ತುಮಕೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ವಸೂಲಾತಿಯಲ್ಲಿ ಪ್ರಗತಿ ಕುಂಠಿತವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾನೂನು, ಸಂಸದೀಯ, ವ್ಯವಹಾರಗಳು, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ತೆರಿಗೆ ವಸೂಲಾತಿಗೂ ವರ್ಷಾಂತ್ಯದ ಏಪ್ರಿಲ್, ಮೇ ತಿಂಗಳಲ್ಲಿ ನಿಗದಿತ ಸಾಧನೆ ಮಾಡುವುದಾಗಿ ಕಥೆ ಓದಬಾರದು, ನಿಗದಿತ ಗುರಿಯಂತೆ ಕಡ್ಡಾಯವಾಗಿ ಕರ ವಸೂಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಂದುವರೆದ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರು, ಆಸ್ತಿ, ಜಾಹಿರಾತು ತೆರಿಗೆ ಶುಲ್ಕ ಹಾಗೂ ಅಂಗಡಿ ಮಳಿಗೆಗಳ ಬಾಡಿಗೆಯನ್ನು ನಿರ್ಧಿಷ್ಟ ಗುರಿಯಂತೆ ವಸೂಲಿ ಮಾಡಬೇಕು, ಇನ್ನು ಮೂರು ತಿಂಗಳಲ್ಲಿ ಬೇಡಿಕೆಗೆ ಅನುಗುಣವಾಗಿ ತೆರಿಗೆ ವಸೂಲಿ ಮಾಡದಿದ್ದರೆ ಸಂಬಂಧಿಸಿದ ಅಧಿಕಾರಿಗಳು ಮನೆಗೆ ಹೋಗಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ವೇಳೆ ಸಂಸದ ಎ.ನಾರಾಯಣಸ್ವಾಮಿ ಧ್ವನಿಗೂಡಿಸಿ, ತೆರಿಗೆ ವಸೂಲಾತಿ ವಿಳಂಬ ಧೋರಣೆ ಸರಿಯಲ್ಲ, ಅಧಿಕಾರಿಗಳು ಸಮರ್ಪಕವಾಗಿ ವಸೂಲಿ ಮಾಡಬೇಕು, ತೆರಿಗೆ ಕಟ್ಟದವರಿಗೆ ನೋಟೀಸ್ ನೀಡಬೇಕು, ಆದಾಗ್ಯೂ ತೆರಿಗೆ ಕಟ್ಟದಿದ್ದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸುವ ಪ್ರಧಾನ ಮಂತ್ರಿಗಳ ಮಹತ್ವದ ಜಲಜೀವನ್ ಮಿಷನ್ ಯೋಜನೆಯೂ ಉದಾಸೀನತೆಯಲ್ಲಿ ನಡೆಯುತ್ತಿದೆ, ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಬಡತನ ರೇಖೆಗಿಂತ ಕೆಳೆಗಿರುವ ಕುಟುಂಬದ ಸದಸ್ಯರು ಯಾರಾದರೂ ಮರಣ ಹೊಂದಿದರೆ ಅವರ ಅಂತ್ಯಸಂಸ್ಕಾರಕ್ಕಾಗಿ ನೆರವು ನೀಡುವ ಯೋಜನೆ ವರ್ಷಾನುಗಟ್ಟಲೆಯಿಂದ ಹಳ್ಳ ಹಿಡಿದಿದ್ದು, ಯೋಜನೆಯ ಸಹಾಯಧನ ಮೂರ್ನಾಲ್ಕು ವರ್ಷಗಳಾದರೂ ಕುಟುಂಬದವರ ಪಾಲಿಗೆ ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವೃದ್ಧಾಪ್ಯ, ವಿಧವಾ, ಅಂತ್ಯಸಂಸ್ಕಾರ ಸೇರಿದಂತೆ ಇತರೆ ಎಲ್ಲಾ ಯೋಜನೆಗಳ ಸೌಲಭ್ಯವನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು, ಶಿರಾ ತಾಲೂಕು ಒಂದರಲ್ಲೇ 6037 ಅಂತ್ಯಸಂಸ್ಕಾರದ ನೆರವಿನ ಅರ್ಜಿಗಳು ಬಾಕಿ ಉಳಿದಿದ್ದು, ಜಿಲ್ಲೆಯಲ್ಲಿ ಬಾಕಿಯಿರುವ ಎಲ್ಲಾ ಫಲಾನುಭವಿಗಳಿಗೆ ಯೋಜನಾ ಸೌಲಭ್ಯವನ್ನು ಶೀಘ್ರ ತಲುಪಿಸಲು ಕ್ರಮಕೈಗೊಳ್ಳುವಂತೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ನಿಯಮಿತವಾಗಿ ಕಂದಾಯ ಮತ್ತು ಪಿಂಚಣಿ ಅದಾಲತ್ ನಡೆಸಬೇಕು. ಅದಾಲತ್ ನಲ್ಲಿ ಸ್ವೀಕೃತವಾಗಿರುವ 3026 ಅರ್ಜಿಗಳ ಪೈಕಿ ಬಾಕಿ ಉಳಿರುವ 223 ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ದಿಬ್ಬೂರಿನಲ್ಲಿ ನಿರ್ಮಿಸಿ ಹಂಚಿಕೆಯಾಗಿರುವ ವಸತಿಗಳ ನಿವಾಸಿಗಳು ಆರಂಭದಿಂದಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಮೂಲಭೂತ ಸೌಕರ್ಯ ಒದಗಿಸಿಲ್ಲ, ಸಮಸ್ಯೆ ಸರಿಪಡಿಸುವಂತೆ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ, ನಿವಾಸಿಗಳ ಸಮಸ್ಯೆ ಬಗೆಹರಿಸಿ ಸಮರ್ಪಕ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಹೇಮಾವತಿ ನಾಲಾವಲಯದ ಬಿಕ್ಕೆಗುಡ್ಡ ನೀರಾವರಿ ಯೋಜನೆಗೆ ಸಂಬಂಧಿಸಿದ ಭೂ ಸ್ವಾಧೀನ ಪ್ರಕ್ರಿಯೆ ಕಳೆದ 12-13 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಭೂ ಸ್ವಾಧೀನ ಪ್ರಕ್ರಿಯೆಗೆ ರೈತರನ್ನು ಒಪ್ಪಿಸಿ ಕೆಲಸಕ್ಕೆ ಅನುವು ಮಾಡಿಕೊಟ್ಟರೂ ಯೋಜನೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಕಾರ್ಯಗತವಾಗದೆ ಹಳ್ಳಹಿಡಿದಿದೆ ಎಂದು ಸಚಿವರು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಪ್ರತಿ ಕೆಡಿಪಿ ಸಭೆಯಲ್ಲೂ ಬಿಕ್ಕೆಗುಡ್ಡ ನೀರಾವರಿ ವಿಷಯ ಪ್ರಗತಿ ಪರಿಶೀಲನೆಯಾದರೂ ಯೋಜನಾ ಪ್ರಗತಿ ಪೂರ್ಣವಾಗಿಲ್ಲ. ಕೆಲಸಾನೇ ಆಗಿಲ್ಲ ಎಂದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೌರವವಿಲ್ಲವಾ ಎಂದರು.
ಈ ವೇಳೆ ಸಂಬಂಧಿಸಿ ಇಂಜಿನಿಯರ್ ಯೋಜನೆ ಕುರಿತು ಮಾಹಿತಿ ಒದಗಿಸಲು ಮುಂದಾದಾಗ ಶಟ್ ಅಪ್ ಎಂದ ಜಿಲ್ಲಾ ಉಸ್ತುವಾರಿ ಸಚಿವರು, ಕೆಡಿಪಿ ಸಭೆಯಲ್ಲಿ ಆದ ನಿರ್ಣಯದನುಸಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸರ್ಕಾರಕ್ಕೆ ಹೇಳ್ತೇವೆ, ಕೆಡಿಪಿ ಸಭೆಯನ್ನು ಏಕೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಹೇಳಿದರು.
