ಶಿರಾ: ಮಧುಗಿರಿ ಆರ್ ಟಿ ಓ ಕಚೇರಿಯಿಂದ ಶಿರಾವನ್ನು ಬಿಡುಗಡೆ ಮಾಡಿಸಿ ತುಮಕೂರಿನ ಕಚೇರಿಗೆ ಸೇರ್ಪಡೆ ಮಾಡಿಸಿ ಆರು ತಿಂಗಳು ಕಳೆಯುತ್ತಾ ಬಂದರೂ ಸಮರ್ಪಕ ಸೇವೆ ನೀಡುವಲ್ಲಿ ಸಾರಿಗೆ ಇಲಾಖೆ ವಿಫಲಗೊಂಡಿದೆ.
ಇದೇ ವರ್ಷದ ಏಪ್ರಿಲ್ ತಿಂಗಳ ಮಧ್ಯದಲ್ಲಿ ಶಿರಾ ಜನತೆಯ ಆಸೆಯಂತೆ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರ ಒತ್ತಡದಂತೆ ಶಿರಾ ತಾಲ್ಲೂಕನ್ನು ಮಧುಗಿರಿ ಸಾರಿಗೆ ಕಚೇರಿಯಿಂದ ತುಮಕೂರು ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗೊಂಡು ಆರು ತಿಂಗಳು ಕಳೆದರೂ ಕಂಪ್ಯೂಟರ್ ತಂತ್ರಾಂಶ, ದತ್ತಾಂಶ ವರ್ಗಾವಣೆಯಾಗದ ಕಾರಣ ಶಿರಾ ಜನತೆಗೆ ಅತ್ತ ಮಧುಗಿರಿಯಲ್ಲೂ ಸೇವೆ ಸಿಗುತ್ತಿಲ್ಲ, ಇತ್ತ ತುಮಕೂರಿನಲ್ಲಿ ಸೌಲಭ್ಯ ದೊರೆಯದೆ ತ್ರಿಶಂಕುವಿನ ಪರಿಸ್ಥಿತಿ ಎದುರಾಗಿದೆ.
ಸಾರಿಗೆ ಕಚೇರಿಯ ಯಾವುದೇ ಕೆಲಸಕ್ಕೂ ಶಿರಾ ತಾಲ್ಲೂಕಿನ ಜನರು ಪರದಾಡುವಂತಾಗಿದೆ, ಹತ್ತು ನಿಮಿಷದಂತಹ ಸಣ್ಣಪುಟ್ಟ ಕೆಲಸಗಳಿಗೂ ಎರಡು- ಮೂರು ದಿನ ಅಲೆಯುವ ಪರಿಸ್ಥಿತಿ ಉಂಟಾಗಿದೆ. ತಂತ್ರಾಂಶ ವರ್ಗಾವಣೆ ವೇಳೆ ಲೋಪ ದೋಷ ಉಂಟಾದರೆ ಸಮಸ್ಯೆಗಳು ಉದ್ಭವವಾಗುತ್ತವೆ. ತಾಂತ್ರಿಕ ಸಮಸ್ಯೆಯಿಂದ ತಂತ್ರಾಂಶ, ದತ್ತಾಂಶ ವರ್ಗಾವಣೆ ವಿಳಂಬವಾಗಿದೆ. ಇದು ಇಂತಹ ದಿನಕ್ಕೆ ಮುಗಿಯುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ ಎಂದು ಅಪರ ಸಾರಿಗೆ ಆಯುಕ್ತ ಪುರುಷೋತ್ತಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳೇ ಅಸಹಾಯಕತೆ ವ್ಯಕ್ತಪಡಿಸಿದರೆ ಜನರ ಸಹಾಯಕ್ಕೆ ಬರುವವರಾರು ಎನ್ನುವ ಪ್ರಶ್ನೆ ಎದ್ದಿದ್ದು, ಬೆಕ್ಕಿಗೆ ಗಂಟೆ ಕಟ್ಟುವವರಾರು ಎನ್ನುವ ಪರಿಸ್ಥಿತಿ ಉದ್ಭವಗೊಂಡಿದೆ. ಶಾಸಕರು ಈ ಬಗ್ಗೆ ಗಮನ ಹರಿಸಿ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಆರು ತಿಂಗಳಿಂದ ತಂತ್ರಾಂಶ ವರ್ಗಾವಣೆ ಸಮಸ್ಯೆಯಿಂದ ಸಾರ್ವಜನಿಕರು ಕಷ್ಟಪಡುತ್ತಿದ್ದಾರೆ. ಹೀಗೆ ವಿಳಂಬವಾದರೆ ಮುಂದಿನ ದಿನಗಳಲ್ಲಿ ಎಲ್ಲಾ ಜನಪರ ಸಂಘಟನೆಗಳೂ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾದೀತು. ಅಧಿಕಾರಿಗಳು ಮತ್ತು ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲಿ.
-ಪಿ.ಆರ್. ಮಂಜುನಾಥ್, ಖಾಸಗಿ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ.
ಈಗಾಗಲೇ ಸಾರಿಗೆ ಇಲಾಖೆಯ ಸಚಿವರೂ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೂ ಹಾಗೂ ಜನಪ್ರತಿನಿಧಿಗಳಿಗೂ ತಂತ್ರಾಂಶ ವರ್ಗಾವಣೆ ವಿಳಂಬದ ಬಗ್ಗೆ ದೂರು ನೀಡಲಾಗಿದೆ. ಆದರೂ ಈ ಸಮಸ್ಯೆ ಬಗೆಹರಿದಿಲ್ಲ.
-ಜೆ.ಸಿದ್ದೇಶ್ವರ, ಅಧ್ಯಕ್ಷರು. ಆಟೋ ಚಾಲಕರ ಸಂಘ, ಶಿರಾ.
Comments are closed.