ತುಮಕೂರಿನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಸದಾಶಿವ ಆಯೋಗ ವರದಿ ಅನುಷ್ಠಾನ ಮಾಡಿ

199

Get real time updates directly on you device, subscribe now.

ತುಮಕೂರು: ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೂಡಲೇ ಅನುಷ್ಠಾನ ಮಾಡುವ ಮೂಲಕ ಒಳಮೀಸಲಾತಿ ವರ್ಗೀಕರಣವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಮಾವೇಶಗೊಂಡ ಸಮಿತಿಯ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಎ.ಜೆ. ಸದಾಶಿವ ಆಯೋಗದ ವರದಿಯನ್ನು ಒಪ್ಪಬಾರದೆಂದು ಭೋವಿ, ಲಂಬಾಣಿ, ಕೊರಮ, ಕೊರಚ ಇತ್ಯಾದಿ ಉಪಜಾತಿಗಳು ಪ್ರತಿಭಟನೆ ಮೂಲಕ ಬೀದಿಗಿಳಿದಿವೆ. ಕರ್ನಾಟಕ ದಸಂಸ ಈ ಎಲ್ಲಾ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೂ ಅವರ ಜಾತಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು ಎಂದು 1997 ರಲ್ಲಿ ದಸಂಸ ಒತ್ತಾಯಿಸಿತ್ತು, ಆದರೆ ಇದನ್ನು ಜಾರಿಗೊಳಿಸದೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕಾರಣಕ್ಕಾಗಿ ಎ.ಜೆ. ಸದಾಶಿವ ಆಯೋಗದ ವಿಚಾರದಲ್ಲಿ ಉಪ ಜಾತಿಗಳನ್ನು ಹೋರಾಟಕ್ಕೆ ಬಳಸಿಕೊಳ್ಳುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
101 ಜಾತಿಗಳಲ್ಲಿ ಯಾವುದೇ ಉಪಜಾತಿಗೆ ಅನ್ಯಾಯವಾದರೂ ಪರಮರ್ಶಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ, ಭೋವಿ, ಲಂಬಾಣಿ, ಕೊರಮ, ಕೊರಚ ಜನಾಂಗಗಳು ಒಳ ಮೀಸಲಾತಿ ಮಾಡಬೇಡಿ ಎಂದು ಹೇಳುತ್ತಿವೆ. ಆದರೆ 1987 ರಲ್ಲೆ ಎಲ್ಲರಿಗೂ ಸಮಾನತೆ ಸಿಗಬೇಕು ಎಂದು ಹೇಳಿ ಒಳಮೀಸಲಾತಿ ಜಾರಿ ಮಾಡಲು 2005 ರಲ್ಲಿ ಸಮಿತಿ ರಚನೆ ಮಾಡಿ ಸುಮಾರು 7 ವರ್ಷಗಳ ಕಾಲ ಸಮೀಕ್ಷೆ ಮಾಡಿ 2012ರಲ್ಲಿ ಈ ಮೀಸಲಾತಿ ಮಾಡಬಹುದು ಎಂದು ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರು ಉಪ ಸಮಿತಿ ರಚನೆ ಮಾಡಿದ್ದರು. ಆದರೆ ಇದುವರೆಗೂ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಜಂಜಾಟ ಮಾಡಿ ಉಪಜಾತಿಗಳನ್ನು ಸೇರಿಸಿಕೊಂಡು ಆಟವಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರಾಜ್ಯ ಸರ್ಕಾರ ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ನಾವು ಸಾಮಾಜಿಕ ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ ಎಂದು ಸೋದರ ಜಾತಿಗಳಾಗ ಭೋವಿಗಳು ಮತ್ತು ಲಂಬಾಣಿ ಜನಾಂಗದವರು ಹೇಳುತ್ತಿದ್ದಾರೆ, ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು.
1970 ರಲ್ಲಿ ಎಲ್‌.ಜಿ. ಹಾವನೂರು ವರದಿ ಕೊಟ್ಟಾಗ ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿದ್ದ ವಡ್ಡರು ಮತ್ತು ಲಂಬಾಣಿಗಳಿಗೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅವಕಾಶ ಕೊಟ್ಟಾಗ ರಾಜ್ಯದಲ್ಲಿ ಹೊಲೆಯ ಮಾದಿಗರು ಯಾವುದೇ ವಿರೋಧ ಮಾಡದೆ ಸೋದರ ಜಾತಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದು ಇತಿಹಾಸ ಎಂದರು.
1976ರ ನಂತರ ನಡೆದ ಬೆಳವಣಿಗೆಗಳನ್ನು ನೋಡಿದಾಗ ರಾಷ್ಟ್ರದಲ್ಲಿ ಮೂಲ ಅಸ್ಪಶ್ಯ ಜಾತಿಗಳಿಗೆ ಮೀಸಲಾತಿಯಿಂದ ಎಲ್ಲಾ ಕ್ಷೇತ್ರದಿಂದಲೂ ಅನ್ಯಾಯವಾಗಿದೆ ಎಂಬ ಕೂಗಿತ್ತು. ಎಸ್‌.ಎಂ.ಕೃಷ್ಣ ಸರ್ಕಾರ ಆಯೋಗ ರಚನೆ ಮಾಡಲು ಕ್ರಮ ಕೈಗೊಂಡು ಧರ್ಮಸಿಂಗ್‌ ಸರ್ಕಾರದಲ್ಲಿ ಸಮಿತಿ ರಚನೆ ಮಾಡಿ 7 ವರ್ಷಗಳ ಕಾಲ ಸಮೀಕ್ಷೆ ಮಾಡಲಾಯಿತು. ಆದರೂ ಇದುವರೆಗೂ ಮೂರು ರಾಜಕೀಯ ಪಕ್ಷಗಳು ಮೀಸಲಾತಿ ಜಾರಿಗೆ ಮುಂದಾಗಿಲ್ಲ ಎಂದು ಕಿಡಿಕಾರಿದರು.
ಜಿಲ್ಲೆಯ ಕಲಾವಿದರಿಗೆ ಮಾಸಾಶನ ಸರ್ಕಾರದಿಂದ ಮಂಜೂರು ಮಾಡಿಸಿಕೊಡಬೇಕು. ಬಿಟ್ಟಿ ಚಾಕ್ರಿ ಮಾಡುವವರನ್ನು ಗುರುತಿಸಿ ಬಿಡುಗಡೆ ಮಾಡಿಸಬೇಕು ಮತ್ತು ಅಂತಹವರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಪ್ರತಿಭಟನಾನಿರತರು ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದೊಡ್ಡೇರಿ ಕಣಿಮಯ್ಯ, ಸ್ವಾಮಿ, ಮರಳೂರು ಕೃಷ್ಣಮೂರ್ತಿ, ನರಸಯ್ಯ, ಯಲ್ಲಾಪುರ, ಗಾಂಧೀಜಿ, ಲಕ್ಷ್ಮೀಕಾಂತ್‌, ಹೆಗ್ಗೆರೆ ಶ್ರೀನಿವಾಸ್‌ , ನಾಗರಾಜ ಗಜಮಾರನಹಳ್ಳಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!