ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಗ್ರಾಮಸ್ಥರೇ ಬರಲಿಲ್ಲ

218

Get real time updates directly on you device, subscribe now.

ಕೊರಟಗೆರೆ: ಸರಕಾರಿ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆ, ಅಭಿವೃದ್ಧಿ ವಂಚಿತ ಗಡಿಭಾಗದ ಗ್ರಾಮವನ್ನು ಗುರುತಿಸುವಲ್ಲಿ ಕೊರಟಗೆರೆ ಆಡಳಿತ ವಿಫಲ, ಕೋಳಾಲ ಗ್ರಾಪಂ ವ್ಯಾಪ್ತಿಯ 16 ಗ್ರಾಮಗಳಲ್ಲಿ ಪ್ರಚಾರ ನಡೆಸಲು ಅಧಿಕಾರಿ ವರ್ಗದ ನಿರ್ಲಕ್ಷದಿಂದ ನರಸಾಪುರ ಗ್ರಾಮ ವಾಸ್ತವ್ಯಕಾರ್ಯಕ್ರಮಕ್ಕೆ ಸರಕಾರಿ ಇಲಾಖೆಗಳ ಅಧಿಕಾರಿ ವರ್ಗ ಮಾತ್ರ ಹಾಜರಿದ್ದು 16 ಗ್ರಾಮದ ಗ್ರಾಮಸ್ಥರೇ ಗೈರಾಗಿದ್ದರು.
ಕೊರಟಗೆರೆ ಕ್ಷೇತ್ರದ ಗಡಿ ಭಾಗವಾದ ಕೋಳಾಲ ಗ್ರಾಪಂ ವ್ಯಾಪ್ತಿಯ ನರಸಾಪುರಕ್ಕೆ ಮಾತ್ರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸೀಮಿತವಾಗಿದೆ. ಮಾಜಿ ತಾಪಂ ಅಧ್ಯಕ್ಷರ ಸ್ವಗ್ರಾಮವಾದ ನರಸಾಪುರದಲ್ಲಿ ಮೂಲ ಸೌಲಭ್ಯಕ್ಕೆ ಏನು ಕೊರತೆಯಿಲ್ಲ. ಗಡಿಭಾಗದ ಇನ್ನುಳಿದ ಗ್ರಾಮಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಸುಲಭ ಮತ್ತು ತ್ವರಿತವಾಗಿ ಕಾರ್ಯಕ್ರಮ ಮುಗಿಸುವ ಉದ್ದೇಶದಿಂದ ಹೈಟೆಕ್‌ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದೇ ಜನರಲ್ಲಿ ಬೇಸರ ತಂದಿದೆ.
ಕೋಳಾಲ ಗ್ರಾಪಂ ವ್ಯಾಪ್ತಿಯ 16 ಗ್ರಾಮದಲ್ಲಿ 3200 ಮನೆಗಳಿವೆ ಹಾಗೂ 7126 ಜನ ಸಂಖ್ಯೆ ಇದೆ, 16 ಜನ ಗ್ರಾಪಂ ಸದಸ್ಯರಿದ್ದರೂ ಪ್ರಚಾರದ ಕೊರತೆಯಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಕೇವಲ 36 ಅರ್ಜಿ ಮಾತ್ರ ಬಂದಿವೆ. ಅದರಲ್ಲಿ ಪಹಣಿ ತಿದ್ದುಪಡಿ-10, ಸರ್ವೇ-7, ಮಾಸಾಶನ- 2, ತಾಪಂ- 12, ಆರೋಗ್ಯ ಇಲಾಖೆ- 1, ಕೆಇಬಿ- 1, ಸಣ್ಣ ನೀರಾವರಿ- 1, ತೋಟಗಾರಿಕೆ- 1, ಪಿಡ್ಲ್ಯೂಡಿ- 1 ಬಂದಿದೆ. ಮಧುಗಿರಿ ಎಸಿ ತಮ್ಮ ಇಲಾಖೆ ಅಧಿಕಾರಿಗಳ ಜೊತೆ ಕೋಳಾಲ ಸ್ಮಶಾನ, ರೈತ ಸಂಪರ್ಕಕೇಂದ್ರ, ನರಸಾಪುರ ಗ್ರಾಮ, ಅಂಬೇಡ್ಕರ್‌ ವಸತಿ ಶಾಲೆಗಳಿಗೆ ಖುದ್ದು ಪರಿಶೀಲನೆ ನಡೆಸಿದ ಘಟನೆ ನಡೆದಿದೆ.
