ತುಮಕೂರು: ಖಾಸಗಿ ಬಸ್ ಮತ್ತು ಹೂ, ತರಕಾರಿ ತುಂಬಿಕೊಂಡು ತೆರಳುತ್ತಿದ್ದ ಸರಕು ಸಾಗಣೆ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಸಿದ್ದಾರ್ಥ ನಗರದ ಬಳಿ ಮುಂಜಾನೆ ನಡೆದಿದೆ.
ಮೃತಪಟ್ಟವರನ್ನು ಕವಿತಾ (39), ದರ್ಶನ್ (22), ಕೃಷ್ಣಮೂರ್ತಿ (25) ಹಾಗೂ ದಿವಾಕರ್ (25) ಎಂದು ಗುರುತಿಸಲಾಗಿದೆ. ಇವರು ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ಮೂಲದವರು ಎಂದು ತಿಳಿದು ಬಂದಿದೆ.
ದರ್ಶನ್ ವ್ಯಾಕ್ಸಿಕ್ಯಾಬ್ ವಾಹನದ ಚಾಲಕನಾಗಿದ್ದು, ಈತ ಚಿಕ್ಕನಾಯಕನಹಳ್ಳಿಯಿಂದ ತುಮಕೂರಿನ ಮಾರುಕಟ್ಟೆಗೆ ಪ್ರತಿನಿತ್ಯ ತರಕಾರಿ ತಂದು ಮಾರಾಟ ಮಾಡಿ ಮತ್ತೆ ಊರಿಗೆ ತೆರಳುತ್ತಿದ್ದನು. ಹಾಗೆಯೇ ತುರುವೇಕೆರೆ ಮೂಲದವರಾದ ಕೃಷ್ಣಮೂರ್ತಿ ಪ್ರತಿನಿತ್ಯ ತುಮಕೂರಿನ ಮಾರುಕಟ್ಟೆಗೆ ಬಂದು ಹೂವು ಖರೀದಿ ಮಾಡಿ ತುರುವೇಕೆರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಅದರಂತೆ ಇಂದು ಸಹ ಇವರೆಲ್ಲರೂ ಮಾರುಕಟ್ಟೆಗೆ ತಮ್ಮ ದಿನನಿತ್ಯದ ವ್ಯಾಪಾರ ವಹಿವಾಟಿಗಾಗಿ ಬಂದಿದ್ದಾರೆ. ಆದರೆ ಪ್ರತಿನಿತ್ಯ ಮ್ಯಾಕ್ಸಿಕ್ಯಾಬ್ ವಾಹನ ಚಾಲಕ ದರ್ಶನ್ ತನ್ನ ವ್ಯಾಪಾರ ಮುಗಿಸಿಕೊಂಡು ಒಬ್ಬನೇ ವಾಹನದಲ್ಲಿ ತೆರಳುತ್ತಿದ್ದನೆನ್ನಲಾಗಿದೆ. ಉಳಿದವರು ಸಹ ತಮ್ಮ ವ್ಯಾಪಾರ ಮುಗಿಸಿಕೊಂಡು ಬಸ್ಗಳನ್ನು ಊರುಗಳಿಗೆ ಹೋಗುತ್ತಿದ್ದರು.
ಆದರೆ ವಿಧಿಯಾಟ ಬಲ್ಲವರು ಎಂಬಂತೆ ತುರುವೇಕೆರೆ ಮೂಲದ ಇಬ್ಬರಿಗೆ ಬಸ್ ಸಿಗದೆ ತಡವಾಗಿದೆ. ಹಾಗಾಗಿ ದರ್ಶನ್ಗೆ ದೂರವಾಣಿ ಕರೆ ಮಾಡಿ ತಾವು ಸಹ ನಿನ್ನ ವಾಹನದಲ್ಲೇ ಬರುವುದಾಗಿ ತಿಳಿಸಿದ್ದಾರೆ.
ಮಾರುಕಟ್ಟೆಯಿಂದ ದರ್ಶನ್ನ ಮ್ಯಾಕ್ಸಿಕ್ಯಾಬ್ ವಾಹನದಲ್ಲಿ ಹೂವು, ತರಕಾರಿ ತುಂಬಿಕೊಂಡು ತಮ್ಮ ಊರುಗಳತ್ತ ತೆರಳುತ್ತಿದ್ದಾಗ ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿ 206 ರ ಸಿದ್ದಾರ್ಥ ನಗರದ ಬಳಿ ಶಿವಮೊಗ್ಗ ಕಡೆಯಿಂದ ಬೆಂಗಳೂರಿನತ್ತ ಅತಿ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದರಿಂದ ಮ್ಯಾಕ್ಸಿಕ್ಯಾಬ್ನಲ್ಲಿ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದಾರೆ. ಬಸ್ ಚಾಲಕ ಸೇರಿದಂತೆ ಇಬ್ಬರಿಗೆ ತೀವ್ರವಾದ ಪೆಟ್ಟಾಗಿದೆ.
