಹೆಚ್.ನಾಗರಾಜು, ಉಮೇಶ್, ಅಧ್ಯಕ್ಷ ಪಿ.ಟಿ.ಗೋವಿಂದಪ್ಪ ಇತರರು ಇದ್ದರು.
Get real time updates directly on you device, subscribe now.
Next Post
Comments are closed.