ತ್ಯಾಜ್ಯದ ಮಲಿನ ನೀರು ಹಿಡಿದು ವಿವಿಧ ಗ್ರಾಮಸ್ಥರ ಪ್ರತಿಭಟನೆ

ಕಲುಷಿತ ಕಾರ್ಖಾನೆಗಳ ಬಂದ್‌ಗೆ ಒತ್ತಾಯ

147

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಅಂಚೆಪಾಳ್ಯ ಕೈಗಾರಿಕೆ ಪ್ರದೇಶದಲ್ಲಿನ ಕೆಲ ಕಾರ್ಖಾನೆಯಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಅಂತಹ ಕಾರ್ಖಾನೆಗಳ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಸೋಮವಾರ ತಾಲೂಕು ಕಚೇರಿ ಮುಂದೆ ವಿವಿಧ ಗ್ರಾಮಗಳ ಗ್ರಾಮಸ್ಥರು ಕಲುಷಿತ ನೀರಿನ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂಭಾಗದಲ್ಲಿ ಜೆಡಿಎಸ್‌ ಅಧ್ಯಕ್ಷರ ನೇತೃತ್ವದಲ್ಲಿ ಸಂಘಟಿತರಾದ ಅಂಚೆಪಾಳ್ಯ, ಶಂಭುದೇವನಹಳ್ಳಿ, ಗೊಟ್ಟಿಕೆರೆ, ಮುದಿ ಗೆರೆಪಾಳ್ಯ ಇತರೆ ಗ್ರಾಮಗಳ ಗ್ರಾಮಸ್ಥರು ಕಾರ್ಖಾನೆ ತ್ಯಾಜ್ಯದ ಮಲಿನ ನೀರು ಹಿಡಿದು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಜೆಡಿಎಸ್‌ ಅಧ್ಯಕ್ಷ ಜಗದೀಶ್‌ ಮಾತನಾಡಿ, ಇಂದು ತಾಲೂಕು ಆಡಳಿತ, ಪೊಲೀಸರು ಪರಿಸರ ಮಾಲಿನ್ಯ ಮಾಡುವ ಕಾರ್ಖಾನೆಯವರ ಗುಲಾಮರಾಗಿದ್ದಾರೆ. ಕೆಲ ಕಾರ್ಖಾನೆಗಳು ಯಾವುದೆ ಕಾನೂನಿನ ಭಯ ಇಲ್ಲದೆ ಅಪಾಯಕಾರಿ ರಸಾಯನಿಕ ತ್ಯಾಜ್ಯ ನೀರು, ಇತರೆ ತ್ಯಾಜ್ಯವನ್ನು ನೇರವಾಗಿ ಹೊರ ಬಿಡುತ್ತಿದ್ದಾರೆ, ಸಂಸ್ಕರಣೆ ಘಟಕಗಳು ನೆಪಮಾತ್ರಕ್ಕೆ ಇವೆ, ಮಲಿನ ನೀರನ್ನು ಕಾರ್ಖಾನೆ ಆವರಣದಲ್ಲಿ ಇರುವ ಕಾರ್ಯ ಸ್ಥಗಿತಗೊಳಿಸಿರುವ ಬೋರ್ ವೆಲ್ ಗಳಿಗೆ ಬಿಡುವ ಮೂಲಕ ಅಂತರ್ಜಲ ಮಾಲಿನ್ಯ ಮಾಡುತ್ತಿದ್ದಾರೆ. ತಾಲೂಕು ಆಡಳಿತ ಕಣ್ಣುಮುಚ್ಚಿ ಕುಳಿತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಪೊಲೀಸರಿಗೆ ಗ್ರಾಮಸ್ಥರು ದೂರು ಕೊಡಲು ಹೋದರೆ ಬೆದರಿಕೆ ಹಾಕಿ ಕಳಿಸುತ್ತಾರೆ, ಕಾರ್ಖಾನೆ ಮಾಲೀಕರ ಧೋರಣೆಗೆ ಒಳಗಾಗಿ ಮಾಗಡಿ ತಾಲೂಕಿನ ಸೋಲೂರು ಠಾಣೆಯಲ್ಲಿ ಬಾದಿತರ ಮೇಲೆ ದೂರು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ, ಇದು