ಹೇಮೆ ನೀರು ಕಸಿಯಲು ಬಿಡಲ್ಲ: ಮಾಜಿ ಶಾಸಕ ಸುರೇಶ್ ಗೌಡ

ಅವೈಜ್ಞಾನಿಕ ಎಂಬುದು ರಾಜಕೀಯ ಕುತಂತ್ರ

256

Get real time updates directly on you device, subscribe now.

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರ ನನ್ನ ಉಸಿರು, ಇಲ್ಲಿಗೆ ನಾನು ಕಷ್ಟಬಿದ್ದು ಹಂಚಿಕೆ ಮಾಡಿಸಿಕೊಂಡು ಬಂದಿರುವ ಹೇಮಾವತಿ ನೀರನ್ನು ಕಸಿಯುವ ಕುತಂತ್ರಕ್ಕೆ ನಾನು ಆಸ್ಪದ ಕೊಡಲಾರೆ ಎಂದು ಮಾಜಿ ಶಾಸಕ ಬಿ.ಸುರೇಶ್ ಗೌಡ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ, ಅದರಲ್ಲೂ ನಾನು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನನ್ನ ಜನರು ನನಗೆ ತೋರಿದ ಪ್ರೀತಿಯಿಂದ ಕಂಗೆಟ್ಟಿರುವ ಶಾಸಕ ಡಿ.ಸಿ.ಗೌರಿಶಂಕರ್ ಅವರು ನನ್ನದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಹೇಳಿಸಿರುವ ತುಮಕೂರು- ಗೂಳೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂಬ ಮಾತುಗಳ ಹಿಂದಿನ ರಾಜಕೀಯ ಕುತಂತ್ರ ಅರಿಯದಷ್ಟು ನಾನು ದಡ್ಡನಲ್ಲ, ನನ್ನ ಕ್ಷೇತ್ರದ ಜನರು ಸಹ ದಡ್ಡರಲ್ಲ ಎಂದು ಸುರೇಶ್ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಗಾಗಿ ಜಿಲ್ಲೆಯೇ ಮೆಚ್ಚಿದ್ದ ಜನ ನಾಯಕ ವೈ.ಕೆ.ರಾಮಯ್ಯ ಅವರ ಕನಸಿನ ಕೂಸು, ಐದು ದಶಕಗಳ ಕಾಲ ವೈಕೆಆರ್ ಸೇರಿದಂತೆ ಅನೇಕರು ಹೋರಾಟ ನಡೆಸಿದ್ದಾರೆ. ನಾನು ರಾಜಕಾರಣಕ್ಕೆ ಬಂದ ಬಳಿಕ ಈ ಹೋರಾಟಕ್ಕೆ ಬಲ ತಂದುಕೊಟ್ಟೆ, ಅಲ್ಲದೇ ಜನರಿಗೆ ಕೊಟ್ಟ ಮಾತಿನಂತೆ ಶಾಸಕನಾದ ಬಳಿಕ ಎಲ್ಲ ಕಷ್ಟಗಳನ್ನು ಹಗಲು ರಾತ್ರಿ ಮುಖ್ಯಮಂತ್ರಿ, ನೀರಾವರಿ ಸಚಿವರ ಮನೆಗಳನ್ನು ಕಾದು ಯೋಜನೆಗೆ ಅನುಮತಿ ಪಡೆದನು. ಆ ಬಳಿಕ ಕೆರೆಗಳನ್ನು ಹೇಮಾವತಿ ನೀರಿನಿಂದಲೇ ತುಂಬಿಸಿದ್ದೇನೆ.
