ಮದ್ಯದಂಗಡಿ ತೆರೆಯದಂತೆ ಗ್ರಾಮಸ್ಥರ ಪ್ರತಿಭಟನೆ

424

Get real time updates directly on you device, subscribe now.

ಮಧುಗಿರಿ: ತಾಲ್ಲೂಕಿನ ಚಿಕ್ಕದಾಳವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ವಿಠಲಪುರ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದು ಬೇಡ ಎಂದು ಗ್ರಾಮಸ್ಥರು ಸೋಮವಾರ ಗ್ರಾಮದಲ್ಲಿ ಪ್ರತಿಭಟಿಸಿದ ಘಟನೆ ನಡೆಯಿತು.
ವಿಠಲಪುರ ಪಕ್ಕದ ಸೀಮಾಂಧ್ರಕ್ಕೆ ಹೊಂದಿಕೊಂಡಿದ್ದು ಸೀಮಾಂಧ್ರದ ಪೆನುಗೊಂಡ, ಹಿಂದೂಪುರ, ಮಡಕಶಿರಾ ತಾಲ್ಲೂಕಿನಿಂದ ನೂರಾರು ಜನರು ಮದ್ಯ ವ್ಯಸನಿಗಳು ಆಗಮಿಸಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಾರೆ, ಇದರಿಂದ ಗ್ರಾಮದಲ್ಲಿರುವ ಮಹಿಳೆಯರು ಮಕ್ಕಳು ಎಲ್ಲರಿಗೂ ಸಾಕಷ್ಟು ತೊಂದರೆಯಾಗಲಿದೆ. ಸ್ಥಳೀಯ ಗ್ರಾಪಂ ನವರಾಗಲಿ, ಸಂಬಂಧಪಟ್ಟ ಇಲಾಖೆಯವರು ಪರವಾನಗಿ ನೀಡಬಾರದು. ವಿಠಲಾಪುರ ಗ್ರಾಮ ಮಧುಗಿರಿ ತಾಲೂಕಿನ ದೇವರ ಮೂಲೆಯಲ್ಲಿನ ಒಂದು ಚಿಕ್ಕ ಹಳ್ಳಿ, ಈ ಹಳ್ಳಿಯಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜನಾಂಗದ 125 ಕುಟುಂಬಗಳು ಇದ್ದು ಇಲ್ಲಿಯವರೆಗೂ ನೆಮ್ಮದಿಯ ಜೀವನ ಮಾಡುತ್ತಿರುತ್ತಿವೆ. ಇಂಥ ಚಿಕ್ಕ ಗ್ರಾಮದಲ್ಲಿ ಮದ್ಯದ ಅಂಗಡಿಗಳನ್ನು ಕೊಡಿಗೇನಹಳ್ಳಿ ವೈನ್ಸ್ ಹೆಸರಿನಲ್ಲಿ ಮಾಧುಸ್ವಾಮಿ, ಚಂದ್ರಶೇಖರ್‌ ಎಂಬುವವರು ತೆರೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಈ ರೀತಿ ಮದ್ಯದ ಅಂಗಡಿ ತೆರೆಯಲು ಪ್ರಯತ್ನ ಮಾಡಿದರೆ ಸದರಿ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುವುದಿಲ್ಲ, ಈ ಹಿಂದೆ ಕವಣದಾಲ ಗ್ರಾಮದ ನಾಗೇಶ್‌ ಎಂಬುವರು ಮದ್ಯದ ಅಂಗಡಿ ತೆರೆಯಲು ನಿರಂತರ ಪ್ರಯತ್ನ ಪಟ್ಟರು ಸಹ ಅದು ರದ್ದಾಗಿದೆ.
ಸದರಿ ವಿಠಲಪುರ ಗ್ರಾಮವು ಮಡಕಶಿರಾ, ಹಿಂದೂಪುರ ಮತ್ತು ಪೆನಗೊಂಡ ಮಧ್ಯಭಾಗದಲ್ಲಿದೆ, ಈ ಗ್ರಾಮದವರು ಕೂಲಿ ನಂಬಿ ಜೀವನ ಮಾಡುತ್ತಿದ್ದಾರೆ, ಮದ್ಯದಂಗಡಿ ತೆರೆದರೆ ಕುಟುಂಬಗಳು ಬೀದಿಗೆ ಬೀಳುವ ಸಂಭವವೇ ಹೆಚ್ಚಾಗಿದೆ, ಜಮೀನುಗಳಲ್ಲಿ ಮದ್ಯದ ಬಾಟಲ್ ಗಳ ಗಾಜಿನ ಚೂರುಗಳು ಬೀಳುವ ಸಂಭವವಿರುತ್ತದೆ, ಇದರಿಂದಾಗಿ ಜಮೀನಿನ ಫಲವತ್ತತೆ ಕಡಿಮೆಯಾಗುತ್ತದೆ, ಇಲ್ಲಿನ ಸಣ್ಣ ಸಣ್ಣ ಮಕ್ಕಳು ಸಹ ಕುಡಿತಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುವ ಸ್ಥಿತಿ ಉಂಟಾಗುತ್ತದೆ. ಮದ್ಯದ ಅಂಗಡಿ ತೆರೆಯಲು ಯಾವುದೇ ಕಾರಣಕ್ಕೂ ಪರವಾನಿಗೆ ನೀಡಬಾರದು, ನೀಡಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮಸ್ಥರಾದ ಸುಬ್ರಹ್ಮಣ್ಯ, ಗಿರೀಶ, ಮಧುಸೂದನ್‌, ರವಿ, ಗಂಗಾಧರ್‌, ಮನೋಹರ, ನರಸಿಂಹಮೂರ್ತಿ, ರಾಮಾಂಜಿ, ಮಹಿಳೆಯರಾದ ರತ್ನಮ್ಮ, ಪ್ರಮೀಳಾ, ಕಲಾವತಿ, ಲಕ್ಷ್ಮಮ್ಮ ಪ್ರಭಾಕರ್‌ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!