ಹಾಗಲವಾಡಿ ನೀರಾವರಿ ಯೋಜನೆಯೂ ಇದೇ ಸ್ಥಿತಿಯಲ್ಲಿದೆ, ಯಾವುದೇ ಕೆಲಸವಾಗಿಲ್ಲ ಎಂದ ಸಚಿವರು ತಿರುಗಾಡಕ್ಕೀದ್ದೀರಾ ಗೌರ್ನಮೆಂಟ್ ಆಫೀಸರ್ಸ್ ಎಂದು ಕೋಪಗೊಂಡರು.
ಈ ವೇಳೆ ಸಂಸದ ಎ.ನಾರಾಯಣ ಸ್ವಾಮಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರೂ ಕೆಲಸವಾಗಲಿಲ್ಲ ಎಂದರೆ ಹೇಗೆ? ಕೆಲಸ ಮಾಡದಿದ್ದರೆ ಮನೆಯಲ್ಲಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಹೇಮಾವತಿ ನಾಲಾ ವಲಯದ ಪ್ರಗತಿ ಪರಿಶೀಲನೆ ನಡೆಸಿ ಕೈಗೊಂಡಿರುವ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಮ್, ವೀರಭದ್ರಯ್ಯ, ವೆಂಕಟರಮಣಪ್ಪ, ಶಿವಲಿಂಗೇಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಪರ್ಸೆಂಟೇಜ್ ಬಗ್ಗೆ ಡಿಕೆಶಿ ಉತ್ತರಿಸಲಿ: ನಾರಾಯಣಸ್ವಾಮಿ
ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರ್ಸೆಂಟೇಜ್ ವಿಚಾರ ಶಿವಕುಮಾರ್ ಪಾಲಿಕೆ ನೈತಿಕ ಪ್ರಶ್ನೆ, ಈ ಪ್ರಶ್ನೆಗೆ ರಾಜ್ಯದ ಜನತೆಗೆ ಡಿ.ಕೆ.ಶಿವಕುಮಾರ್ ಉತ್ತರ ಕೊಡಬೇಕು ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ತಮ್ಮದೇ ವೇದಿಕೆ ಮೇಲೆ ತಮ್ಮದೆ ಮುಖಂಡರು ತಮ್ಮ ಮೇಲೆ ಆರೋಪ ಮಾಡಿದಾಗ ಡಿ.ಕೆ.ಶಿವಕುಮಾರ್ ಉತ್ತರ ಕೊಡಬೇಕು ಎಂದರು.
ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಣ ಅವಶ್ಯಕತೆ ಇದೆ, ಇದರ ಕುರಿತು ನಾವು ಪಕ್ಷದ ವೇದಿಕೆ ಮೇಲೆ ಚರ್ಚೆ ಮಾಡಿದ್ದೇವೆ, ಆದರೆ ಕಾಂಗ್ರೆಸ್ ತಮ್ಮ ಆಡಳಿತದ ರಾಜ್ಯದಲ್ಲಿ ತೆರಿಗೆ ಕಡಿಮೆ ಮಾಡುವ ಕೆಲಸ ಮಾಡಲಿ, ಕರ್ನಾಟಕದಲ್ಲಿ ತೆರಿಗೆ ಕಡಿಮೆ ಮಾಡುವ ಬಗ್ಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ ಎಂದರು.
ಕಾಂಗ್ರೆಸ್ ನಲ್ಲಿ ದಲಿತ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ದಲಿತರಿಗೆ, ಹಿಂದುಳಿದವರಿಗೆ ಆದ್ಯತೆ ಕೊಡಲಾಗಿದೆ, ಪ್ರಧಾನಿ ಮೋದಿ ಹಿಂದುಳಿದ ವರ್ಗದವರು, ರಾಷ್ಟಪತಿ ಕೋವಿಂದ್ ದಲಿತರು, 20 ಮಂದಿ ದಲಿತರಿಗೆ ಮೋದಿ ಮಂತ್ರಿ ಮಾಡಿದ್ದಾರೆ, ಭವಿಷ್ಯದಲ್ಲಿ ಯಾರಿಗೆ ಯಾವ ಸ್ಥಾನ ಕೊಡಬೇಕು ಎಂದು ಪಾರ್ಟಿ ನಿರ್ಣಯ ಮಾಡುತ್ತೆ ಎಂದು ತಿಳಿಸಿದರು.
Comments are closed.