ಪರಿಹಾರ ನೀಡದೆ ರಸ್ತೆ ಕಾಮಗಾರಿ- ಗ್ರಾಮಸ್ಥರಿಂದ ಅಡ್ಡಿ

ಭೂಮಿ ನೀಡಿದ ಮಹಿಳೆಗೆ ಪರಿಹಾರಕ್ಕೆ ಆಗ್ರಹ

400

Get real time updates directly on you device, subscribe now.

ಗುಬ್ಬಿ: ತುಮಕೂರಿನಿಂದ ಶಿವಮೊಗ್ಗ ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಗುಬ್ಬಿ ತಾಲ್ಲೂಕಿನಲ್ಲಿ ಸಾಕಷ್ಟು ರೈತರು ತಮ್ಮ ಜಮೀನು ಮನೆ ಮಠಗಳನ್ನು ರಸ್ತೆ ಕಾಮಗಾರಿಗೆ ಕಳೆದುಕೊಂಡಿರುವುದು ಒಂದು ಕಡೆಯಾದರೆ ಅವರಿಗೆ ಸರಿಯಾದ ಪರಿಹಾರ ಹಣ ನೀಡದೆ ಇರುವುದು ಮತ್ತೊಂದು ಕಡೆ ಸಮಸ್ಯೆಯಾಗಿ ಸೃಷ್ಟಿಯಾಗುತ್ತಿದೆ.
ತಾಲ್ಲೂಕಿನ ಸಿಂಗೋನಹಳ್ಳಿ ಗ್ರಾಮದ ಸರ್ವೆ ನಂಬರ್‌ 101 ರಲ್ಲಿನ ರೈತ ಮಹಿಳೆ ಗಂಗಮ್ಮ ಅವರಿಗೆ ಸೇರಿದ 1.1ಎಕರೆ ಜಮೀನನ್ನು ರಸ್ತೆ ಕಾಮಗಾರಿಗೆ ವಶಪಡಿಸಿಕೊಂಡು ಪರಿಹಾರ ಒದಗಿಸುವಲ್ಲಿ ಮಾತ್ರ ತಾರತಮ್ಯ ಎಸೆಯಲಾಗಿದೆ ಎಂದು ರೈತ ಮಹಿಳೆ ಗಂಗಮ್ಮ ತಮ್ಮ ಸಮಸ್ಯೆ ಹೇಳಿಕೊಂಡರು.
ನಾವು ಪುರಾತನ ಕಾಲದಿಂದಲೂ 3.5 ಎಕರೆ ಜಾಗದಲ್ಲಿ ಕೃಷಿ ಮಾಡುತ್ತಿದ್ದೇವೆ, ಆದರೆ ಅಧಿಕಾರಿಗಳ ಪ್ರಕಾರ ನಮ್ಮ 2 ಎಕರೆ ಜಾಗವೇ ಕಾಣುತ್ತಿಲ್ಲ ಎಂದು ತೋರುತ್ತಿರುವುದು ನೋಡಿದಾಗ ಆಶ್ಚರ್ಯವಾಗುತ್ತದೆ, ಇದೆ ಅಲ್ಲದೆ ರಸ್ತೆ ಕಾಮಗಾರಿ ಮಾಡುವ ಭಾಗದಲ್ಲಿ ಕೇವಲ 29 ಗುಂಟೆಗೆ ಹಣ ಹಾಕಲಾಗಿದೆ, ಮಿಕ್ಕ ಹಣ ಹಾಕಿಲ್ಲ, ಇದರಿಂದ ನಮಗೆ ಅಧಿಕಾರಿಗಳು ಅನ್ಯಾಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ಪ್ರಾಧಿಕಾರ ಹಾಗೂ ವಿಶೇಷಭೂಸ್ವಾಧೀನಾಧಿಕಾರಿಗಳು ನಡೆಸಿರುವ ಸರ್ವೇ ಕಾರ್ಯದಲ್ಲಿ ಆಗಿರುವ ಪ್ರಮಾದದಿಂದ 1.1 ಎಕರೆ ಬದಲಾಗಿ ಕೇವಲ ಇಪ್ಪತ್ತು ಗುಂಟೆಗೆ ಮಾತ್ರ ಪರಿಹಾರ ನೀಡಿದ್ದು ಬಾಕಿ ಹನ್ನೆರಡು ಗುಂಟೆಗೆ ನೀಡಬೇಕಾಗಿದ್ದ ಪರಿಹಾರ ಹಣದ ವಿಚಾರವಾಗಿ ಕಳೆದ 4 ವರ್ಷದಿಂದ ಅಲೆದಾಡಿದ್ದಾರೆ, ಮುಗ್ಧ ಜನರ ಭೂಮಿಗೆ ಬೆಲೆ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಈ ವಿಚಾರವಾಗಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್‌ ಬಿ.ಆರತಿ ಪ್ರಾಧಿಕಾರದ ಸವೇರ್ಯಗಳಾದ ಬೈರಪ್ಪ, ಬಸವರಾಜು ಮತ್ತು ಸಿಪಿಐ ನದಾಫ್‌, ಪಿಎಸ್‌ಐ ನಟರಾಜ್‌ ಭೇಟಿ ನೀಡಿ ಕಾಮಗಾರಿ ಪ್ರಾರಂಭಿಸಲು ಮುಂದಾದರು, ಈ ಸಂದರ್ಭ ರಸ್ತೆ ಕಾಮಗಾರಿ ಸಂತ್ರಸ್ತ ರೈತ ಮಹಿಳೆ ಗಂಗಮ್ಮ ಪರವಾಗಿ ಸ್ಥಳೀಯರು ಅಡ್ಡಿಪಡಿಸಿ ಚರ್ಚಿಸಿದರು.
ನಂತರ ಸ್ಥಳಕ್ಕಾಗಮಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಮುಖಂಡರಾದ ಹೇರೂರು ನಾಗರಾಜ್‌, ಶ್ರೀನಿವಾಸ್‌, ಲೋಕೇಶ್‌, ವಾಲ್ಮೀಕಿ ಸಮಾಜದ ಅಧ್ಯಕ್ಷ ಗುರುಸ್ವಾಮಿ ಸೇರಿದಂತೆ ಕೆಲ ಮುಖಂಡರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸ್ಥಳದಲ್ಲಿದ್ದ ಪಟ್ಟಣ ಪಂಚಾಯ್ತಿ ಸದಸ್ಯ ಕೃಷ್ಣಮೂರ್ತಿ ಹೆದ್ದಾರಿ ಪ್ರಾಧಿಕಾರ ವಿಶೇಷಭೂಸ್ವಾಧೀನಾಧಿಕಾರಿಗಳಿಗೆ ಫೋನ್‌ ಮೂಲಕ ಇದರ ಬಗ್ಗೆ ತಿಳಿಸಿದರು, ನಂತರ ಬೈರಪ್ಪ ಮತ್ತು ಬಸವರಾಜು ಅವರೊಂದಿಗೆ ಚರ್ಚೆ ನಡೆಸಿ ಸರ್ವೆ ಕಾಲದಲ್ಲಿ ಆಗಿರುವ ದೋಷವನ್ನು ಮನವರಿಕೆ ಮಾಡಿಕೊಟ್ಟು ಸಂತ್ರಸ್ತ ರೈತ ಮಹಿಳೆ ಗಂಗಮ್ಮ ಅವರಿಗೆ ಬಾಕಿ ಬರಬೇಕಾದ ಪರಿಹಾರವನ್ನು ಶೀಘ್ರದಲ್ಲೇ ಒದಗಿಸುವಂತೆ ಒತ್ತಾಯಿಸಿದರು.
ನಂತರ ಚರ್ಚೆ ಆಲಿಸಿದ ಅಧಿಕಾರಿಗಳು ಸಂತ್ರಸ್ತೆಗೆ ದಾಖಲೆಯೊಂದಿಗೆ ಕಚೇರಿಗೆ ಬಂದ ನಂತರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!