ಹಾಸನದವರಿಗೆ ಹೇಮೆ ನೀರು ಬಿಡಲು ಮನಸ್ಸಿರಲಿಲ್ಲ

ದೇವೇಗೌಡರ ಕುಟುಂಬದ ವಿರುದ್ಧ ಮಾಧುಸ್ವಾಮಿ ಪರೋಕ್ಷ ಟೀಕೆ

612

Get real time updates directly on you device, subscribe now.

ಗುಬ್ಬಿ: ಹಾಸನ, ಮಂಡ್ಯ, ತುಮಕೂರು ಜಿಲ್ಲೆಯಲ್ಲಿ ಎಲ್ಲಿಯೂ ಹೇಮಾವತಿ ನೀರಿನ ಸಮಸ್ಯೆ ಆಗದ ರೀತಿಯಲ್ಲಿ ಆಡಳಿತ ವ್ಯವಸ್ಥೆ ಮಾಡಿದ ಪರಿಣಾಮ ಯಾವುದೇ ಸಮಸ್ಯೆಗಳಿಲ್ಲದೆ ನಾಲೆಯಲ್ಲಿ ನೀರು ಹರಿಯುತ್ತಿದೆ, ಕೆರೆಗಳು ಸಹ ತುಂಬಿಕೊಳ್ಳುತ್ತಿವೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಯಲಚಿಹಳ್ಳಿ ಗ್ರಾಮದಲ್ಲಿ ಹೇಮಾವತಿ ನೀರಿನಿಂದ ಕೆರೆ ತುಂಬಿದ ಹಿನ್ನೆಲೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಮಾತನಾಡಿ, ಹಾಸನದವರಿಗೆ ತುಮಕೂರು ಜಿಲ್ಲೆಗೆ ನೀರು ಬಿಡಬೇಕು ಎಂಬ ಮನಸ್ಸು ಇರಲಿಲ್ಲ, ಆದರೆ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಯೋಜನೆ ಮತ್ತು ಯೋಚನೆ ಮಾಡಿ ಎಲ್ಲಾ ಭಾಗದಲ್ಲಿಯೂ ನೀರು ಹರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕರ್ನಾಟಕದ 71 ಅಂತರ್ಜಲ ಬರಿದಾಗಿ ಮರುಭೂಮಿಯಾಗಿ ಸೃಷ್ಟಿಯಾಗಿದೆ, ಅಲ್ಲಿ ಸುಮಾರು 1200 ಅಡಿ ಆಳ ತಲುಪಿದ್ದು ಅಲ್ಲಿಂದ ನೀರು ತೆಗೆಯುವುದೇ ಬಹಳ ಕಷ್ಟಕರವಾಗಿದೆ, ಇಂತಹ ಸಂದರ್ಭದಲ್ಲಿ ಮೋದಿಯವರು ಅಟಲ್ ಭೂಜಲ ಯೋಜನೆ ಜಾರಿಗೆ ತಂದಿದ್ದು ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು, ಹೇಗೆ ನೀರನ್ನು ಸಂಗ್ರಹ ಮಾಡಬೇಕು ಎಂಬ ಯೋಜನೆ ಜಾರಿಗೆ ತರಲಾಗಿದೆ ಎಂದರು.
ರಾಜಕೀಯವಾಗಿ ಶಾಸಕರಾದಿಯಾಗಿ ಹಲವು ಮುಖಂಡರು ಪಕ್ಷ ಬಿಡುವ ಬಗ್ಗೆ ಜನರಿಂದಲೇ ಕೇಳಿಬರುತ್ತಿದೆ, ಯಾರು ಯಾವ ಪಕ್ಷ ಬಿಡುವರು ಹಾಗೂ ಸೇರುವರು ಎಂಬ ಸ್ಪಷ್ಟ ಚಿತ್ರಣವೇ ಗೊತ್ತಿಲ್ಲ, ಈ ಮಧ್ಯೆಗಟ್ಟಿ ನೆಲೆಯುಳ್ಳ ಬಿಜೆಪಿ ಪಕ್ಷದಲ್ಲಿ ದೂರ ಹೋಗುವವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಹೊಸಬರನ್ನು ತಂದು ಗೆಲ್ಲಿಸುವ ಶಕ್ತಿ ಪಕ್ಷಕ್ಕಿದೆ ಎಂದು ಬಿಜೆಪಿ ತೊರೆಯುವವರ ವಿರುದ್ಧ ಪರೋಕ್ಷವಾಗಿ ಮಾಧುಸ್ವಾಮಿ ಟಾಂಗ್ ನೀಡಿದರು.