ಮಧುಗಿರಿ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿ, ಸರಕಾರದ ಆದೇಶದಂತೆ ಪ್ರತಿ ಶನಿವಾರ ಅಭಿವೃದ್ಧಿ ವಂಚಿತ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಸರಕಾರದ ಸವಲತ್ತು ಪ್ರತಿ ಮನೆಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಗ್ರಾಮ ವಾಸ್ತವ್ಯದ ಉಪಯೋಗದ ಬಗ್ಗೆ ಜನಪ್ರತಿನಿಧಿ ಮತ್ತು ಅಧಿಕಾರಿ ವರ್ಗ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ಗ್ರಾಮ ವಾಸ್ಥವ್ಯಕ್ಕೆ ಇಓ ಶಿವಪ್ರಕಾಶ್‌ ಮತ್ತು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಶಮಿಮ್‌ಉನ್ನೀಸಾ ಗೈರಾದರೆ ಮಧುಗಿರಿ ಎಸಿ ಸೋಮಪ್ಪ ಕಡಕೋಳ ಮತ್ತು ಡಿವೈಎಸ್ಪಿ ರಾಮಕೃಷ್ಣ ಜನರ ಅಹವಾಲು ಸ್ವೀಕರಿಸಿ ಸ್ಥಳದಲ್ಲಿಯೇ ಕೆಲವನ್ನು ಬಗೆಹರಿಸಿದ್ದಾರೆ. ಇನ್ನುಳಿದ ಅರ್ಜಿಗಳನ್ನು ಇಲಾಖೆವಾರು ವರ್ಗಾಯಿಸಿ ತ್ವರಿತವಾಗಿ ಬಗೆಹರಿಸುವ ಭರವಸೆ ನೀಡಿದರು. ಆರೋಗ್ಯ ಇಲಾಖೆ ಟಿಎಚ್‌ಓ ವಿಜಯಕುಮಾರ್‌ ನೇತೃತ್ವದ ತಂಡ ಗ್ರಾಮ ವಾಸ್ಥವ್ಯಕ್ಕೆ ಆಗಮಿಸುವ ಜನರಿಗೆ ಸ್ಥಳದಲ್ಲಿಯೇ ಕೊರೊನಾ ಲಸಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ನಿರ್ದೆಶಕ ನಾಗರಾಜು, ತೋಟಗಾರಿಕೆ ನಿರ್ದೇಶಕಿ ಪುಪ್ಪಲತಾ, ಶಿಕ್ಷಣ ಇಲಾಖೆ ಬಿಇಓ ಸುಧಾಕರ್‌, ಬೆಸ್ಕಾಂ ಇಲಾಖೆ ಎಇಇ ಮಲ್ಲಪ್ಪ, ಜಿಪಂ ಎಇಇ ಮಂಜುನಾಥ, ಪಶು ಇಲಾಖೆಯ ಸಿದ್ದನಗೌಡ, ಸಿಡಿಪಿಓ ಅಂಬಿಕಾ, ಪಿಎಸೈ ಮಹಾಲಕ್ಷ್ಮೀ, ಅಬಕಾರಿ ಇನ್ಸ್ಪೆಕ್ಟರ್‌ ಶ್ರೀಲತಾ, ಅರಣ್ಯ ಇಲಾಖೆ ಅರಣ್ಯಾಧಿಕಾರಿ ಸುರೇಶ್‌, ಸಾಮಾಜಿಕ ವಲಯ ಅಧಿಕಾರಿ ನವನೀತ್‌ ತಮ್ಮ ಇಲಾಖೆಗೆ ಬರುವ ಸರಕಾರದ ಸೌಲಭ್ಯ ಮತ್ತು ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

Get real time updates directly on you device, subscribe now.

Comments are closed.

error: Content is protected !!