ತುಮಕೂರು: ನಗರದ 35ನೇ ವಾರ್ಡ್ ಸಾಬರಪಾಳ್ಯದ ಖಾದರ್ ನಗರದಲ್ಲಿ ರಿಂಗ್ ರಸ್ತೆಯಿಂದ ಬಿ.ಎಚ್.ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀರಕರಣಕ್ಕೆ ಅಡ್ಡಿಯಾಗಿದ್ದ ಮನೆಗಳ ತೆರವು ಕಾರ್ಯಾಚರಣೆಯನ್ನು ಮಹಾನಗರಪಾಲಿಕೆ ವತಿಯಿಂದ ನಡೆಸಲಾಯಿತು.
ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಮತ್ತು ಪಾಲಿಕೆ ಆಯುಕ್ತರಾದ ರೇಣುಕ ಅವರ ಸಮ್ಮುಖದಲ್ಲಿ ಪಾಲಿಕೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಬಟವಾಡಿಯಿಂದ ರೋಟಿಘರ್ ವರೆಗೆ ರಸ್ತೆ ಅಭಿವೃದ್ಧಿ ಬಹಳ ದಿನಗಳಿಂದ ನೆನಗುದಿಗೆ ಬಿದ್ದಿತ್ತು, ರಸ್ತೆ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆಯವರು ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದರೆ ಮೇರೆಗೆ ಇಲ್ಲಿನ ನಿವಾಸಿಗಳ ಮನವೊಲಿಸಿ ಅವರಿಗೆ ಪರಿಹಾರದ ಭರವಸೆ ನೀಡಿದ್ದರ ಹಿನ್ನಲೆಯಲ್ಲಿ ಅವರೇ ಸ್ವಯಂ ಪ್ರೇರಿತವಾಗಿ ಮನೆಗಳನ್ನು ಖಾಲಿ ಮಾಡಿ ರಸ್ತೆ ಅಗಲೀಕರಣಕ್ಕೆ ಸಹಕರಿಸಿದ್ದಾರೆ ಎಂದರು.
ತುಮಕೂರಿನಲ್ಲಿ ಈಗಾಗಲೇ ಬೆಳಗುಂಬ, ಮೆಳೇಕೋಟೆ ರಸ್ತೆ ಅಗಲೀಕರಣ ಆಗಿದ್ದು, ಈ ರಸ್ತೆ ಮಾತ್ರ ಬಾಕಿ ಇತ್ತು, ಇಲ್ಲಿನ ಕೆಲವು ಮನೆಗಳನ್ನು ತೆರವುಗೊಳಿಸಬೇಕು ಎಂಬ ಹಿನ್ನಲೆಯಲ್ಲಿ ಇಲ್ಲಿನ ನಾಗರಿಕರನ್ನು ಭೇಟಿ ಮಾಡಿ ಅವರ ಮನವೊಲಿಸಲಾಗಿದೆ. ಅವರಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ ಅವರಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಇಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆ ಶಾಂತಿಯುವಾಗಿ ನಡೆಯುತ್ತಿದ್ದು, ಸ್ವಯಂ ಪ್ರೇರಿತರಾಗಿ ಅವರೆ ತೆರವುಗೊಳಿಸಿಕೊಂಡು ರಸ್ತೆ ಅಗಲೀಕರಣಕ್ಕೆ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ, ಲೋಕೋಪಯೋಗಿ ಇಲಾಖೆಯಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ರಿಂಗ್ ರಸ್ತೆಯಿಂದ ಬಿ.ಎಚ್.ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಭಾಗದ 24 ಮನೆಗಳು ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿವೆ. ಆ ಮನೆಗಳನ್ನು ತೆರವುಗೊಳಿಸಿಕೊಡಿ ಎಂದು ಲೋಕೋಪಯೋಗಿ ಇಲಾಖೆಯವರು ಮನವಿ ಮಾಡಿದ್ದರ ಮೇರೆಗೆ ಇಲ್ಲಿನ ನಿವಾಸಿಗಳ ಜೊತೆ ಚರ್ಚಿಸಿ ಅವರಿಗೆ ಪರಿಹಾರದ ಭರವಸೆ ನೀಡಿ, ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಇಲ್ಲಿರುವ 24 ಮನೆಗಳಲ್ಲಿ 8 ಮನೆಗಳಿಗೆ ಮಾತ್ರ ಖಾತೆ ಇದೆ, ಉಳಿದ ಮನೆಗಳಿಗೆ ಖಾತೆಯಿಲ್ಲ, ಆದರೆ ದಾಖಲೆಗಳಿವೆ, ಎಲ್ಲರಿಗೂ ಪರಿಹಾರ ನೀಡುವುದಾಗಿ ಭರವಸೆ ನೀಡಲಾಗಿದೆ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಅತಿ ಶೀಘ್ರದಲ್ಲಿ ಪರಿಹಾರ ವಿತರಿಸಲಾಗುವುದು ಎಂದು ಹೇಳಿದರು.
ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ 24 ಮನೆಗಳನ್ನು ತೆರವುಗೊಳಿಸಲಾಗುವುದು, ಈ ಮುಂಚೆಯೇ ಅವರಿಗೆ ತಿಳಿಸಲಾಗಿತ್ತು. ಆದುದರಿಂದ ಅವರೇ ಸ್ವಯಂಪ್ರೇರಿತರಾಗಿ ಮನೆಗಳ ತೆರವು ಮಾಡಿಕೊಳ್ಳುತ್ತಿದ್ದಾರೆ. ಈ ರಸ್ತೆಯನ್ನು 80 ಅಡಿ ರಸ್ತೆ ಅಗಲೀಕರಣ ಮಾಡುವ ಉದ್ಧೇಶವಿತ್ತು. ಆದರೆ 10 ಅಡಿ ಕಡಿಮೆ ಮಾಡಿ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದರ ಮೇರೆಗೆ 10 ಅಡಿ ಕಡಿಮೆ ಮಾಡಿ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ 20 ನೇ ವಾರ್ಡ್‌ನ ಸದಸ್ಯ ಎ.ಶ್ರೀನಿವಾಸ್ ಸೇರಿದಂತೆ ಪಾಲಿಕೆ ಸಿಬ್ಬಂದಿ ಹಾಜರಿದ್ದರು.
ರಸ್ತೆ ಅಗಲೀಕರಣಕ್ಕೆ ಅಡ್ಡವಾಗಿದ್ದ ಮನೆಗಳ ತೆರವು
Get real time updates directly on you device, subscribe now.
Comments are closed.