ಕೋವಿಡ್‌ ಮಾರ್ಗಸೂಚಿ ಪಾಲಿಸಿ ಹಬ್ಬ, ಜಯಂತಿ ಆಚರಿಸಿ

204

Get real time updates directly on you device, subscribe now.

ತುಮಕೂರು: ಕೋವಿಡ್‌-19 ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಅಕ್ಟೋಬರ್‌ 20 ರಂದು ಆಚರಿಸಲಾಗುವ ಈದ್‌ ಮಿಲಾದ್‌ ಹಬ್ಬ ಹಾಗೂ ವಾಲ್ಮೀಕಿ ಜಯಂತಿಯನ್ನು ಕೋವಿಡ್‌-19 ಮಾರ್ಗಸೂಚಿ ಅನುಸರಿಸುವುದರೊಂದಿಗೆ ಶ್ರದ್ಧಾಭಕ್ತಿಯಿಂದ ಅತ್ಯಂತ ಸರಳವಾಗಿ ಆಚರಿಸಬೇಕು. ಹಬ್ಬ, ಜಯಂತಿ ದಿನದಂದು ಜಿಲ್ಲೆಯಾದ್ಯಂತ ಸಾಮೂಹಿಕ ಮೆರವಣಿಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಸೂಚಿಸಿದ್ದಾರೆ.
ಹಬ್ಬ, ಜಯಂತಿ ಆಚರಣೆ ಸಂದರ್ಭದಲ್ಲಿ ಜನರ ಒಗ್ಗೂಡುವಿಕೆ ಹೆಚ್ಚಾಗಿರುವುದರಿಂದ ಕೋವಿಡ್‌-19 ವೈರಾಣು ಹರಡುವಿಕೆ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಸಕ್ರಿಯ ಪ್ರಕರಣ ಅಥವಾ ಹೆಚ್ಚಿನ ಪಾಸಿಟಿವಿಟಿ ದರವು ಉಲ್ಬಣಗೊಳ್ಳುವ ಪ್ರಾರಂಭಿಕ ಸುಳಿವಿನ ಮೇಲೆ ಹೆಚ್ಚಿನ ನಿಗಾ ವಹಿಸುವ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಸಾರ್ವಜನಿಕರು ಕಟ್ಟುನಿಟ್ಟಾಗಿ ಮಾರ್ಗಸೂಚಿ ಅನುಸರಿಸಿ ಹಬ್ಬ, ಜಯಂತಿ ಆಚರಿಸಬೇಕೆಂದು ತಿಳಿಸಿದ್ದಾರೆ.
ಮಾರ್ಗಸೂಚಿಯನ್ವಯ ಈದ್‌ ಮಿಲಾದ್‌, ವಾಲ್ಮೀಕಿ ಜಯಂತಿ ಪ್ರಯುಕ್ತ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಿ 100ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ ಹಾಗೂ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳು, ಡಿಜಿಟಲ್‌ ಸೌಂಡ್‌ ಸಿಸ್ಟಮ್‌ ಬಳಕೆ ನಿಷೇಧಿಸಲಾಗಿದೆ. ಜಯಂತಿ ಆಚರಣೆ, ಪ್ರಾರ್ಥನಾ ಸ್ಥಳಗಳಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸತಕ್ಕದ್ದು ಮತ್ತು ಮುಖಗವಸನ್ನು ಧರಿಸದೆ ಸೇರತಕ್ಕಂತಹ ಸಾರ್ವಜನಿಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.
ಅಲ್ಲದೆ 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಿಕೊಂಡು ಹಬ್ಬ ಆಚರಿಸಬೇಕು. ಸಾರ್ವಜನಿಕವಾಗಿ ನಡೆಯುವ ಆಚರಣೆ ಕಾರ್ಯಕ್ರಮ, ಜನರ ಒಗ್ಗೂಡುವಿಕೆಯಲ್ಲಿ ಭಾಗವಹಿಸುವಂತಿಲ್ಲ. ಸ್ಯಾನಿಟೈಸೇಷನ್‌ ಹಾಗೂ ಹ್ಯಾಂಡ್‌ ವಾಷ್ ನೊಂದಿಗೆ ಕೈ ತೊಳೆಯಲು ಆಚರಣೆ ಸ್ಥಳ, ಪ್ರವೇಶ ದ್ವಾರದಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕು.
ಮಸೀದಿಗಳಲ್ಲಿ ಮತ್ತು ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್‌- 19ರ ಶಿಷ್ಟಾಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ಈದ್‌ ಮಿಲಾದ್‌ ಆಚರಣೆ ಮಾಡಬೇಕು. ಕೋವಿಡ್‌ 19 ಸಮುಚಿತ ವರ್ತನೆಯಂತೆ ಸಾಮೂಹಿಕ ಪ್ರಾರ್ಥನೆ ನಡೆಸಬೇಕು. ಒಂದು ವೇಳೆ ಹೆಚ್ಚು ಜನರು ಆಗಮಿಸಿದಲ್ಲಿ ಎರಡು ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಬೇಕು. ಕೋವಿಡ್‌-19 ಸಮುಚಿತ ವರ್ತನೆಯಂತೆ ಮಸೀದಿಗಳಲ್ಲಿ ನಮಾ಼ಜ್ ನಿರ್ವಹಿಸುವವರ ಮಧ್ಯ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಕೈಗಳನ್ನು ಸೋಪು ಮತ್ತು ಸ್ಯಾನಿಟೈಸರ್ ಗಳಿಂದ ಶುಚಿಗೊಳಿಸತಕ್ಕದ್ದು, ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡಿಸಬೇಕು. ಮಸೀದಿಗಳಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸುವವರು ತಮ್ಮ ತಮ್ಮ ಮನೆಗಳಿಂದ ಮುಸಲ್ಲಾವನ್ನು ಕಡ್ಡಾಯವಾಗಿ ತರಬೇಕು. ಪರಸ್ಪರ ಹಸ್ತಲಾಘವ ಮತ್ತು ಆಲಿಂಗನಗಳನ್ನು ಮಾಡತಕ್ಕದಲ್ಲ. ಮಸೀದಿಗಳನ್ನು ಹೊರತುಪಡಿಸಿ ಇತರ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ, ಸಭಾಂಗಣ, ಸಮುದಾಯ ಭವನ, ಶಾದಿಮಹಲ್‌ ಮತ್ತಿತರ ತೆರೆದ ಸ್ಥಳಗಳಲ್ಲಿ ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಆಯೋಜಿಸುವಂತಿಲ್ಲ. ಖಬರಸ್ಥಾನದಲ್ಲಿ ಈದ್‌ ಮಿಲಾದ್‌ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಭಾಷಣ ಮತ್ತು ತೆರೆದ ಜಾಗದಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರವಚನ ಮುಂತಾದವುಗಳನ್ನು ಆಯೋಜಿಸುವಂತಿಲ್ಲ.
ಹಬ್ಬ ಹರಿದಿನಗಳು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮತ್ತು ಸಾಮರಸ್ಯಗಳು ಉಂಟಾಗಲು ಪೂರಕವಾಗಿರುವುದರಿಂದ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಹಬ್ಬ ಹಾಗೂ ಜಯಂತಿ ಆಚರಿಸಬೇಕು. ಆಚರಣೆ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!