ಕುಣಿಗಲ್: ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡ ಕೆರೆ, ಗ್ರಾಮದ ಪರಿಸರಕ್ಕೆ ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳ ಮೇಲೆ ಮುಲಾಜಿಲ್ಲದೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಅಜಯ್ ಖಡಕ್ ಎಚ್ಚರಿಕೆ ನೀಡಿದರು.
ಸೋಮವಾರ ತಾಲೂಕಿನ ಗೊಟ್ಟಿಕೆರೆ ಕೆರೆಯು ಕೈಗಾರಿಕೆ ಮಾಲಿನ್ಯದಿಂದ ಮಲೀನವಾಗಿರುವ ಬಗ್ಗೆ ಗ್ರಾಮಸ್ಥರ ವ್ಯಾಪಕ ಹೋರಾಟ, ದೂರುಗಳ ಹಿನ್ನೆಲೆಯಲ್ಲಿ ಕೈಗಾರಿಕೆ, ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿ, ನಿಯಮ ಉಲ್ಲಂಘಿಸಿದ ಗೊವಿಂದ್ ಸಾಲ್ವೆಂಟ್ ನ ಎರಡು ಘಟಕ, ಬೆಂಗಳೂರು ಇನ್ಸಿನೇರೇಟರ್ಸ್ ಲಿ. ಕೈಗಾರಿಕಾ, ವೈದ್ಯಕೀಯ ತ್ಯಾಜ್ಯಸಂಸ್ಕರಣ ಘಟಕಗಳಿಗೆ ಬೀಗಮುದ್ರೆ ಹಾಕಿಸಿ ತಾಲೂಕು ಕಚೇರಿಯಲ್ಲಿ ಅಂಚೆಪಾಳ್ಯ ಕೈಗಾರಿಕಾ ಪ್ರದೇಶದ ಕೈಗಾರಿಕಾ ಮಾಲೀಕರ ಸಂಘದ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಕಾರ್ಖಾನೆಯ ಮುಖ್ಯಸ್ಥರು, ಕಾರ್ಖಾನೆಯಲ್ಲಿ ದ್ರವ ತ್ಯಾಜ್ಯವನ್ನು ಸಂಸ್ಕರಿಸಿ, ಶುದ್ಧೀಕರಿಸಿದ ನಂತರ ಕಾರ್ಖಾನೆಯಲ್ಲೆ ಪಾರ್ಕ್ ನಿರ್ವಹಣೆಗೆ ಬಳಸಿಕೊಳ್ಳುತ್ತೇವೆ, ಘನ ತ್ಯಾಜ್ಯವನ್ನು ವೈಜ್ಞಾನಿಕ ವಿಲೆಗೆ ಖಾಸಗಿ ವಿಲೆವಾರಿ ಘಟಕಕ್ಕೆ ನೀಡುತ್ತೇವೆ, ಎಲ್ಲಿಯೂ ನಿಯಮ ಉಲ್ಲಂಘಿಸಿಲ್ಲ ಎಂದರು.