ಕುಣಿಗಲ್‌ ಪೊಲೀಸರ ಕಾರ್ಯವೈಖರಿ, ಇನ್ನು ಪರಿಸರ ಇಲಾಖಾಧಿಕಾರಿಗಳು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಎರಡು ವರ್ಷದ ಹಿಂದೆ ಮಾಲಿನ್ಯದ ಪರ ಧ್ವನಿ ಎತ್ತಿದ್ದ ಕೆಲ ಅಧಿಕಾರಸ್ಥ ರಾಜಕಾರಣಿಗಳು ಬೆಂಗಳೂರಿನಲ್ಲಿ ಮಾತಾಡೋಣ ಎಂದು ಕಾರ್ಖಾನೆ ಮಾಲೀಕರ ಕರೆದುಕೊಂಡು ಹೋಗಿ ವ್ಯವಹಾರ ಕುದುರಿಸಿಕೊಂಡರು. ಗ್ರಾಮಸ್ಥರು ಮಾತ್ರ ಇನ್ನು ಪರದಾಡುತ್ತಲೆ ಇದ್ದಾರೆ. ತಾಲೂಕು ಎಂದಿಗೂ ಇಂತಹ ನಾಚಿಕೆಗಟ್ಟ, ಮಾನಗೆಟ್ಟ ರಾಜಕಾರಣಿಗಳ ನೋಡಿರಲಿಲ್ಲ. ಹಲವಾರು ಗ್ರಾಮಗಳ ಅಂತರ್ಜಲ ಮಲಿನವಾದರೂ ತಾಪಂ ಇಒ ಯಾವುದೇ ಕ್ರಮಕೈಗೊಳ್ಳದೆ ಇರುವುದರ ಹಿಂದೆ ಯಾವ ಲಾಭಿ ಕೆಲಸ ಮಾಡುತ್ತಿದೆ ಎಂದು ಜನತೆಗೆ ಹೇಳಬೇಕಿದೆ ಎಂದರು.
ಗ್ರಾಮಸ್ಥರ ತೊಂದರೆ ನೆಪ ಮುಂದಿಟ್ಟುಕೊಂಡು ಕಾರ್ಖಾನೆಯವರೊಂದಿಗೆ ಶಾಮೀಲಾಗುವ ರಾಜಕಾರಣಿಗಳಿಗೆ ಧಿಕ್ಕಾರ, ತಾಲೂಕು ಆಡಳಿತ ಈ ಕೂಡಲೆ ತ್ಯಾಜ್ಯಹೊರಬಿಡುತ್ತಿರುವ ಐದು ಕಾರ್ಖಾನೆ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಬೇಕು, ರೈತರಿಗೆ ಪರಿಹಾರ ನೀಡಬೇಕು, ಮಾಲಿನ್ಯ ತಡೆಗೆ ಸೂಕ್ತ ಕ್ರಮಕೈಗೊಳ್ಳದೆ ಇದ್ದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದರು.
ತಹಶೀಲ್ದಾರ್‌ ಮಹಾಬಲೇಶ್ವರ್‌ ಮನವಿ ಸ್ವೀಕರಿಸಿ, ಈಗಾಗಲೆ ಒಂದು ಕಾರ್ಖಾನೆ ಮುಚ್ಚಿ ಪ್ರಕರಣ ದಾಖಲು ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಉಳಿದ ಕಾರ್ಖಾನೆಯವರಿಗೂ ನೋಟೀಸ್‌ ಜಾರಿ ಮಾಡಿ ಸಂಬಂಧಪಟ್ಟ ಇಲಾಖೆಯೊಂದಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತಾಪಂ ಮಾಜಿಸದಸ್ಯ ಶಿವರಾಜು, ಜೆಡಿಎಸ್‌ಮಾಜಿ ಅಧ್ಯಕ್ಷ ಕೆ.ಎಲ್‌.ಹರೀಶ್‌, ಪ್ರಮುಖರಾದ ಮಹಾದೇವ, ರೇವಣ್ಣಗೌಡ, ರವಿಚಂದ್ರ, ಶಿವಣ್ಣ, ಮುನಿಸ್ವಾಮಿ, ರಾಜಣ್ಣ, ಸುನಿಲ್‌, ಪ್ರಕಾಶ, ಶಿವರಾಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!