ಅಪಘಾತ ನಡೆಯುತ್ತಿದ್ದಂತೆ ಮುಂಜಾನೆ ವೇಳೆ ವಾಯು ವಿಹಾರಕ್ಕೆ ತೆರಳುತ್ತಿದ್ದ ಸಿದ್ದಾರ್ಥ ನಗರ ನಿವಾಸಿಗಳಾದ ಆನಂದ್, ಮಂಜುನಾಥ್ ಗಾಯಾಗಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ, ಮ್ಯಾಕ್ಸಿಕ್ಯಾಬ್ ವಾಹನದಲ್ಲಿ ಸಿಲುಕಿದ್ದ ಶವಗಳನ್ನು ಹೊರ ತೆಗೆಯುವಲ್ಲಿ ಶ್ರಮಿಸಿದ್ದಾರೆ.
ಜತೆಗೆ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಬೇರೊಂದು ವಾಹನದ ವ್ಯವಸ್ಥೆ ಮಾಡಿ ತುಮಕೂರು ಬಸ್ ನಿಲ್ದಾಣಕ್ಕೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮ್ಯಾಕ್ಸಿಕ್ಯಾಬ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮುಂಭಾಗದಲ್ಲೇ ಕುಳಿತಿದ್ದ ನಾಲ್ಕು ಮಂದಿಯ ಶವಗಳು ಸಿಲುಕಿಕೊಂಡು ಹೊರ ತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಹಾಗೂ ಪೊಲೀಸರು ಹರಸಾಹಸ ಪಡಬೇಕಾಯಿತು.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ರಾಹುಲ್ಕುಮಾರ್, ಗ್ರಾಮಾಂತರ ಸಿಪಿಐ ರಾಮಕೃಷ್ಣಯ್ಯ, ಸಬ್ಇನ್ಸ್ಪೆಕ್ಟರ್ಗಳಾದ ಹರೀಶ್, ಸಿಂಗಣ್ಣಚಾರ್
ಮತ್ತು ಸಿಬ್ಬಂದಿ ಭೇಟಿ ನೀಡಿ ಮ್ಯಾಕ್ಸಿಕ್ಯಾಬ್ ವಾಹನದಲ್ಲಿ ಸಿಲುಕಿಕೊಂಡಿದ್ದ ಶವಗಳನ್ನು ಹೊರ ತೆಗೆಯುವಲ್ಲಿ ಶ್ರಮಿಸಿದ್ದಾರೆ.
ಮುಂಜಾನೆ ವೇಳೆ ಈ ಅಪಘಾತ ಸಂಭವಿಸಿರುವುದರಿಂದ ಮಂಜು ಹೆಚ್ಚಾಗಿ ಬಿದ್ದಿರಬಹುದು ಅಥವಾ ವಾಹನಗಳ ಅತಿವೇಗ ಇದಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಂಸದರ ಸಾಂತ್ವನ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಂಸದ ಜಿ.ಎಸ್. ಬಸವರಾಜು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ, ಮೃತಪಟ್ಟವರು ಹೂ, ತರಕಾರಿ ವ್ಯಾಪಾರ ಮಾಡಿಕೊಂಡು ಬದುಕು ನಡೆಸುತ್ತಿದ್ದರು. ಈ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದರು.
ಮ್ಯಾಕ್ಸಿಕ್ಯಾಬ್, ಹಾಲಿನ ವಾಹನ, ಸರಕು ಸಾಗಣೆ ವಾಹನ ಸೇರಿದಂತೆ ಇನ್ನಿತರೆ ವಾಹನಗಳ ಚಾಲಕರು ಮೊಬೈಲ್ನಲ್ಲೆ ಮಾತನಾಡಿಕೊಂಡು ವಾಹನ ಚಾಲನೆ ಮಾಡುತ್ತಿರುತ್ತಾರೆ. ಇದನ್ನು ಹಲವು ಬಾರಿ ಗಮನಿಸಿದ್ದೇನೆ. ಈ ಬಗ್ಗೆ ಪೊಲೀಸರು ಗಮನ ಹರಿಸಬೇಕು ಎಂದ ಅವರು, ವಾಹನ ಚಾಲಕರು ಸಹ ತಮ್ಮ ಕುಟುಂಬಗಳ ಬಗ್ಗೆ ಚಿಂತಿಸಿ ವಾಹನ ಚಾಲನೆ ಮಾಡಬೇಕು. ಯಾವುದೇ ಕಾರಣಕ್ಕೂ ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡಬೇಕು. ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಸ್ಥಳೀಯರ ಆಕ್ರೋಶ
ಈ ಮಾರ್ಗದ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅರ್ಧಂಬರ್ಧ ಕಾಮಗಾರಿ ನಡೆಸಿ ಕೈ ಬಿಟ್ಟಿರುವುದರಿಂದ ಆಗಿಂದಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಕೂಡಲೇ ಸಂಬಂಧಪಟ್ಟವರು ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ, ಸಂಭವಿಸುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಲೇ ಇವೆ. ಆದ್ದರಿಂದ ಈ ಮಾರ್ಗದಲ್ಲಿ ಅಪಘಾತದ ಎಚ್ಚರಿಕೆ ನಾಮಫಲಕ ಹಾಕಬೇಕು. ಜತೆಗೆ ಈ ರಸ್ತೆ ಅಕ್ಕಪಕ್ಕದಲ್ಲಿರುವ ಕಸದ ರಾಶಿಗಳನ್ನು ತೆರವುಗೊಳಿಸುವ ಮೂಲಕ ಅಪಘಾತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Comments are closed.