ತುಮಕೂರು: ರಾಜ್ಯದಲ್ಲಿ ಬೆಂಗಳೂರನ್ನು ಹೊರತು ಪಡಿಸಿದರೆ ತುಮಕೂರು ಕೈಗಾರಿಕೆಗಳಿಗೆ ಪ್ರಾಶಸ್ತವಾದ ಜಾಗ, ಇಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಹೆಚ್ಚು ಆಸಕ್ತಿ ತೋರಿಸುತ್ತಾರೆ, ಏಷ್ಯಾದಲ್ಲೇ ನಂ.1 ಕೈಗಾರಿಕಾ ಪ್ರದೇಶವಾಗುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ. ಆ ನಿಟ್ಟಿನಲ್ಲಿ ತುಮಕೂರು ಬೆಳವಣಿಗೆ ಹಾದಿಯಲ್ಲಿ ಸಾಗುತ್ತಿದೆ.
ಇನ್ನು ಬೆಂಗಳೂರಿಗೆ ಹತ್ತಿರ ಇರುವ ಕೋಲಾರ ಅಥವಾ ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ದಿನೇ ದಿನೆ ಬೆಳೆಯುತ್ತಿರುವ ಸಿಲಿಕಾನ್ ಸಿಟಿಯಲ್ಲಿನ ಒತ್ತಡ ಕಡಿಮೆಯಾಗಲು ಯೋಜನಾ ಮಂಡಲಿಗೆ ಜಾಗ ಗುರುತಿಸುವಂತೆ ಸೂಚಿಸಲಾಗಿತ್ತು. ಇದರಿಂದ ಬೆಳಗಾವಿ, ದಾವಣಗೆರೆ ಭಾಗದ ಜನರಿಗೆ ಹಾಗೂ ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂದು ಸಂಸದ ಜಿ.ಎಸ್.ಬಸವರಾಜು ತುಮಕೂರಿನಲ್ಲೆ ಏರ್ಪೋರ್ಟ್ ಆಗಬೇಕು ಎಂದು ಒತ್ತಡ ತಂದಿದ್ದರು.
ಈಗಾಗಲೇ ವಸಂತನರಸಾಪುರದಲ್ಲಿ ಮೆಷಿನ್ ಟೂಲ್ಸ್ ಪಾರ್ಕ್, ಫುಡ್ ಪಾರ್ಕ್, ಜಪಾನೀಸ್ ಕೈಗಾರಿಕಾ ಪ್ರದೇಶ ಹೀಗೆ ಹಲವಾರು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರಮುಖ ಕೈಗಾರಿಕೆಗಳು ಇಲ್ಲಿ ಕಾರ್ಯ ನಿರ್ವಹಿಸಲಾರಂಭಿಸಿವೆ.
ರಾಜ್ಯದ 18 ಜಿಲ್ಲೆಗಳ ರಸ್ತೆ ಸಂಪರ್ಕ ತುಮಕೂರು ಮೂಲಕವೇ ಹಾದು ಹೋಗಿದೆ, ಸುಮಾರು 8 ರಾಜ್ಯಗಳ ವಾಹನಗಳು ತುಮಕೂರು ಮೂಲಕವೇ ಹಾದು ಹೋಗಬೇಕಿದೆ. ಮುಂದಿನ ದಿನಗಳಲ್ಲಿ ರಾಜಧಾನಿಯ ಉಪನಗರವಾಗಿ ತುಮಕೂರು ಮಾರ್ಪಾಡು ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವಂತಿದೆ.
