ಎಸ್‌ಬಿಐ ಸಾಲ ಮೇಳದಲ್ಲಿ ರಿಯಾಯಿತಿ ಕೊಡುಗೆ: ಕಾಂಬ್ಳೆ

202

Get real time updates directly on you device, subscribe now.

ತುಮಕೂರು: ನವರಾತ್ರಿಯ ಶುಭ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ನಾಗರಿಕರಿಗೆ ಸಾಲಮೇಳವನ್ನು ಚರ್ಚ್‌ ವೃತ್ತದ ಬಳಿಯಿರುವ ಎಸ್‌ಬಿಐ ಪ್ರಾದೇಶಿಕ ಕಚೇರಿ-5 ರ ಬ್ಯಾಂಕ್‌ ಆವರಣದಲ್ಲಿ ಅ.8 ಮತ್ತು 9 ರಂದು ಎರಡು ದಿನಗಳ ಕಾಲ ಆಯೋಜಿಸಲಾಗಿದ್ದು, ಶುಕ್ರವಾರ ಆರಂಭಗೊಂಡ ಸಾಲಮೇಳಕ್ಕೆ ಗ್ರಾಹಕರಿಗೆ ಸಾಲ ವಿತರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಾಲಮೇಳಕ್ಕೆ ಚಾಲನೆ ನೀಡಿದ ಎಸ್‌ಬಿಐ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕ ಮಹದೇವ್‌ ಕಾಂಬ್ಳೆ ಮಾತನಾಡಿ, ಹಬ್ಬದ ಪ್ರಯುಕ್ತ ಭಾರತೀಯ ಸ್ಟೇಟ್‌ ಬ್ಯಾಂಕ್‌ ವತಿಯಿಂದ ಎರಡು ದಿನಗಳ ಕಾಲ ಸಾಲಮೇಳ ಆಯೋಜಿಸಲಾಗಿದ್ದು, ಈ ಸಾಲ ಮೇಳದಲ್ಲಿ ಹಲವಾರು ರಿಯಾಯಿತಿ ಕೊಡುಗೆಗಳನ್ನು ಬ್ಯಾಂಕ್‌ ಪ್ರಕಟಿಸಿದೆ ಎಂದರು.
ಎಲ್ಲಾ ನಾಗರೀಕರಿಗೂ ಇದು ಸುಸಂದರ್ಭ, ಹಬ್ಬದ ಸನ್ನಿವೇಶದಲ್ಲಿ ಗೃಹಸಾಲ, ವಾಹನ ಸಾಲ, ಚಿನ್ನಾಭರಣಗಳ ಮೇಲಿನ ಸಾಲ, ಭಾರತ ಸರ್ಕಾರದಡಿಯಲ್ಲಿ ಬರುವ ಪ್ರಧಾನಮಂತ್ರಿ ಸುರಕ್ಷಾ ಸಾಲಯೋಜನೆ ಸೇರಿದಂತೆ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ನೀಡುತ್ತಿದೆ ಎಂದರು.
ಕಳೆದ ಒಂದೂವರೆ ವರ್ಷಗಳಿಂದ ನಮ್ಮ ರಾಷ್ಟ್ರ ಕೊರೊನ ಆವರಿಸಿ ತತ್ತರಿಸಿದ್ದು, ಇದರಿಂದ ಈಗಷ್ಟೇ ಸುಧಾರಿಸುತ್ತಿದೆ. ಕೋವಿಡ್‌ನಿಂದ ಭಾರತ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿತ್ತು. ಅದಕ್ಕೆ ಮುಂಚೂಣಿಯಲ್ಲಿರುವ ನಮ್ಮ ಬ್ಯಾಂಕುಗಳು ಕೂಡ ಅಂದಿನಿಂದ ಇಂದಿನಿವರೆಗೂ ಫ್ರಂಟ್‌ ಲೈನ್‌ ವಾರಿಯರ್ಸ್ ನಂತೆ ಕೆಲಸ ಮಾಡಿ ದೇಶದ ಆರ್ಥಿಕ ಬೆನ್ನೆಲುಬಿಗೆ ಕಾರಣಕರ್ತರಾಗಿದ್ದೇವೆ ಎಂದು ತಿಳಿಸಿದರು.
ಈ ವೇಳೆ ವೈದ್ಯಕೀಯ ಸಿಬ್ಬಂದಿಯವರಿಗೆ ಆರೋಗ್ಯಂ ಎನ್ನುವ ಹೊಸ ಯೋಜನೆಯನ್ನು ಸಾಲದ ರೂಪದಲ್ಲಿ ಕೊಡಲಾಗುತ್ತಿದೆ. ಯಾವುದೇ ಕಾಯಿಲೆಗಳು ಬರದೆ ಇರುವ ರೀತಿಯಲ್ಲಿ ಮುಂಜಾಗ್ರತೆಯಿಂದ ಎಲ್ಲಾ ವೈದ್ಯಕೀಯ ಸಿಬ್ಬಂದಿಯವರು ಕೂಡ ನಮ್ಮ ಎಸ್‌ಬಿಐ ಸಾಲವನ್ನು ಅದರಲ್ಲೂ ಆರೋಗ್ಯಂ ಯೋಜನೆಯಡಿಯಲ್ಲಿ ತೆಗೆದುಕೊಳ್ಳಬಹುದು ಎಂದು ಹೇಳಿದರು.
