ಪಾಲಿಕೆ ನಿರ್ಣಯಕ್ಕೆ ಕರುನಾಡ ವಿಜಯಸೇನೆ ಕಾರ್ಯಕರ್ತರ ಕಿಡಿ

ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ನಿರ್ಣಯ ಕೈಬಿಡಿ

147

Get real time updates directly on you device, subscribe now.

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೊಳಿಸಲು ತೆಗೆದುಕೊಂಡಿರುವ ನಿರ್ಣಯ ಹಿಂಪಡೆಯಬೇಕೆಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಸಿ.ಪಿ.ಸುಧೀರ್‌ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಡಿದಂತಹ ಶಿವಾಜಿ ಮಹಾರಾಜರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಥವಾ ಸಾವಿರಾರು ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಮಾಡಿರುವ ಡಾ.ಶಿವಕುಮಾರ ಮಹಾ ಸ್ವಾಮೀಜಿಯವರ ಪ್ರತಿಮೆ ಸ್ಥಾಪಿಸಲು ಜಿಲ್ಲಾಧಿಕಾರಿಗಳು ಆದೇಶಿಸಬೇಕೆಂದು ಒತ್ತಾಯಿಸಿದರು.
ಗಡಿಭಾಗಗಳಲ್ಲಿ ಮರಾಠಿಗರು ಶಿವಾಜಿ ಪ್ರತಿಮೆ ಸ್ಥಾಪಿಸಿ ಕರ್ನಾಟಕದ ವಿರೋಧಿಗಳಂತೆ ಬಿಂಬಿಸುತ್ತಾರೆ ಮತ್ತು ನವಂಬರ್‌ 1 ರ ಕನ್ನಡ ರಾಜ್ಯೋತ್ಸವ ದಿನದಂದು ಮರಾಠಿಗರು ಕರಾಳ ದಿನಾಚರಣೆ ಆಚರಿಸುತ್ತಾರೆ. ಭಾಷೆ, ಬಾಂಧವ್ಯಕ್ಕೆ ಅಡ್ಡಿಪಡಿಸುತ್ತಾರೆ. ಅವರೊಂದಿಗೆ ನಿರಂತರ ಹೋರಾಟವನ್ನು ಮಾಡಿಕೊಂಡು ಕನ್ನಡಿಗರು ಬಂದಿದ್ದಾರೆ. ಹೀಗಿರುವಾಗ ಶಿವಾಜಿ ಮಹಾರಾಜರ ಪ್ರತಿಮೆ ಯಾಕೆ ಸ್ಥಾಪನೆ ಮಾಡಬೇಕು, ನಮ್ಮ ರಾಜ್ಯದಲ್ಲಿ ಹೋರಾಟಗಾರರಿಲ್ಲವೇ ಎಂದು ಪ್ರಶ್ನಿಸಿದರು.
ಶಿವಾಜಿ ಪ್ರತಿಮೆಯನ್ನು ಮಹಾರಾಷ್ಟ್ರದಲ್ಲಿ ಮಾಡಿಕೊಳ್ಳಲಿ ನಮ್ಮದೇನೂ ಅಭ್ಯಂತರವಿಲ್ಲ, ಆದರೆ ಕರ್ನಾಟಕದಲ್ಲಿ ಅದರಲ್ಲೂ ತುಮಕೂರಿನಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ಮಾಡಿದರೆ ನಾವು ವಿರೋಧಿಸುತ್ತೇವೆ. ಜಿಲ್ಲೆಯಲ್ಲಿ ಪ್ರತಿಮೆಗಳ ಸ್ಥಾಪನೆ ಮೊದಲಿನಿಂದಲೂ ನಡೆದಿಲ್ಲ, ಹಿಂದೆ ಬಸವಣ್ಣ, ಅಂಬೇಡ್ಕರ್‌, ಬಾಬೂ ಜಗಜೀವನ್‌ರಾಂ ಪ್ರತಿಮೆಗಳ ಸ್ಥಾಪನೆಗೆ ಶಿಲಾನ್ಯಾಸವಾದರೂ ಅದು ಸಹಕಾರಗೊಂಡಿಲ್ಲ. ಹೀಗಿರುವಾಗ ಶಿವಾಜಿ ಪ್ರತಿಮೆ ಸ್ಥಾಪನೆಗೆ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ತಕ್ಷಣ ಅದನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಪಾಲಿಕೆಯಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಹಿಂಪಡೆಯಲು ಆದೇಶಿಸಬೇಕು, ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗದಂತೆ ತಡೆಯಬೇಕೆಂದು ಸಿ.