ಮೆಡಿಕಲ್‌ ಡಿವೈಸ್‌ ಉತ್ಪಾದನಾ ಪಾರ್ಕ್‌ ಸ್ಥಾಪನೆಗೆ ಮನವಿ

239

Get real time updates directly on you device, subscribe now.

ತುಮಕೂರು: ನಗರದ ಕುಣಿಗಲ್‌ ರಸ್ತೆಯ ರಾಮಕೃಷ್ಣಾ ನಗರದಲ್ಲಿರುವ ಶ್ರೀಶಿರಡಿ ಸಾಯಿಬಾಬಾ ದೇವಾಲಯಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಭೇಟಿ ನೀಡಿ ಸಾಯಿಬಾಬಾ ದರ್ಶನ ಪಡೆದರು.
ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವರನ್ನು ಸಂಸದ ಜಿ.ಎಸ್‌.ಬಸವರಾಜು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
ಈ ವೇಳೆ ಮೆಡಿಕಲ್‌ ಡಿವೈಸ್‌ ಉತ್ಪಾದನಾ ಪಾರ್ಕ್‌ ತುಮಕೂರು ಇಂಡಸ್ಟ್ರಿಯಲ್‌ ನೋಡ್‌ ಆವರಣದಲ್ಲಿ ಸ್ಥಾಪಿಸುವಂತೆ ಸಂಸದ ಜಿ.ಎಸ್‌.ಬಸವರಾಜು ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮನವಿ ಸಲ್ಲಿಸಿದರು.
ಭಾರತ ಸರ್ಕಾರ ಆತ್ಮನಿರ್ಭರ್‌ ಅಡಿ ಭಾರತದಲ್ಲೇ ಹೊರ ದೇಶದಿಂದ ಮೆಡಿಕಲ್‌ ಸಲಕರಣೆ ಆಮದು ತಪ್ಪಿಸಲು ದೇಶದಲ್ಲೇ ನಾಲ್ಕು ಮೆಡಿಕಲ್‌ ಡಿವೈಸ್‌ ಉತ್ಪಾದನಾ ಪಾರ್ಕ್‌ ಸ್ಥಾಪಿಸಲು ನಿರ್ಧಾರ ಕೈಗೊಂಡಿದೆ. ಈ ಪಾರ್ಕ್‌ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಮೂಲಭೂತ ಸೌಕರ್ಯ ಸಿದ್ಧಪಡಿಸಲು 100 ಕೋಟಿ ರೂ. ಪ್ರೋತ್ಸಾಹ ಧನ ನೀಡಲಿದೆ. ಉದ್ದೇಶಿಸಿರುವ ಮೆಡಿಕಲ್‌ ಡಿವೈಸ್‌ ಉತ್ಪಾದನಾ ಪಾರ್ಕ್ ಗಳನ್ನು ಸ್ಥಾಪಿಸಲು ಸ್ಥಳಗಳಲ್ಲಿ ಅಗತ್ಯ ಭೂಮಿ, ವಿದ್ಯುತ್‌ ಸೌಕರ್ಯ ಮತ್ತು ಸಂಪರ್ಕ ರಸ್ತೆ ಜೊತೆಗೆ ಸಮಗ್ರ ಅನುಕೂಲಕರ ಭೌಗೋಳಿಕರ ಲಾಜಿಸ್ಟಿಕ್‌ ಸೌಲಭ್ಯ ಇರುವ ಕಡೆ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಸಹ ತಿಳಿಸಿದೆ. ಈಗಾಗಲೇ ತುಮಕೂರು ಇಂಡಸ್ಟ್ರಿಯಲ್‌ ನೋಡ್‌ ಆವರಣದಲ್ಲಿ ಕೇಂದ್ರ ಸರ್ಕಾರ ಸೂಚಿಸಿರುವ ಎಲ್ಲ ಸೌಕರ್ಯ ಲಭ್ಯವಿದೆ ಎಂದು ಈ ಹಿಂದಿನ ಕೇಂದ್ರ ಸಚಿವರಾಗಿದ್ದ ಸದಾನಂದ ಗೌಡರಿಗೂ ಪತ್ರ ಬರೆಯಲಾಗಿತ್ತು ಎಂದು ಸಚಿವರ ಗಮನಕ್ಕೆ ಸಂಸದರು ತಂದರು.
ತುಮಕೂರು ಇಂಡಸ್ಟ್ರಿಯಲ್‌ ನೋಡ್‌ ಆವರಣದಲ್ಲಿ ಇರುವ ಮೂಲಭೂತ ಸೌಕರ್ಯ, ಬೆಂಗಳೂರಿಗೆ ಪಡಸಾಲೆ ನಗರ ತುಮಕೂರು ರೈಲು, ರಸ್ತೆ ಸಾರಿಗೆ, ಕೆಂಪೇಗೌಡ ವಿಮಾನ ನಿಲ್ದಾಣದ ಸೌಲಭ್ಯ ಹಾಗೂ ಇತರೆ ಅನುಕೂಲಗಳ ಬಗ್ಗೆ ವಿವರಿಸಿ, ಮೆಡಿಕಲ್‌ ಡಿವೈಸ್‌ ಉತ್ಪಾದನಾ ಪಾರ್ಕ್‌ ತುಮಕೂರು ಇಂಡಸ್ಟ್ರಿಯಲ್‌ ನೋಡ್‌ ಆವರಣದಲ್ಲಿ ಸ್ಥಾಪಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್‌, ಗುರುಸಿದ್ಧಪ್ಪ, ರಕ್ಷಿತ್‌, ಹರಳೂರು ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!