ಜಿಲ್ಲೆಯ ಕಡಬ ಮತ್ತು ಸಿ.ಎಸ್.ಪುರ ಕೆರೆಗೆ ನೀರು ಹರಿಸುವ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ, ಈ ಪ್ರಮುಖ ಕೆರೆಗಳು ಬಹು ನಿರೀಕ್ಷೆಯಲ್ಲಿವೆ, ಜೊತೆಗೆ ತಾಲ್ಲೂಕಿನ ಬಿಕ್ಕೆಗುಡ್ಡ ಮತ್ತು ಹಾಗಲವಾಡಿ ಕೆರೆಗೆ ಹೇಮೆ ಹರಿಸುವ ಯೋಜನೆಯಲ್ಲಿ ತಾಂತ್ರಿಕ ಸಮಸ್ಯೆಯಿದ್ದು ಈಗ ಆ ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ ಎಂದರು.
ತಾಲ್ಲೂಕಿನ ಬಿಕ್ಕೆಗುಡ್ಡ ಯೋಜನೆಗೆ ಈಗಾಗಲೆ ಚಾಲನೆ ನೀಡಲಾಗಿದೆ, ಶೀಘ್ರದಲ್ಲೇ ಈ ಯೋಜನೆ ಪೂರ್ಣಗೊಳ್ಳಲಿದೆ, ಹಾಗಲವಾಡಿ ಕೆರೆಗೆ ನೀರು ಹರಿಸಲು ವಿಶೇಷ ಮೇಲ್ಗಾಲುವೆ ನಿರ್ಮಾಣಕ್ಕೂ ಸಮ್ಮತಿ ದೊರಕಲಿದೆ, ಬೆಳೆ ಪರಿಹಾರ ಸೇರಿದಂತೆ ಇನ್ನಿತರ ವಿಷಯದೊಂದಿಗೆ ಸರ್ಕಾರದ ಮುಂದಿಡಲಾಗಿದೆ, ಇನ್ನೂ ತಾಲೂಕಿನ ಮಂಚಲದೊರೆ ಭಾಗದ ಕೆರೆಗೆ ನೀರು ಹರಿಸುವ ಯೋಜನೆ ಕಷ್ಟವಾಗುತ್ತದೆ, 2 ಬಾರಿ ವಾಪಸಾಗಿರುವ ಈ ಯೋಜನೆಗೂ ಸೂಕ್ತ ಪರಿಹಾರ ಕಂಡು ಅನುಷ್ಠಾನಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಈ ಭಾಗದ ಸಾಕಷ್ಟು ಕೆರೆಗಳಿಗೆ ನೀರು ಹರಿಯುತ್ತಿದೆ, ಆದರೆ ನೀರು ಹರಿಯುವ ಸಂದರ್ಭದಲ್ಲಿ ನಾಲೆಯಲ್ಲಿ ಸಾಕಷ್ಟು ಮಣ್ಣು ತುಂಬುವುದರಿಂದ ನೀರು ಹರಿಯುವ ಪ್ರಕ್ರಿಯೆ ನಿಧಾನವಾಗುತ್ತದೆ, ಹಾಗಾಗಿ ಆ ಎಲ್ಲಾ ನಾಲೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿದರೆ ಸಾಕಷ್ಟು ನೀರು ಕೆರೆಗಳಿಗೆ ಹರಿದು ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಶೇಖರಬಾಬು ಮಾತನಾಡಿ, ಜಿಲ್ಲೆಗೆ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವರು ಆಗದಿದ್ದರೆ ಜಿಲ್ಲೆಯ ಸಾಕಷ್ಟು ಕೆರೆಗಳು ನೀರು ಕಾಣುತ್ತಿರಲಿಲ್ಲ, ಸಣ್ಣನೀರಾವರಿ ಸಚಿವರಾಗಿರುವುದರಿಂದ ಇಡೀ ಜಿಲ್ಲೆಯಲ್ಲಿ ಸಮಗ್ರ ನೀರಾವರಿ ವ್ಯವಸ್ಥೆ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಆರತಿ, ಬಿಜೆಪಿ ಮುಖಂಡರಾದ ಪಾರ್ಥಸಾರಥಿ, ಸಾಗರನಹಳ್ಳಿ ನಂಜೇಗೌಡ, ಶಿರಾ ಡಿವೈಎಸ್ಪಿ ಕುಮಾರಪ್ಪ, ರೈತ ಸಂಘದ ಗುರುಚನ್ನಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್, ಸದಾಶಿವಯ್ಯ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!