ಗೂಳೂರು, ಹೊನ್ನುಡಿಕೆ, ಹೆಬ್ಬೂರು, ನಾಗವಲ್ಲಿ, ಬಳ್ಳಗೆರೆ, ವನಸಗೆರೆ ಸೇರಿದಂತೆ ಅನೇಕ ಕೆರೆಕಟ್ಟೆಗಳು ಹೇಮಾವತಿ ನೀರಿನಿಂದ ಕಂಗೊಳಿಸಿದವು, ಇದೇ ಕಾರಣಕ್ಕಾಗಿ ಹನ್ನೆರಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳೂ ಮಂಜೂರಾದವು ಎಂಬುದನ್ನು ನಾನು ನಿಮಗೆ ಹೇಳುತ್ತಿದ್ದೇನೆ. ಕ್ಷೇತ್ರಕ್ಕೆ ಹೇಮಾವತಿ ನೀರು ಹರಿದ ಬಳಿಕ ನೀರಾವರಿ ವಿಚಾರದಲ್ಲಿ ಆದ ಬದಲಾವಣೆಗಳೆಲ್ಲ ನಿಮಗೆ ಗೊತ್ತೇ ಇದೆ, ನಾನು ಜಿಲ್ಲಾಧ್ಯಕ್ಷನಾಗಿದ್ದುಕೊಂಡು ನನ್ನ ಕ್ಷೇತ್ರದ ಕೆರೆಗಳಿಗೆ ನೀರು ಬಿಡಿಸಲು ಆಗದ ಕಾರಣ ಪಕ್ಷದ ಹುದ್ದೆ ತೊರೆದು ಮುನಿಸು ತೋರಿದ್ದೇನೆ.
ಇದಾದ ಕೆಲವೇ ದಿನಗಳಲ್ಲಿ ಉಸ್ತುವಾರಿ ಸಚಿವರ ಬಾಯಲ್ಲಿ ಗೂಳೂರು- ಹೆಬ್ಬೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಮಾತುಗಳನ್ನು ಅದು ಅವರು ನಗಾಡಿಕೊಂಡು ಹೇಳಿಸಿರುವುದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ.
ಯೋಜನೆಯೊಂದು ಅವೈಜ್ಞಾನಿಕ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ನೀರಿನ ಹಂಚಿಕೆ ತಡೆದು ಅದನ್ನು ಬೇರೆಡೆ ತೆಗೆದುಕೊಂಡು ಹೋಗುವುದು, ಅವೈಜ್ಞಾನಿಕದ ಹೆಸರಿನಲ್ಲಿ ನೀರು ನಿಂತರೆ ಇದನ್ನೇ ಮುಂದು ಮಾಡಿಕೊಂಡು ಸುರೇಶಗೌಡರ ರಾಜಕೀಯವನ್ನು ಶಾಶ್ವತವಾಗಿ ಮುಗಿಸಬೇಕೆಂಬ ಇಂತಹ ಕುತಂತ್ರಗಳಿಗೆ ಹೆದರುವ ಮನುಷ್ಯ ನಾನಲ್ಲ, ನನ್ನ ಕ್ಷೇತ್ರದ ಜನರು ಸೊಪ್ಪು ಹಾಕಬಾರದೆಂದು ಸುರೇಶ್ ಗೌಡ ತಿಳಿಸಿದ್ದಾರೆ.
