ಆಡಳಿತ ವರ್ಗ, ಶಿಕ್ಷಕರ ನಡುವೆ ಗೊಂದಲ- ಶಾಲೆಗೆ ಬೀಳಲಿದೆ ಬೀಗ

367

Get real time updates directly on you device, subscribe now.

ಕುಣಿಗಲ್‌: ಆಡಳಿತ ವರ್ಗ ಹಾಗೂ ಶಿಕ್ಷಕರ ನಡುವಿನ ಗೊಂದಲಕ್ಕೆ ಅನುದಾನಿತ ಪ್ರೌಢಶಾಲೆಯೊಂದು ತನ್ನ ಕೊನೆ ದಿನಗಳನ್ನು ಎಣಿಸುವಂತಾಗಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಕಸಬಾ ಹೋಬಳಿಯ ದೊಂಬರಹಟ್ಟಿ ಸಮೀಪದಲ್ಲಿರುವ ರಾಜೀವ್‌ಗಾಂಧಿ ಸ್ಮಾರಕ ಅನುದಾನಿತ ಪ್ರೌಢಶಾಲೆಯು 2021- 22ನೇ ಶೈಕ್ಷಣಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಸಮರ್ಪಕ ದಾಖಲಾತಿ ಇಲ್ಲದ ಕಾರಣ ಕಾರ್ಯಸಾಧುವಲ್ಲದ ಶಾಲೆ ಎಂದು ಶಿಕ್ಷಣ ಇಲಾಖೆ ಪರಿಗಣಿಸಿದೆ. ಅನುದಾನಿತ ಪ್ರೌಢಶಾಲೆಯಲ್ಲಿ 8 ಬೋಧಕ ಸಿಬ್ಬಂದಿ ಹಾಗೂ ಓರ್ವ ಬೋಧಕೇತರ ಸಿಬ್ಬಂದಿ ಸೇರಿ ಒಟ್ಟಾರೆ 9 ಮಂದಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಪ್ರೌಢಶಾಲೆಗೆ ಸಮೀಪದ ದೊಂಬರಹಟ್ಟಿ, ಬಸವನ ಮತ್ತಿಕೆರೆ, ಗೌಡಗೆರೆ ಹಾಗೂ ಹೇರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಪ್ರೌಢ ಶಿಕ್ಷಣಕ್ಕೆ ಅನುಕೂಲವಾಗಿತ್ತು, 2015 ರಿಂದಲೂ ಸದರಿ ಪ್ರೌಢಶಾಲೆ ಅನುದಾನಕ್ಕೆ ಒಳಪಟ್ಟಿತ್ತು.
ಪ್ರಸಕ್ತ ಸಾಲಿನಲ್ಲಿ ಶಾಲಾಡಳಿತ ಮಂಡಳಿ, ಶಿಕ್ಷಕರೊಂದಿಗೆ ಮಕ್ಕಳ ದಾಖಲಾತಿ ವಿಷಯವಾಗಿ ಗೊಂದಲ ಸೃಷ್ಟಿಯಾಗಿದ್ದು, ಆಡಳಿತ ಮಂಡಳಿ ಕಾರ್ಯದರ್ಶಿ ಶಾಲೆಯ ಐದು ಶಿಕ್ಷಕರನ್ನು ಅಮಾನತುಗೊಳಿಸಿದ್ದರು. ಉಳಿದ ಮೂವರು ಶಿಕ್ಷಕರು, ಓರ್ವ ಬೋಧಕೇತರ ಸಿಬ್ಬಂದಿ ಶಾಲೆಯನ್ನು ಸರಿದೂಗಿಸುವುದು ಕಷ್ಟಸಾಧ್ಯವಾಯಿತು. ಈ ಮಧ್ಯೆ ಶಾಲೆಯಲ್ಲಿ ಸುಮಾರು 15 ವಿದ್ಯಾರ್ಥಿಗಳಿದ್ದು ಪೋಷಕರು ಎಲ್ಲಾ ಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆಡೆಗೆ ದಾಖಲಿಸಲು ಮುಂದಾಗಿದ್ದರಿಂದ ಪರಿಸ್ಥಿತಿ ಗಂಭೀರವಾಗಿದೆ. ಮಕ್ಕಳ ಸಮರ್ಪಕ ಹಾಜರಾತಿ ಇಲ್ಲದ ನಡುವೆ ಆಡಳಿತ ಮಂಡಳಿ ಐವರು ಶಿಕ್ಷಕರ ಅಮಾನತುಗೊಳಿಸಿದ್ದು ಶಾಲಾಡಳಿತ ದೃಷ್ಟಿಯಿಂದ ಗಂಭೀರ ಸಮಸ್ಯೆ ಸೃಷ್ಟಿಸಿದ್ದರಿಂದ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು, ಆಡಳಿತವರ್ಗ, ಶಿಕ್ಷಕರನ್ನು ಕರೆಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದರೂ ಯಾವುದೇ ಪರಿಹಾರ ಕಾಣದ ಗೊಂದಲ ಮುಂದುವರೆದಿದೆ. ಕ್ಷೇತ್ರಶಿಕ್ಷಣಾಧಿಕಾರಿಗಳು ಕಾರ್ಯಸಾಧುವಲ್ಲದ ಶಾಲೆ ಎಂದು ಪರಿಗಣಿಸಿ ಕ್ರಮಕ್ಕೆ ಮುಂದಾಗಿದ್ದು ಅನುದಾನಕ್ಕೆ ಒಳಪಟ್ಟ ಪ್ರೌಢಶಾಲೆ ಕೆಲವೆ ವರ್ಷದಲ್ಲಿ ಕೊನೆ ದಿನ ಎಣಿಸುವಂತಾಗಿರುವುದು ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದೆ.

Get real time updates directly on you device, subscribe now.

Comments are closed.

error: Content is protected !!