ತುರುವೇಕೆರೆ: ಶಾಸಕನಾಗುವ ಮುನ್ನ ಜನತೆಗೆ ನೀಡಿದ್ದ ಭರವಸೆಯನ್ನು ಒಂದಷ್ಟು ಈಡೇರಿಸಿದ ತೃಪ್ತಿ ನನಗಿದೆ ಎಂದು ಶಾಸಕ ಮಸಾಲ ಜಯರಾಮ್ ಹೇಳಿದರು.
ತಾಲೂಕಿನ ದೊಡ್ಡೇರಿ ಗ್ರಾಮದ ಅಧಿದೇವತೆ ಶ್ರೀಕೆಂಪಮ್ಮ ದೇವಿ ದೇಗುಲದ ಮಹಾದ್ವಾರ ಉದ್ಘಾಟಿಸಿ ಮಾತನಾಡಿ, ನಾನು ಶಾಸಕನಾಗುವುದಕ್ಕೂ ಮೊದಲು ಕ್ಷೇತ್ರ ಪ್ರವಾಸ ಮಾಡುವ ವೇಳೆ ಜನತೆ ಕೆರೆ ಕಟ್ಟೆಗಳಿಗೆ ಹೇಮೆಯ ನೀರು, ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಮಸ್ಯೆಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದರು, ಅಂದು ಶಾಸಕನಾದ ನಂತರ ಸಮಸ್ಯೆ ಬಗೆಹರಿಸುವ ವಚನ ನೀಡಿದ್ದೆ, ಅದರಂತೆ ನಾನು ಶಾಸಕನಾದ ನಂತರ ಕ್ಷೇತ್ರದ ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿ ಸೇರಿದಂತೆ ಅಗತ್ಯವಿರುವ ಗ್ರಾಮಗಳಿಗೆ ಆದ್ಯತಾನುಸಾರ ಮೂಲ ಸೌಕರ್ಯ ನೀಡಿದ್ದೇನೆ ಎಂದರು.
ಮಾಯಸಂದ್ರ ಹೋಬಳಿಯ ತೂಯಲಹಳ್ಳಿ, ಮಲ್ಲೂರು ಸೇರಿದಂತೆ ಅನೇಕ ಕೆರೆಗಳಿಗೆ ಏತ ನೀರಾವರಿ ಯೋಜನೆ ಅಳವಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶೀಘ್ರದಲ್ಲೇ ಹೇಮಾವತಿ ನಾಲೆ ಅಗಲೀಕರಣ ಕಾರ್ಯ ಆಗಲಿದೆ, ಇದರಿಂದಾಗಿ ನಾಲೆಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಲಿದೆ. ಕ್ಷೇತ್ರದ ಕಟ್ಟ ಕಡೆಯ ಕೆರೆಗಳಿಗೆ ತ್ವರಿತವಾಗಿ ನೀರು ಕೊಂಡೊಯ್ಯಲು ಸಾಧ್ಯವಾಗಲಿದ್ದು, ಎಲ್ಲಾ ಕೆರೆಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸಲಾಗುವುದು ಎಂದರು. ಮಹಾದ್ವಾರದ ದಾನಿಗಳೊಲ್ಲಬ್ಬರಾದ ಚಿಕ್ಕಣ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸರಳ ಸಜ್ಜನಿಕೆಯ ಗುಣವುಳ್ಳ ಶಾಸಕರು ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಕ್ಷೇತ್ರದ ಕಟ್ಟಕಡೆಯ ಪ್ರಜೆಯ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸುತ್ತಿರುವ ಜನಾನುರಾಗಿ ಮಸಾಲ ಜಯರಾಮ್ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಜಿಪಂ ಮಾಜಿ ಸದಸ್ಯರಾದ ಎನ್.ಆರ್.ಜಯರಾಮ್, ಶ್ರೀನಿವಾಸ್, ಪಿಎಸಿಎಸ್ ಅಧ್ಯಕ್ಷ ದೊಡ್ಡೇರಿ ರಾಜಣ್ಣ, ಗ್ರಾಪಂ ಅಧ್ಯಕ್ಷ ಕೆಂಪರಾಜ್, ಉಪಾಧ್ಯಕ್ಷರಾದ ಸುಮಿತ್ರಾಚಿಕ್ಕಣ್ಣಯ್ಯ, ರಾಮಣ್ಣ, ಜನ್ನೇನಹಳ್ಳಿ ಲಕ್ಕಣ್ಣ ಇತರರು ಹಾಜರಿದ್ದರು.
ಜನರ ಆಶೋತ್ತರಗಳಿಗೆ ಧ್ವನಿಯಾಗುವೆ: ಮಸಾಲೆ
Get real time updates directly on you device, subscribe now.
Prev Post
Comments are closed.