ಆಸ್ಪತ್ರೆ ಕಟ್ಟಲು, ಡಯಾಗ್ನಸ್ಟಿಕ್‌ ಸೆಂಟರ್‌ ಸ್ಥಾಪನೆ, ಹಳೆಯ ಮಿಷನರಿಗಳನ್ನು ಬದಲಾಯಿಸಲು ಇದೆಲ್ಲದಕ್ಕೂ ಕೂಡ ಎಸ್‌ಬಿಐ ಅತೀ ಕಡಿಮೆ ಬಡ್ಡಿ ದರದಲ್ಲಿ ಕೇಂದ್ರ ಸರ್ಕಾರದ ಆಯೋಜನೆಯೊಂದಿಗೆ ಶೇ.7.95 ರ ಬಡ್ಡಿ ದರದಂತೆ ಸಾಲ ನೀಡಲಾಗುತ್ತಿದೆ. ಗೃಹಸಾಲ ಮತ್ತು ವಾಹನ ಸಾಲವನ್ನು ದೇಶದಲ್ಲಿ ಎಲ್ಲಾ ನಾಗರಿಕರಿಗೂ ಕೂಡ ನೀಡಲಾಗುತ್ತಿದೆ. ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಕೊಡುತ್ತಿದ್ದೇವೆ ಎಂದರು.
ಮುಖ್ಯ ವ್ಯವಸ್ಥಾಪಕ ವಾದಿರಾಜ್‌ ಮಾತನಾಡಿ, ಮುಖ್ಯವಾಗಿ ಎಂಎಸ್‌ಎಂಇ ಸಾಲ ಇದ್ದರೆ ಮಾತ್ರ ದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಬೆಂಗಳೂರು ಬಿಟ್ಟರೆ ತುಮಕೂರೇ ನಾಡಿನ ಹೆಬ್ಬಾಗಿಲಾಗಿದ್ದು, ತುಮಕೂರು ಅಭಿವೃದ್ಧಿಯಾಗಬೇಕಾದರೆ ಅನೇಕ ಕೈಗಾರಿಕೆಗಳು ತುಮಕೂರಿಗೆ ಬರಬೇಕು, ಎಲ್ಲರಿಗೂ ಕೂಡ ಉತ್ತಮವಾಗಿರುವಂತಹ ಅತೀ ಕಡಿಮೆ ಬಡ್ಡಿ ದರದಲ್ಲಿ ನಮ್ಮ ಎಸ್‌ಬಿಐ ಸಾಲ ನಿರ್ವಹಿಸುತ್ತಿದೆ. ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕಿನಲ್ಲೂ ಸಾಲಮೇಳ ಹಾಕಿಕೊಳ್ಳಲಾಗಿದೆ. ಎಲ್ಲಾ ನಾಗರಿಕರು ಈ ಸಾಲಮೇಳದ ಸದುಪಯೋಗ ಪಡಿಸಿಕೊಂಡು ತಮ್ಮ ಬೆಳವಣಿಗೆ, ಬ್ಯಾಂಕಿನ ಬೆಳವಣಿಗೆ ಮತ್ತು ರಾಷ್ಟ್ರದ ಬೆಳವಣಿಗೆಗೆ ಕಾರಣರಾಗಬೇಕೆಂದು ಮನವಿ ಮಾಡಿದರು.
ಸಾಲಮೇಳ ಉದ್ಘಾಟಿಸಿದ ಕೆಎಸ್‌ಆರ್‌ಪಿ ಬೆಟಾಲಿಯನ್‌ 12ರ ಕಮಾಂಡೆಂಟ್‌ ಎಸ್‌.ಯುವಕುಮಾರ್‌ ಮಾತನಾಡಿ, ತುಮಕೂರು ಜಿಲ್ಲೆಯ ನಾಗರಿಕರಿಗಾಗಿ ಎಸ್‌ಬಿಐ ಸಾಲಮೇಳ ಆಯೋಜಿಸಿರುವುದು ಶ್ಲಾಘನೀಯ, ಈ ಸಾಲಮೇಳದಲ್ಲಿ ಆಕರ್ಷಕ ಅತೀ ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ, ವಾಹನಸಾಲ, ವೈಯಕ್ತಿಕ ಸಾಲ, ಚಿನ್ನಾಭರಣಗಳ ಮೇಲಿನ ಸಾಲ ನೀಡುತ್ತಿದ್ದು, ಜಿಲ್ಲೆಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಬಿಐ ಪ್ರಾದೇಶಿಕ ವಿಭಾಗ- 5ರ ವ್ಯವಸ್ಥಾಪಕ ಅಮೋದ್‌ ಜಾಹಗೀರ್‌ದಾರ್‌, ಲೀಡ್‌ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಯಲ್ಲೂರ್ಕರ್‌, ಮುಖ್ಯ ವ್ಯವಸ್ಥಾಪಕ ರಾಬರ್ಟ್‌, ರತ್ನಕುಮಾರ್‌, ವಾದಿರಾಜ್‌, ಸೇರಿದಂತೆ ಎಸ್‌ಬಿಐ ಬ್ಯಾಂಕಿನ ಎಲ್ಲಾ ಅಧಿಕಾರಿ ಸಿಬ್ಬಂದಿವರ್ಗ, ಗ್ರಾಹಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!