ಗುಬ್ಬಿಯಲ್ಲಿ ಜೆಡಿಎಸ್‌ ಸಮಾವೇಶದ ಬಗ್ಗೆ ಮುಖಂಡರ ಅಸಮಾಧಾನ

ಯಾರೋ ಮಾಡುವ ಸಮಾವೇಶವನ್ನು ಒಪ್ಪಲ್ಲ

455

Get real time updates directly on you device, subscribe now.

ಗುಬ್ಬಿ: ಜೆಡಿಎಸ್‌ ಪಕ್ಷದ ಸಮಾವೇಶವನ್ನು ಗುಬ್ಬಿಯಲ್ಲಿ 25 ರಂದು ನಾಗರಾಜು ಎಂಬ ವ್ಯಕ್ತಿ ಮಾಡುತ್ತಿದ್ದೇನೆ ಎಂದು ಆಹ್ವಾನ ಪತ್ರಿಕೆಯನ್ನು ಪ್ರಿಂಟ್‌ ಮಾಡಿಸಿ ಕಳೆದ 2 ದಿನದ ಹಿಂದೆ ಮಾಹಿತಿ ಕೊಟ್ಟಿದ್ದಾರೆ, ಇದರ ಬಗ್ಗೆ ನಮ್ಮ ಸಮಿತಿಗೆ ಯಾವುದೇ ಮಾಹಿತಿ ಇಲ್ಲದೆ ಹೇಗೆ ಇವರು ಸಮಾವೇಶ ಮಾಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ, ಇದು ಜೆಡಿಎಸ್‌ ಪಕ್ಷಕ್ಕೆ ಮಾಡಿರುವ ಅವಮಾನ ಎಂದು ಗುಬ್ಬಿ ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಗುರುರೇಣುಕರಾಧ್ಯ ಬೇಸರ ವ್ಯಕ್ತಪಡಿಸಿದರು.
ಗುಬ್ಬಿ ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಶಾಸಕರಿಗಾಗಲಿ, ನಮಗೆ ಆಗಲಿ ಯಾವುದೇ ರೀತಿಯ ಮಾಹಿತಿ ನೀಡದೆ ಏಕಾಏಕಿಯಾಗಿ ಸಮಾವೇಶ ಮಾಡುತ್ತೇನೆ ಎಂದು ಶಾಸಕರ ಹಾಗೂ ನನ್ನ ಫೋಟೋ ಬಳಕೆ ಮಾಡಿದ್ದಾರೆ, ಇದರ ಬಗ್ಗೆ ನಮ್ಮ ಯಾವುದೇ ಸಮಿತಿಗೂ ಗಮನಕ್ಕೆ ತರದೆ ಏಕಾಏಕಿಯಾಗಿ ಸಮಾವೇಶಕ್ಕೆ ಸಿದ್ಧತೆ ಮಾಡುತ್ತಿರುವುದು ನಮ್ಮ ಕಾರ್ಯಕರ್ತರಿಗೆ ಬೇಸರ ತರಿಸಿದೆ ಎಂದರು.
ನಮ್ಮ ಪಕ್ಷದ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಸಮಾವೇಶದ ಯಾವುದೇ ಮಾಹಿತಿ ಇಲ್ಲದೆ ಇರುವುದರಿಂದ 2 ದಿನದಲ್ಲಿ ವರಿಷ್ಠರು ಇದರ ಬಗ್ಗೆ ಸಂಪೂರ್ಣ ಮಾಹಿತಿ ನಮಗೆ ನೀಡಬೇಕು, ನಂತರ ನಾವು ಕಾರ್ಯಕರ್ತರ ಸಭೆ ಕರೆದು ಸಭೆಯಲ್ಲಿ ಭಾಗವಹಿಸ ಬೇಕೆ ಬೇಡವೇ ಎಂದು ತೀರ್ಮಾನ ಮಾಡುತ್ತೇವೆ ಎಂದರು.