ಈಗ ಪ್ರಸ್ತುತ ನಡೆಯುತ್ತಿರುವ ಚರ್ಚೆ ಏರ್ಪೋರ್ಟ್ ಎಲ್ಲಿ ಆದರೆ ಸೂಕ್ತ ಎಂಬುದು, ಈ ಹಿಂದೆ ಕಳ್ಳಂಬೆಳ್ಳ ಬಳಿ ಜಾಗ ಗುರುತಿಸಲಾಗಿತ್ತು, ಹಾಗೇ ಗುಬ್ಬಿಯಲ್ಲಿ ಮಾಡಿದ್ರೆ ಸೂಕ್ತ ಎಂಬ ಮಾತು ಕೇಳಿ ಬಂದಿತ್ತು, ಆದರೆ ಈಗ ಆಗಿರೋದೆ ಬೇರೆ, ಕೇಂದ್ರ ಸರ್ಕಾರ ಜವಳಿ ಪಾರ್ಕ್ಗೆ 1 ಸಾವಿರ ಎಕರೆ ಜಾಗ ಗುರುತಿಸುವಂತೆ ರಾಜ್ಯಸರ್ಕಾರಕ್ಕೆ ಪತ್ರ ಬರೆದಿತ್ತು, ರಾಜ್ಯ ಸರ್ಕಾರ ತುಮಕೂರು ಸೂಕ್ತವೆಂದು ಜಿಲ್ಲಾಧಿಕಾರಿಗಳಿಗೆ ಸ್ಥಳ ಗುರ್ತಿಸಿ ನಕ್ಷೆ ತಯಾರಿಸಿ ಎಂದು ತಿಳಿಸಿತ್ತು, ಅದರಂತೆ ಜಿಲ್ಲಾಡಳಿತವು ತುಮಕೂರು ನಿಮ್ಜೌ ನಿಂದ ಕೇವಲ 4 ಕಿ.ಮೀ, ಬೆಂಗಳೂರು- ಬಾಂಬೆ ಹೆದ್ದಾರಿಯಿಂದಲೂ ಕೇವಲ 4 ಕಿ.ಮೀ ಅಂತರದಲ್ಲಿ 1 ಸಾವಿರ ಎಕರೆ ಜಮೀನು ಗುರುತಿಸಲಾಗಿತ್ತು, ಆದರೆ ಈ ಜಾಗ ಜವಳಿ ಪಾರ್ಕ್ಗೆ ಬೇಡ, ಏರ್ಪೋರ್ಟ್ಗೆ ಸೂಕ್ತ ಎಂದು ಸಂಸದ ಜಿ.ಎಸ್.ಬಸವರಾಜು ಹಠ ಹಿಡಿದು ಕೂತಿದ್ದಾರೆ.
ಏರ್ಪೋರ್ಟ್ ಬಿಡದಿಯಲ್ಲಿ ಮಾಡುವಂತೆ ರಾಮನಗರ ಜನಪ್ರತಿನಿಧಿಗಳು ಲಾಬಿ ಮಾಡುತ್ತಿದ್ದಾರೆ, ರಾಜ್ಯ ಯೋಜನಾ ಇಲಾಖೆ ತುಮಕೂರು ಜಿಲ್ಲೆಯೇ ಏರ್ಪೋರ್ಟ್ಗೆ ಸೂಕ್ತ ಎಂದಿದೆ. ಜಿ.ಎಸ್.ಬಸವರಾಜ್ ತುಮಕೂರಿನಲ್ಲೇ ಆಗಬೇಕು ಎಂದು ರಚ್ಚೆ ಹಿಡಿದಿದ್ದಾರೆ, 1 ಸಾವಿರ ಎಕರೆ ಸರ್ಕಾರಿ ಜಮೀನು ಇದ್ದಲ್ಲಿ ಉಳಿಕೆ ಜಮೀನು ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಲಿದೆ, ಅಂತಾರಾಷ್ಟ್ರೀಯ 2 ನೇ ವಿಮಾನ ನಿಲ್ದಾಣದ ಕನಸು ಕೂಡ ನನಸಾಗಲಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ಓರ್ವ ಸಂಸದ, ಮೂರು ಮಂದಿ ಶಾಸಕರು, ಎಂಎಲ್ಸಿ, ಇಬ್ಬರು ಮಂತ್ರಿ ಇಷ್ಟು ಮಂದಿ ಇದ್ದೂ ತುಮಕೂರಿನಲ್ಲಿ ಏರ್ಪೋರ್ಟ್ ಅಭಿವೃದ್ಧಿಗೆ ಯಾವ ವೇಗ ಸಿಗಲಿದೆ ಎಂಬುದು ಮುಂದಿರುವ ಪ್ರಶ್ನೆ.
