ಲಾರಿ ಸಂಚಾರದಿಂದ ಸೇತುವೆ ಹಾಳು- ನಾಗರಿಕರ ಆಕ್ರೋಶ

390

Get real time updates directly on you device, subscribe now.

ಕುಣಿಗಲ್‌: ಹೇಮಾವತಿ ನಾಲಾ ವಲಯದ ದೊಡ್ಡಕೆರೆಗೆ ಸೇರಿದ ಮುಖ್ಯನಾಲೆಯ ಸೇತುವೆ ಹಾನಿಯಾದ ಹಿನ್ನೆಲೆಯಲ್ಲಿ ನಾಗರಿಕರು ಹಾನಿಪಡಿಸಿದ ವಾಹನ ತಡೆದು ಪ್ರತಿಭಟಿಸಿ ದುರಸ್ತಿಗೆ ಒತ್ತಾಯಿಸಿದ ಘಟನೆ ನಡೆದಿದೆ.
ಪಟ್ಟಣದ ದೊಡ್ಡಕೆರೆ ಕುಣಿಗಲ್‌ ಹೇಮಾವತಿ ನಾಲಾ ವಲಯದ ಉಪವಿಭಾಗಕ್ಕೆ ಸೇರಿದೆ, ದೊಡ್ಡಕೆರೆಯ ಲಕ್ಷ್ಮೀದೇವಿಹಂತ ಮುಖ್ಯನಾಲೆಯು ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದೆ, ಈ ವಲಯದ ಕೆಲ ಕೃಷಿ ಪ್ರದೇಶ ಪರಿವರ್ತನೆಗೊಂಡು ನಗರೀಕರಣವಾದರೂ ಮುಖ್ಯನಾಲೆಗೆ ಅಡ್ಡಲಾಗಿ ನಾಲಾ ಇಲಾಖೆಯಿಂದ ಸೇತುವೆ ನಿರ್ಮಿಸಲಾಗಿದೆ. ಶುಕ್ರವಾರ ಬೆಳಗ್ಗೆ ಬೃಹತ್‌ ಲಾರಿಯೊಂದು ಅಧಿಕ ಭಾರ ತುಂಬಿಕೊಂಡು ನಾಲೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಮೇಲೆ ಸಂಚರಿಸಿದ ಕಾರಣ ಸೇತುವೆಯ ಒಂದು ಭಾಗ ಹಾನಿಗೊಂಡು ಲಾರಿ ನಾಲೆಯೊಳಗೆ ಮುಗುಚಿ ಸೇತುವೆ ಹಾನಿಯಾಯಿತು.
ಸಾರ್ವಜನಿಕರು ನಾಲಾ ವಲಯದ ಇಲಾಖಾಧಿಕಾರಿಗಳಿಗೆ ಕರೆ ಮಾಡಿದರೂ ಯಾರೊಬ್ಬರು ಸ್ಪಂದಿಸದ ಕಾರಣ ತಾವೆ ಮುಂದೆ ನಿಂತು ಹಾನಿಯಾಗಿರುವ ನಾಲೆ ದುರಸ್ತಿಗೆ ಆಗ್ರಹಿಸಿದರಲ್ಲದೆ ದುರಸ್ತಿಯಾಗುವವರೆಗೂ ಲಾರಿ ಬಿಡಲಾಗದು ಎಂದು ಪಟ್ಟುಹಿಡಿದರು. ಲಾರಿ ಮಾಲೀಕರು ಇತರರು ಸೇರಿಕೊಂಡು ನಾಲಾ ಸೇತುವೆ ದುರಸ್ತಿ ಮಾಡುವ ಭರವಸೆ ನೀಡಿದ ನಂತರ ಲಾರಿ ಬಿಟ್ಟುಕಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಗರಿಕರಾದ ಕುಮಾರ್‌, ನಾಲೆಯು ಹೇಮಾವತಿ ನಾಲಾ ವಲಯದ ಕುಣಿಗಲ್‌ ಉಪವಿಭಾಗದ ವ್ಯಾಪ್ತಿಗೆ ಬರಲಿದ್ದು ಇಲಾಖೆಯ ಅಧಿಕಾರಿಗಳು ಗಮನಹರಿಸಿ ಇಲಾಖೆ ಸ್ವತ್ತನ್ನು ರಕ್ಷಣೆ ಮಾಡಬೇಕಿದೆ. ಹೊಸದಾಗಿ ಕಾಮಗಾರಿ ನಡೆಸುವಾಗ ಮಾತ್ರ ಅಧಿಕಾರಿಗಳು ಗಮನ ಹರಿಸುತ್ತಾರೆ, ನಂತರ ದಿನಗಳಲ್ಲಿ ಇಲಾಖೆಯ ಸ್ವತ್ತಿನ ಕಡೆ ತಿರುಗಿಯು ನೋಡಲ್ಲ, ನಾಲಾವಲಯದ ಅಧಿಕಾರಿಗಳು ಕಾಲುವೆ, ಸೇತುವೆಗಳ ಪರಿಶೀಲನೆ ನಡೆಸಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆಯ ಜಾಗವೂ ಒತ್ತುವರಿಯಾಗಿದೆ, ಅಚ್ಚುಕಟ್ಟು ಪ್ರದೇಶದ ಸೇತುವೆಗಳು ಹಾನಿಯಾಗುತ್ತಿವೆ. ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಿ ನಾಲೆ ಪ್ರದೇಶ, ನಾಲಾ ರಸ್ತೆ ಮತ್ತು ಸೇತುವೆಗಳ ರಕ್ಷಣೆ ಮಾಡುವಂತೆ ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!