ತುಮಕೂರು: ಪತ್ರಿಕೋದ್ಯಮದಲ್ಲಿ ಇರುವ ಒತ್ತಡಗಳ ನಡುವೆ ನಮ್ಮ ಬದುಕು ಕಳೆದುಕೊಳ್ಳದೆ ವೈಯಕ್ತಿಕ ಬದುಕಿಗೂ ಪ್ರಾಧಾನ್ಯತೆ ನೀಡಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತ ದಿ. ಸಿ.ಎಸ್. ಕುಮಾರ್ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಪತ್ರಿಕೋದ್ಯಮದಲ್ಲಿರುವ ಇಸಂಗಳ ನಡುವೆ ಕುಮಾರ್ ಪ್ರತಿಭಾವಂತ ಸ್ನೇಹಜೀವಿಯಾಗಿದ್ದರು, ಪತ್ರಕರ್ತರು ಕೆಲಸದ ನಡುವೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಅವಶ್ಯಕ, ಆರೋಗ್ಯ ಕಡೆಗಣಿಸದೇ ಆರೋಗ್ಯ ಕಾಪಾಡಿಕೊಳ್ಳುವ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಚಿವರ ಗಮನ ಸೆಳೆಯುತ್ತಿದ್ದ ಚೇಳೂರು ಕುಮಾರ್ ಅವರು ಸರಳ ವ್ಯಕ್ತಿತ್ವದವರು, ಎಲ್ಲರೊಂದಿಗೂ ಬೆರೆಯುತ್ತಿದ್ದ ಅವರು ನಮ್ಮನ್ನು ಅಗಲಿರುವುದು ದುರಂತವೇ ಸರಿ, ಯಾರ ಒತ್ತಡಕ್ಕೂ ಒಳಗಾಗದೆ ಸುಗಮವಾಗಿ ಪ್ರೀತಿ ಮತ್ತು ಸಂತೋಷದಿಂದ ಬದುಕಬೇಕು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಪತ್ರಕರ್ತರು ಆರೋಗ್ಯದ ಕಡೆ ಗಮನ ನೀಡಬೇಕು. ಪ್ರತಿಭಾವಂತ ಪತ್ರಕರ್ತ ನಮ್ಮನ್ನು ಅಗಲಿದ್ದಾನೆ. ಕೆಲಸಕ್ಕೆ ಒತ್ತು ನೀಡಿ ಆರೋಗ್ಯ ಕಡೆಗಣಿಸಿದರು, ಪತ್ರಕರ್ತರಿಗೆ ಕಷ್ಟ ಎಂದಾಗ ಮುಂದೆ ನಿಲ್ಲುತ್ತಿದ್ದರು, ಆತನ ಧೋರಣೆಗಳು ಏನೇ ಇದ್ದರೂ ಸಹೃದಯಿ ಎಂದು ಭಾವುಕರಾದರು.
ಕೆಲಸದ ಒತ್ತಡದಲ್ಲಿ ಕುಟುಂಬವನ್ನು ಮರೆಯಬಾರದು, ಇರುವವರೆಗೆ ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಇರೋಣ, ಕೊರೊನಾ ನಂತರ ಪತ್ರಕರ್ತರ ಅಗಲಿಕೆ ಹೆಚ್ಚಿದೆ, ರಾಜ್ಯ ಮತ್ತು ಜಿಲ್ಲಾ ಘಟಕದ ವತಿಯಿಂದ ನೀಡುವ ಪರಿಹಾರವನ್ನು ದೊರಕಿಸುವುದಾಗಿ ಹೇಳಿದರು.
ಪತ್ರಕರ್ತ ಪಿ.ಡಿ. ಈರಣ್ಣ ಮಾತನಾಡಿ, ಉತ್ತಮ ಒಡನಾಡಿಯನ್ನು ನಾವು ಕಳೆದುಕೊಂಡಿದ್ದೇವೆ. ಒಬ್ಬ ವ್ಯಕ್ತಿಯನ್ನು ಅರ್ಥೈಸಿಕೊಳ್ಳುವುದರಲ್ಲಿ ಒಬ್ಬರದ್ದು ಒಂದೊಂದು ರೀತಿ, ಗ್ರಾಮೀಣ ಪ್ರದೇಶದಿಂದ ಬಂದ ಮಹತ್ವಾಕಾಂಕ್ಷೆಯ ಪತ್ರಕರ್ತ ಚೇಳೂರು ಕುಮಾರ್ ಅವರದ್ದು ತಾಯಿ ಹೃದಯ, ಎಲ್ಲರ ದುಃಖದಲ್ಲಿಯೂ ಭಾಗಿಯಾಗುತ್ತಿದ್ದವರು ಎಂದರು.
ಪತ್ರಕರ್ತರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ಚೇಳೂರು ಕುಮಾರ್ ಅವರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದರು. ಅತಿಯಾದ ಆತ್ಮವಿಶ್ವಾಸದಿಂದ ಅನಾರೋಗ್ಯಕ್ಕೆ ಒಳಗಾದರು. ತುಂಬಾ ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದ ಕುಮಾರ್ ಎಚ್ಚರಿಕೆ ವಹಿಸಿದ್ದರೆ ಇಂದು ನಮ್ಮೊಂದಿಗೆ ಇರುತ್ತಿದ್ದರು ಎಂದು ಸ್ಮರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ.ರಂಗರಾಜು, ಪತ್ರಕರ್ತರಾದ ಹೆಚ್.ವಿ.ವೆಂಕಟಾಚಲ, ಹರೀಶ್ ಆಚಾರ್ಯ ಈ ಸಂಜೆ ಕುಮಾರ್ ಬಗ್ಗೆ ಸಂತಾಪದ ನುಡಿಗಳನ್ನಾಡಿದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ರಂಗನಾಥ್, ನಾಗರಾಜು, ಈಶ್ವರ್, ಸತೀಶ್, ಮಾರುತಿಪ್ರಸಾದ್, ಪತ್ರಕರ್ತರಾದ ಕುಣಿಹಳ್ಳಿ ಮಂಜುನಾಥ್, ರಘು, ಸತೀಶ್, ಜಯಪ್ರಕಾಶ್, ಟಿ.ಹೆಚ್.ಸುರೇಶ್, ಬಾಲು, ಮೋಹನ್, ರೇಣುಕಾ, ವಾರ್ತಾ ಇಲಾಖೆಯ ವೆಂಕಟೇಶ್, ರಾಧಮ್ಮ ಮತ್ತಿತರರು ಭಾಗವಹಿಸಿದ್ದರು.
ಪತ್ರಕರ್ತ ದಿ.ಸಿ.ಎಸ್.ಕುಮಾರ್‌ಗೆ ಪತ್ರಕರ್ತರಿಂದ ಶ್ರದ್ಧಾಂಜಲಿ ಸಲ್ಲಿಕೆ
ಪತ್ರಕರ್ತರು ಆರೋಗ್ಯ ಕಾಳಜಿ ಹೊಂದಲಿ: ಹಿಮಂತರಾಜು
Get real time updates directly on you device, subscribe now.
Comments are closed.