ಹಿರಿಯ ಪರಿಸರ ಅಧಿಕಾರಿ ಮಂಜುನಾಥ, ತಾವು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಮಳೆ ಬರುವ ಸಮಯದಲ್ಲಿ ಕೈಗಾರಿಕೆ ದ್ರವ ತ್ಯಾಜ್ಯವನ್ನು ಶುದ್ಧೀಕರಿಸದೆ ಹೊರಗೆ ಬಿಡುತ್ತಿದ್ದ ಕೆಮಿಕಲ್ ಲ್ಯಾಬ್ ಕಾರ್ಖಾನೆಗೆ ಹಲವು ನೋಟೀಸ್ ನೀಡಿದ್ದು, ಇದೀಗ ನಿಯಮ ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವ ಗೋವಿಂದ್ ಸಾಲ್ವೆಂಟ್ ಲಿ. ಇವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ಯಾವುದೇ ದಾಖಲೆ ಇಲ್ಲದೆ ಹಾಜರಾದ ಗೋವಿಂದ್ ಸಾಲ್ವೆಂಟ್ ನ ಸಿಬ್ಬಂದಿ ವಿಶ್ವಾಸ್, ಇವರನ್ನು ತರಾಟೆಗೆ ತೆಗೆದುಕೊಂಡ ಎಸಿ ಅಜಯ್, ಸಭೆಗೆ ಸೂಕ್ತ ದಾಖಲೆ ಇಲ್ಲದೆ ಏಕೆ ಬಂದಿದ್ದೀರಾ, 50 ಕಂಪನಿಗಳ ರಾಸಾಯನಿಕ ತ್ಯಾಜ್ಯ ಸಂಸ್ಕರಣೆ ಮಾಡಲಾಗುವುದು ಎನ್ನುತ್ತೀರಾ, ಯಾವುದೇ ದಾಖಲೆ ಇಲ್ಲ, ಮುಖ್ಯ ಘಟಕದ ಪಕ್ಕದಲ್ಲಿ ಮತ್ತೊಂದು ಘಟಕದಲ್ಲಿ ಅಕ್ರಮವಾಗಿ ತ್ಯಾಜ್ಯ ಹರಡಿದ್ದೀರಾ, ಯಾವುದೇ ಶುದ್ಧೀಕರಣ ಘಟಕ ಕೆಲಸ ಮಾಡುತ್ತಿಲ್ಲ, ಎಲ್ಲಾ ಯಂತ್ರ ತುಕ್ಕು ಹಿಡಿದಿವೆ, ಹೀಗಾದರೆ ಹೇಗೆ ಎಂದಾಗ ಸಿಬ್ಬಂದಿ ಆಯುಧಪೂಜೆ ಪ್ರಯುಕ್ತ ಘಟಕಕ್ಕೆ ರಜೆ ನೀಡಲಾಗಿತ್ತು, ಶೀಘ್ರವೆ ದಾಖಲೆ ಒದಗಿಸುವುದಾಗಿ ತಿಳಿಸಿದರು.
ಸ್ಥಳ ತನಿಖೆ ವೇಳೆಯಲ್ಲಿ ಹಾಜರಿದ್ದು ಸೂಕ್ತ ದಾಖಲೆ ಒದಗಿಸದೆ ನಿರ್ಲಕ್ಷ್ಯವಹಿಸಿ, ನಿಯಮಗಳ ಉಲ್ಲಂಘನೆ ಮಾಡಿರುವ ಘಟಕದ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪರಿಸರ ಇಲಾಖಾಧಿಕಾರಿಗೆ ಸೂಚನೆ ನೀಡಿದರು.
ಅಧಿಕಾರಿಗಳ ಭೇಟಿ ವೇಳೆಯಲ್ಲಿ ಹಾಜರಿದ್ದ ಅಂಚೇಪಾಳ್ಯ, ಶಂಭುಗೌಡನಪಾಳ್ಯ, ಗೊಟ್ಟಿಕೆರೆ ಇತರೆ ಗ್ರಾಮದ ಗ್ರಾಮಸ್ಥರು ಇಲ್ಲ ಕೈಗಾರಿಕೆ ಉಳಿಸಿ ನಮ್ಮನ್ನು ಖಾಲಿ ಮಾಡಿಸಿ, ಕೈಗಾರಿಕೆ ಬೇಕೋ, ಗ್ರಾಮಗಳು, ಗ್ರಾಮಗಳ ಕೆರೆ ಬೇಕೋ ನಿರ್ಧರಿಸಿ ಎಂದು ಪ್ರಶ್ನಿಸಿದರು. ಗ್ರಾಮಸ್ಥರನ್ನು ಸಮಾಧಾನ ಮಾಡಿದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.
ತಡವಾಗಿ ಸಭೆಗೆ ಹಾಜರಾದ ಶಾಸಕ ಡಾ.ರಂಗನಾಥ್, ಕೈಗಾರಿಕೆಯ ಮಾಲಿನ್ಯದಿಂದ ಗ್ರಾಮಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು, ಇಲ್ಲವಾದರೆ ಗ್ರಾಮಸ್ಥರ ಹಿತ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ತಹಶೀಲ್ದಾರ್ ಮಹಾಬಲೇಶ್ವರ್ ಇತರರು ಇದ್ದರು.
Get real time updates directly on you device, subscribe now.
Prev Post
Comments are closed.