ಟೌನ್‌ ಸ್ಟೇಷನ್‌ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

265

Get real time updates directly on you device, subscribe now.

ತುಮಕೂರು: ಇಲ್ಲಿನ ನಗರ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.
ನಗರದ ಡಿಸಿಸಿ ಬ್ಯಾಂಕ್‌ ಪಕ್ಕದಲ್ಲಿದ್ದ ನಗರಠಾಣೆ ಕಟ್ಟಡ ಶಿಥಿಲಗೊಂಡಿದ್ದರಿಂದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವರು ಅಧಿಕೃತವಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವ ಮಾಧುಸ್ವಾಮಿ, ರಾಜ್ಯದಲ್ಲಿ ಪೊಲೀಸ್‌ ಠಾಣೆಗಳ ನಿರ್ಮಾಣಕ್ಕೆ 200 ಕೋಟಿ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಮುಂದಿನ 2 ವರ್ಷದಲ್ಲಿ ಈ ಕಾರ್ಯಕ್ರಮ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲೆಯಲ್ಲಿ 5 ನೂತನ ಪೊಲೀಸ್‌ ಠಾಣೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರ ತುಮಕೂರು ನಗರದಲ್ಲಿ 2 ಪೊಲೀಸ್‌ ಠಾಣೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 2 ಪೊಲೀಸ್‌ ಠಾಣೆ ಸೇರಿದಂತೆ ಒಟ್ಟು 5 ಹೊಸ ಠಾಣೆಗಳ ನಿರ್ಮಾಣವಾಗಲಿದೆ ಎಂದರು.
ಒಂದು ಪೊಲೀಸ್‌ ಠಾಣೆ ನಿರ್ಮಾಣಕ್ಕೆ 2 ಕೋಟಿ ರೂ. ವರೆಗೆ ಅನುದಾನ ಮಂಜೂರು ಮಾಡಲಾಗುತ್ತಿದ್ದು, ಸರ್ಕಲ್‌ ಇನ್ಸ್ಪೆಕ್ಟರ್‌ ಇರುವ ಪೊಲೀಸ್‌ ಠಾಣೆಗಳನ್ನು 2 ಅಂತಸ್ತಿನಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಸಬ್‌ಇನ್ಸ್ಪೆಕ್ಟರ್‌ ಠಾಣೆಗಳಿಗೆ ಒಂದು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್‌.ಬಸವರಾಜು, ಶಾಸಕ ಜ್ಯೋತಿಗಣೇಶ್, ಮೇಯರ್‌ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಸದಸ್ಯ ಮಹೇಶ್‌, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌, ಡಿವೈಎಸ್ಪಿ ಶ್ರೀನಿವಾಸ್‌, ಸರ್ಕಲ್‌ ಇನ್ಸ್ಪೆಕ್ಟರ್ ಗಳಾದ ನವೀನ್‌, ಮುನಿರಾಜು, ಪಿಎಸ್‌ಐಗಳಾದ ನವೀನ್‌, ಗಂಗಮ್ಮ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!