ಶಿರಾ: ಶಿರಾ ತಾಲ್ಲೂಕು ಸೇರಿದಂತೆ ನಗರದಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವಾರು ಕೆರೆ, ಕಟ್ಟೆ, ಬ್ಯಾರೇಜ್, ಚೆಕ್ ಡ್ಯಾಂಗಳು ತುಂಬಿದ್ದು, ಕಳ್ಳಂಬೆಳ್ಳ ಹಾಗೂ ಶಿರಾ ದೊಡ್ಡ ಕೆರೆಗಳು ಕೋಡಿ ಹರಿದಿದೆ. ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಕಾಲುವೆ ಮೂಲಕ ನೀರು ಹರಿಸಲು ಚಾಲನೆ ನೀಡಲಾಗಿದ್ದು, ಜನರಲ್ಲಿ ಸಂತಸ ಮೂಡಿದೆ.
ಶಿರಾ ತಾಲ್ಲೂಕು ಕಸಬಾ ಹೊಬಳಿಯ ದ್ವಾರಾಳು ಬಳಿ ನಿರ್ಮಿಸಿರುವ ಚೆಕ್ ಡ್ಯಾಂ ಕಂ ಕಾಸ್ ವೇ, ಲಕ್ಷ್ಮೀಸಾಗರ ಹಳ್ಳದ ತಾವರೆಕೆರೆ ಹತ್ತಿರ ಇರುವ ಪಿಕಪ್, ಬೋರಸಂದ್ರ ಬಳಿ ಇರುವ ಚೆಕ್‌ಡ್ಯಾಂ, ಕಳ್ಳಂಬೆಳ್ಳ ಹೋಬಳಿಯ ಟಿ.ರಂಗನಹಳ್ಳಿ ಹತ್ತಿರ ತರೂರು ಹೊಸಕೆರೆಗೆ ಬಳಿ ಇರುವ ಚೆಕ್ ಡ್ಯಾಂ, ಹಾಲೇನಹಳ್ಳಿ ಗ್ರಾಮದ ಹತ್ತಿರ ಕುಂಬಾರಹಳ್ಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‌ಡ್ಯಾಂ, ಹಂಡೆ ಚಿಕ್ಕನಹಳ್ಳಿ ಹತ್ತಿರ ಚಿತ್ತಾರ ಹಳ್ಳದ ಚೆಕ್ ಡ್ಯಾಂ, ಮಲ್ಲಶೆಟ್ಟಿಹಳ್ಳಿ ಪಿಕಪ್, ಕಟಾವೀರನಹಳ್ಳಿ ಬ್ರಿಡ್‌್ಜ ಕಂ ಬ್ಯಾರೇಜ್, ಅಮಲಗೊಂದಿ ಬ್ರಿಡ್ಜ್ ಕಂ ಬ್ಯಾರೇಜ್, ಹುಂಜಿನಾಳು ಹಳ್ಳದ ಚೆಕ್ ಡ್ಯಾಂ ಕಂ ಬ್ರಿಡ್‌್ಜ, ನಾದೂರು ಹತ್ತಿರ ಇರುವ ಕಾಮಗೊಂಡನಹಳ್ಳಿ ಚೆಕ್ ಡ್ಯಾಂ, ದೊಡ್ಡಬಾಣಗೆರೆ ಬಳಿ ವಡ್ಡನಕಟ್ಟೆ ಬಳಿ ಇರುವ ಚೆಕ್ ಡ್ಯಾಂಗಳು ತುಂಬಿ ಹರಿದಿವೆ ಹಾಗೂ ತಾಲ್ಲೂಕಿನ ಹಲವು ಸಣ್ಣಪುಟ್ಟ ಕೆರೆಕಟ್ಟೆಗಳು ತುಂಬಿ ಹರಿದಿರುವುದರಿಂದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತಮ ಮಳೆ ಶಿರಾ ತಾಲ್ಲೂಕಿನಲ್ಲಿ ಕಳೆದ ಅಕ್ಟೋಬರ್ 6 ರಿಂದ 12 ರವರೆಗೆ ಉತ್ತಮ ಮಳೆಯಾಗಿದ್ದು, ಕಸಬಾ 169 ಮಿ.ಮೀ, ಬುಕ್ಕಾಪಟ್ಟಣ 149 ಮಿ.ಮೀ, ಗೌಡಗೆರೆ 110 ಮಿ.ಮೀ, ಹುಲಿಕುಂಟೆ 142 ಮಿ.ಮೀ, ಕಳ್ಳಂಬೆಳ್ಳ ಹೋಬಳಿಯಲ್ಲಿ 235 ಮಿ.ಮೀ. ಮಳೆಯಾಗಿದೆ.
ಕಳ್ಳಂಬೆಳ್ಳ ಕೆರೆಗೆ ಬಾಗಿನ ಅರ್ಪಣೆ: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹಾಗೂ ಶಿರಾ ದೊಡ್ಡ ಕೆರೆ ತುಂಬಿ ಹರಿದಿದ್ದು, ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ರೇಷ್ಮೆ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ತಹಶೀಲ್ದಾರ್ ಮಮತ ಅವರು ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.
ಮದಲೂರು ಕೆರೆಗೆ ಹರಿದ ನೀರು: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆ ತುಂಬಿ ಕೋಡಿ ಹರಿದಿದ್ದು, ಮದಲೂರು ಕೆರೆಗೆ ಕಾಲುವೆ ಮೂಲಕ ನೀರು ಹರಿಸಲು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ರೇಷ್ಮೆ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ನಾರು ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಚಾಲನೆ ನೀಡಿದರು.
ಚಿದಾನಂದ್ ಎಂ.ಗೌಡ ಭೇಟಿ: ಶಿರಾ ತಾಲ್ಲೂಕಿನಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಯಾದಲಡಕು ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿದ್ದು ಈ ಸಂದರ್ಭದಲ್ಲಿ ಕೆರೆ ಒಡೆದು ರಾತ್ರಿಯಿಡೀ ನೀರು ಪೋಲಾಗಿದೆ. ಈ ವಿಷಯ ತಿಳಿದ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಸ್ಥಳಕ್ಕೆ ಕರೆಸಿ ತ್ವರಿತವಾಗಿ ಕೆರೆ ಸರಿಪಡಿಸಿ ನೀರು ಪೋಲಾಗದಂತೆ ಸೂಚಿಸಿದರು.
Get real time updates directly on you device, subscribe now.
Prev Post
Next Post
Comments are closed.