ಅಷ್ಟೇ ಅಲ್ಲಾ ಜಿ.ಎಸ್.ಬಸವರಾಜು ಅವರ ದೂರ ದೃಷ್ಟಿತ್ವಕ್ಕೆ ಬ್ರೇಕ್ ಹಾಕಲು ಏನೆಲ್ಲಾ ಹಿನ್ನೆಡೆ ಎದುರಾಗಬಹುದು? ಕಳ್ಳಂಬೆಳ್ಳ ಹಾಗೂ ಗುಬ್ಬಿಯಿಂದ ಏರ್ಪೋರ್ಟ್ ಮಾಡುವ ಜಾಗ ಬೇರೆಡೆ ಸಾಗಿರುವ ಹಿಂದೆ ಜಿಎಸ್ಬಿ ಚಾಣಕ್ಷತನ ಅಡಗಿದ್ಯಾ? ರಾಜಕೀಯ ಅಡಗಿದ್ಯಾ ಎಂಬ ಪ್ರಶ್ನೆ ಕೆಲವು ಜನಪ್ರತಿನಿಧಿಗಳು ಚರ್ಚೆಗೆ ಒಡ್ಡಿದ್ದಾರೆ. ಆದರೆ ಇದು ಅಭಿವೃದ್ಧಿ ವಿಚಾರ ಎಂದು ಸಾಥ್ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಕೈಗಾರಿಕಾ ಪ್ರದೇಶ ವಸಂತನರಸಾಪುರ ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ, ರೈತರು ಜಮೀನನ್ನು ನೀಡಿದ್ದು, ಅವರಿಗೆ ಯಾವುದೇ ಅನ್ಯಾಯವಾಗದೆ ಜಮೀನಿಗೆ ತಕ್ಕ ಪರಿಹಾರ ನೀಡಲಾಗಿದೆ. ಈಗಾಗಲೇ ರೈಲು ಹಳಿ ಬರುತ್ತಿದೆ, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಗತ್ಯವಿದೆ. ಬೆಳಗಾವಿ, ದಾವಣಗೆರೆ ಭಾಗದ ಜನರಿಗೆ ಹಾಗೂ ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಅನುಕೂಲವಾಗಲಿದೆ.
ಕೈಗಾರಿಕಾ ಪ್ರದೇಶವನ್ನು ಮೂರು ಹಂತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 4, 5, 6ನೇ ಹಂತದಲ್ಲಿ ಜಾಗತಿಕ ಮಟ್ಟದ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಲಾಗಿದೆ. ಇಲ್ಲಿ ಕೈಗಾರಿಕೆ ಸ್ಥಾಪನೆಗೆ ಜಪಾನ್, ತೈವಾನ್, ಫ್ರಾನ್ಸ್, ಜರ್ಮನ್ ದೇಶದ ಕೆಲ ಬೃಹತ್ ಕೈಗಾರಿಕೆಗಳು ಆಸಕ್ತಿ ತೋರಿಸಿವೆ. ಆದರೆ `ಜಪಾನ್ ಪಾರ್ಕ್’ ಎಂಬ ಪ್ರತ್ಯೇಕ ಪಾರ್ಕ್ ನಿರ್ಮಾಣ ಮಾಡಿಕೊಡಬೇಕು ಎಂದು ಜಪಾನ್ ಕೈಗಾರಿಕೆಗಳು ಬೇಡಿಕೆ ಇಟ್ಟಿದ್ದು ಅದಕ್ಕೆ ಸ್ಪಂದಿಸಲಾಗಿದೆ.
। ಸುನೀಲ್ ಗೌಡ
ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ತುಮಕೂರು.
Comments are closed.