ಶಾಸಕರಾದ ಎಸ್‌.ಆರ್‌.ಶ್ರೀನಿವಾಸ ಮತ್ತು ವರಿಷ್ಠರ ಬಗ್ಗೆ ಯಾವ ಅಸಮಾಧಾನವಿದೆ ಎಂಬುದು ನಮಗೆ ಗೊತ್ತಿಲ್ಲ, ಅದೇನೇ ಇದ್ದರೂ 4 ಬಾರಿ ಗೆದ್ದಿರುವ ಶಾಸಕ ಎಸ್‌.ಆರ್‌.ಶ್ರಿನಿವಾಸ್‌ ಅವರಿಗೆ ಮಾಹಿತಿ ನೀಡದೆ ಇನ್ನೊಬ್ಬ ವ್ಯಕ್ತಿ ಬಂದು ಸಮಾವೇಶ ಮಾಡುತ್ತಿರುವುದು ಎಷ್ಟು ಸರಿ, ಇದರ ಬಗ್ಗೆ ಕುಮಾರಸ್ವಾಮಿಯವರಾಗಲಿ, ದೇವೇಗೌಡರಾಗಲಿ ನಮ್ಮ ಗಮನಕ್ಕೆ ತಂದಿಲ್ಲ, ಹಾಗಾಗಿ ಇದರ ಬಗ್ಗೆ ಕೂಡಲೇ ವರಿಷ್ಠರು ನಮಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ರೇಣುಕಪ್ರಸಾದ್‌ ಮಾತನಾಡಿ ನಮ್ಮ ಶಾಸಕರು ಯಾವತ್ತೂ ಪಕ್ಷ ಬಿಡುತ್ತೇನೆ ಎಂದು ಹೇಳಿಕೆ ನೀಡಿಲ್ಲ, ಪಕ್ಷ ಬಿಡುವ ಮನಸ್ಸು ಅವರಿಗಿದ್ದಿದ್ದರೆ ಸಚಿವ ಸ್ಥಾನ ಬಿಜೆಪಿಯವರು ನೀಡುತ್ತೇನೆ ಎಂದಾಗಲೇ ಅವರು ಪಕ್ಷ ಬಿಟ್ಟು ಹೋಗಬಹುದಿತ್ತು, ಆದರೆ ಅವರು ಪಕ್ಷದಲ್ಲಿಯೇ ಉಳಿಯಬೇಕು ಎಂಬ ನಿರ್ಧಾರ ಮಾಡಿ ಪಕ್ಷವನ್ನು ಬಲಿಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಯಾವುದೋ ಒಬ್ಬ ವ್ಯಕ್ತಿ ಸಮಾವೇಶ ಮಾಡುತ್ತೇನೆ ಎಂದರೆ ನಮ್ಮ ಕಾರ್ಯಕರ್ತರು ಅದನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ ಮಾತನಾಡಿ, 40 ವರ್ಷದಿಂದ ಜೆಡಿಎಸ್‌ ಪಕ್ಷಕ್ಕೆ ದುಡಿಯುತ್ತಿರುವ ನಮಗೆ ಯಾವುದೇ ರೀತಿಯ ಮಾಹಿತಿಯನ್ನೇ ನೀಡದೆ ನಾಗರಾಜು ಎಂಬ ವ್ಯಕ್ತಿ ಪಕ್ಷದ ಸೇರ್ಪಡೆಯಾಗುತ್ತೇನೆ, ಸಮಾವೇಶ ಮಾಡುತ್ತೇನೆ ಎಂದು ಓಡಾಟ ಮಾಡುತ್ತಿರುವುದು ಪಕ್ಷಕ್ಕೆ ಮಾಡಿರುವ ದ್ರೋಹ, ಇದರ ಬಗ್ಗೆ ನಮ್ಮ ಎಲ್ಲಾ ಕಾರ್ಯಕರ್ತರ ಜತೆಯಲ್ಲಿ ಮಾತುಕತೆ ಮಾಡಿದ ನಂತರ ನಮ್ಮ ತೀರ್ಮಾನ ತಿಳಿಸಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡರಾದ ಹೊದಲೂರು ವಿಜಯಕುಮಾರ್‌, ತಾಲ್ಲೂಕು ಯುವ ಜೆಡಿಎಸ್‌ ಅಧ್ಯಕ್ಷ ವೆಂಕಟೇಶ್‌, ಯಲ್ಲಪ್ಪ, ಬೆಲವತ್ತ ಶಿವಕುಮಾರ್‌, ರಘು ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!