ಕ್ಷೇತ್ರದ ಶಾಸಕರು ಪದೇ ಪದೆ ನನ್ನ ಪಕ್ಷದ ಸಚಿವರನ್ನು ಹೊಗಳಿಕೆ ಮಾಡಿರುವುದು ನನ್ನ ಮನಸ್ಸಿನಲ್ಲಿದ್ದು, ಸಚಿವರನ್ನು ಹೊಗಳುವ ಮೂಲಕ ಕ್ಷೇತ್ರಕ್ಕೆ ಹೆಚ್ಚಿನ ನೀರನ್ನು ಬಿಡಿಸಿಕೊಳ್ಳುವ ಜಾಣ್ಮೆ ಯ ನಡಿಗೆ ಎಂದು ಒಳಗೊಳಗೆ ಖುಷಿಪಟ್ಟಿದ್ದೆ, ಆದರೆ ಕುತಂತ್ರದ ರಾಜಕಾರಣದ ಮೂಲಕ ಕ್ಷೇತ್ರದ ನೀರಾವರಿ ಯೋಜನೆಯೊಂದರ ಮೇಲೆ ತಪ್ಪು ಗೂಬೆ ಕೂರಿಸಿ ಇಡೀ ಕ್ಷೇತ್ರದ ಜನರಿಗೆ ಅನ್ಯಾಯ ಮಾಡುವ ಸಣ್ಣತನದ ಒಳತಂತ್ರ ಎಂಬುದು ಗೊತ್ತಿರಲಿಲ್ಲ. ನನ್ನ ಕ್ಷೇತ್ರದಿಂದ ಹೇಮಾವತಿ ನೀರು ಕಸಿಯುವ ಯಾವ ಶಕ್ತಿಗಳಿಗೂ ನಾನು ಆಸ್ಪದ ಕೊಡಲಾರೆನು ಎಂದು ತಿಳಿಸಿದ್ದಾರೆ.
ಈ ಯೋಜನೆಗೆ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಗಿನ ಮುಖ್ಯಮಂತ್ರಿಗಳಾದ, ಆಗಿನ ಬೃಹತ್ ನೀರಾವರಿ ಸಚಿವರಾಗಿದ್ದ ಬಸವರಾಜ ಎಸ್ ಬೊಮ್ಮಾಯಿ ಅವರು ಅನುಮತಿ ನೀಡಿದ್ದರು. ಮುಖ್ಯಮಂತ್ರಿಗಳಾಗಿರುವ ಬೊಮ್ಮಾಯಿ ಅವರು ಯೋಜನೆಗೆ ಅನುಮತಿ ಕೊಡುವ ಕ್ಷೇತ್ರದ ನೀರಿನ ಕಷ್ಟದ ಬಗ್ಗೆ ವರದಿಯನ್ನು ಸಹ ತರಿಸಿಕೊಂಡಿದ್ದರು. ಜನರಿಗೆ ಒಳ್ಳೆಯದು ಮಾಡಿದ ಯೋಜನೆ ಎಂಬ ಕಾರಣಕ್ಕಾಗಿ ಈ ಯೋಜನೆ ಬಗ್ಗೆ ಅವರಿಗೆ ಇನ್ನಿಲ್ಲದ ಪ್ರೀತಿ ಇತ್ತು. ಈಗಲೂ ಈ ಯೋಜನೆಯ ಸಣ್ಣ ಸಣ್ಣ ತಾಂತ್ರಿಕ ವಿವರವೂ ಅವರಿಗೆ ಗೊತ್ತಿದೆ. ಯೋಜನೆಗೆ ಅನುಮೋದನೆಗೆ ಮುನ್ನ ತಾಂತ್ರಿಕ ಸಮಿತಿಯಿಂದ ವರದಿ ಪಡೆಯಲಾಗುತ್ತದೆ. ಯಾವುದೇ ಯೋಜನೆ ಸಾಧ್ಯತೆ ಇದ್ದಾಗ ಮಾತ್ರವೇ ಸಮಿತಿ ಅನುಮೋದನೆ ನೀಡಲಿದೆ, ಇಷ್ಟನ್ನು ಅರಿಯದಷ್ಟು ನನ್ನ ಕ್ಷೇತ್ರದ ಜನರು ದಡ್ಡರಲ್ಲ ಎಂದು ತಿಳಿಸಿದ್ದಾರೆ.
ಹೇಮಾವತಿ ನೀರು ಗ್ರಾಮಾಂತರ ಕ್ಷೇತ್ರದ ಜನ್ಮಸಿದ್ಧ ಹಕ್ಕು, ಅದನೆಂದೂ ಯಾರೊಬ್ಬರು ಕಸಿಯಲು ನಾನು ಬಿಡಲಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!