ಪಿ.ಸುಧೀರ್‌ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಕರುನಾಡ ವಿಜಯಸೇನೆ ಜಿಲ್ಲಾ ಗೌರವಾಧ್ಯಕ್ಷ ಬಿ.ಬಿ.ಮಹದೇವಪ್ಪ ಮಾತನಾಡಿ, ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಶಿವಾಜಿ ಪುತ್ಥಳಿ ನಿರ್ಮಾಣ ಮಾಡಲು ಹೊರಟಿರುವುದು ಖಂಡನೀಯ. ಬೆಳಗಾಂನಲ್ಲಿ ನಮ್ಮ ಕನ್ನಡಿಗರ ಮೇಲೆ ಮರಾಠಿಗರು ದಬ್ಬಾಳಿಕೆ ಮಾಡುತ್ತಲೇ ಬಂದಿದ್ದಾರೆ. ಅಲ್ಲಿನ ಕನ್ನಡಿಗರನ್ನು ವಾಸ ಮಾಡಲು ಬಿಡುತ್ತಿಲ್ಲ, ಇಂತಹ ಸನ್ನಿವೇಶದಲ್ಲಿ ಶಿವಾಜಿ ಪುತ್ಥಳಿಯನ್ನು ತುಮಕೂರಿನಲ್ಲಿ ಮಾಡುವ ಅವಶ್ಯಕತೆ ಇಲ್ಲ ಎಂದರು.
ಶಿವಾಜಿ ಅವರ ಬಗ್ಗೆ ನಮಗೆ ಬಹಳ ಗೌರವವಿದೆ. ಬ್ರಿಟೀಷರ ವಿರುದ್ಧ ಹೋರಾಡಿದ ಮಹಾನ್‌ ವ್ಯಕ್ತಿ, ಅವರು ಹುಟ್ಟಿ ಬೆಳೆದಂತಹ ಮಹಾರಾಷ್ಟ್ರದಲ್ಲಿ ಅವರ ಪುತ್ಥಳಿಯನ್ನು ಮಾಡಿಕೊಳ್ಳಲಿ ನಮ್ಮ ಅಭ್ಯಂತರವೇನಿಲ್ಲ, ಆದರೆ ನಮ್ಮ ಕರ್ನಾಟಕದಲ್ಲಿ ಅದರಲ್ಲೀ ನಮ್ಮ ತುಮಕೂರಿನಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ನಾವು ಬಿಡುವುದಿಲ್ಲ, ಬಸವಣ್ಣ, ಕನಕದಾಸರು, ಅಂಬೇಡ್ಕರ್‌, ವಾಲ್ಮೀಕಿ, ಶಿವಕುಮಾರ ಮಹಾಸ್ವಾಮೀಜಿಗಳ ಪುತ್ಥಳಿ ಮಾಡಲಿ ಅಥವಾ ನಮ್ಮ ಜಿಲ್ಲೆಯಲ್ಲಿ ಸ್ವಾಂತಂತ್ರ್ಯ ಹೋರಾಟಗಾರರ ಪುತ್ಥಳಿ ನಿರ್ಮಾಣ ಮಾಡಲಿ ಅದನ್ನು ಬಿಟ್ಟು ಶಿವಾಜಿ ಪುತ್ಥಳಿ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕರಿಗೆ ಸಲ್ಲಿಸಿದರು. ನಂತರ ಮಹಾನಗರ ಪಾಲಿಕೆಗೆ ತೆರಳಿ ಮೇಯರ್‌ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರುನಾಡ ವಿಜಯಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್‌ ನಾಯಕ್‌, ಯುವ ಘಟಕದ ಅಧ್ಯಕ್ಷ ದೀಕ್ಷಿತ್‌, ನಗರ ಮುಖಂಡರುಗಳಾದ ಸಂದೀಪ್‌, ಜಿಮ್‌ ನಾಗರಾಜ್‌, ಸಂಚಾಲಕ ಹರೀಶ್‌, ರುದ್ರೇಶ್‌, ಆಟೋ ಘಟಕದ ರುದ್ರೇಶ್‌, ಮಹಿಳಾ ರಾಜ್ಯ ಮುಖಂಡರಾದ ಯಾಸ್ಮಿನ್‌ ತಾಜ್‌, ಜಿಲ್ಲಾ ಮುಖಂಡರಾದ ಮಂಜುಳ ಸೇರಿದಂತೆ ಹಲವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!