ಬಂದ್ ಗೆ ದಲಿತ ಸಂಘಟನೆಗಳ ವಿರೋಧ

1,131

Get real time updates directly on you device, subscribe now.

ತುಮಕೂರು: ಹಿಂದೂಪರ ಸಂಘಟನೆಗಳು ಕರೆ ನೀಡಿರುವ ತುಮಕೂರು ಬಂದ್ ಗೆ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹಿರೇಹಳ್ಳಿಯಲ್ಲಿ ಮಹಿಳೆಯ ಅತ್ಯಾಚಾರವಾದಾಗ, ದಲಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾದಾಗ ಹಿಂದೂ ನಾವೆಲ್ಲ ಒಂದು ಎನ್ನುವವರು ಯಾರು ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ, ಬಂದ್ ಗೆ ಕರೆ ನೀಡಲಿಲ್ಲ, ಹಾಗಾಗಿ ಬಂದ್ ಗೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಬೆಂಬಲವಿಲ್ಲ ಎಂದು ತಿಳಿಸಿವೆ.
ನಗರದ ಅಂಬೇಡ್ಕರ್‌ ಭವನದಲ್ಲಿ ಸಭೆ ಸೇರಿ ಮಾತನಾಡಿದ ದಲಿತ ಸಂಘಟನೆಗಳ ಮುಖಂಡರಾದ ಪಿ.ಎನ್‌.ರಾಮಯ್ಯ, ಹಿಂದೂ ಧರ್ಮದ ಹೆಸರಿನಲ್ಲಿ ದಲಿತ, ಹಿಂದುಳಿದ ವರ್ಗಗಳ ಯುವಕರ ದಾರಿ ತಪ್ಪಿಸುತ್ತಿರುವುದಲ್ಲದೆ, ಜಾತಿಗಳ ಮೇಲೆ ಎತ್ತಿ ಕಟ್ಟುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡುವುದಲ್ಲದೇ ಈಗ ಕ್ಷುಲ್ಲಕ ವಿಚಾರದಲ್ಲಿ ಬಂದ್ ಗೆ ಕರೆ ನೀಡುವ ಮೂಲಕ ವ್ಯಾಪಾರಸ್ಥರು, ನಾಗರಿಕರ ಮೇಲೆ ಬಂದ್ ಗೆ ಸಹಕರಿಸುವಂತೆ ಬಲವಂತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಲೆ ಏರಿಕೆ ಹಾಗೂ ಪೆಟ್ರೋಲ್‌ ಬೆಲೆ ಏರಿಕೆ ಬಗ್ಗೆ ಮಾತನಾಡದೆ ಜನರ ಗಮನ ಬೇರೆಡೆ ಸೆಳೆಯಲು ಕೋಮು ಸಂಘರ್ಷದ ಬಣ್ಣ ಬಳಿಯಲಾಗುತ್ತಿದ್ದು, ಈಗಾಗಲೇ ಹಲ್ಲೆ ನಡೆಸಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ, ಆದರೂ ಬಂದ್‌ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಅವರು, ದಲಿತ ಮತ್ತು ಮುಸ್ಲಿಂ ಸಮುದಾಯದ ಮೇಲಿನ ದೌರ್ಜನ್ಯಗಳಿಗೆ ಸ್ಪಂದಿಸದ ಹಿಂದೂಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದರು.
ದಲಿತ ಮುಖಂಡ ಗೂಳರಿವೆ ನಾಗರಾಜು ಮಾತನಾಡಿ, ಕೋವಿಡ್‌ ನಿಯಮಾವಳಿ ಹೆಸರಿನಲ್ಲಿ ದಲಿತ ಮತ್ತು ಮುಸ್ಲಿಂರ ಹಬ್ಬಗಳಿಗೆ ನಿರ್ಬಂಧ ವಿಧಿಸಿದ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಹಾಗೂ ಜನಪ್ರತಿನಿಧಿಗಳು ಕ್ಷುಲ್ಲಕ ವಿಚಾರವನ್ನೇ ಮುಂದಿಟ್ಟುಕೊಂಡು ಕೋಮು ಸಂಘರ್ಷ ಕೆರಳಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದು, ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.
ಹಿಂದೂ ನಾವೆಲ್ಲ ಒಂದು ಎನ್ನುವ ಸಂಘಟನೆಗಳಾಗಲಿ, ಪಕ್ಷಗಳಾಗಲಿ ದಲಿತ ಮತ್ತು ಹಿಂದುಳಿದವರ ಮೇಲೆ ದೌರ್ಜನ್ಯವಾದಾಗ ಧ್ವನಿಯೆತ್ತದೆ, ಪುಂಡರ ಪುಂಡಾಟಿಕೆ ಮುಂದಿಟ್ಟುಕೊಂಡು ಆರ್.ಎಸ್.ಎಸ್‌ ಮಾರ್ಗಸೂಚಿಯಂತೆ ನೇತೃತ್ವದಲ್ಲಿ ತುಮಕೂರು ಬಂದ್‌ ಕರೆ ನೀಡಿರುವುದು ಸರಿಯಲ್ಲ ಎಂದರು.
ದಲಿತ ಮುಖಂಡರಾದ ಕೆ.ಎಂ.ಕೃಷ್ಣಮೂರ್ತಿ ಮಾತನಾಡಿ, ಎಲ್ಲಾ ಸಮುದಾಯಗಳ ಪರವಾಗಿ ನಿಲ್ಲಬೇಕಾದ ಸಂಸದರು ಮತ್ತು ಶಾಸಕರು ಹಿರೇಹಳ್ಳಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಘಟನೆಯಲ್ಲಿ ಮೌನವಹಿಸಿ ಈಗ ಕಿಡಿಗೇಡಿಗಳ ತಿಕ್ಕಾಟ ಮುಂದಿಟ್ಟುಕೊಂಡು ಕೋವಿಡ್ ನಿಂದ ಈಗಾಗಲೇ ಕಂಗೆಟ್ಟಿರುವ ಸಾರ್ವಜನಿಕರ ಮೇಲೆ ದಬ್ಬಾಳಿಕೆಯ ಬಂದ್‌ ಹೇರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರಾದ ಕಾಂತರಾಜು, ಹೊನ್ನಮ್ಮ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದಾಗಲೂ ಸಹ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಧ್ವನಿಮಾಡಲಿಲ್ಲ, ಸಣ್ಣ ಜಗಳವನ್ನೇ ದೊಡ್ಡದಾಗಿ ಬಿಂಬಿಸಿ, ಕೋಮು ಸಂಘರ್ಷದ ವಾತಾವರಣ ಸೃಷ್ಟಿಸಿ ಬಾಹ್ಯ ಶಕ್ತಿಗಳಿಗೆ ಅವಕಾಶ ಮಾಡಿಕೊಡುತ್ತಿದ್ದು, ನಗರದಲ್ಲಿ ಎಲ್ಲರೂ ಶಾಂತಿ ಸಹಬಾಳ್ವೆ ನಡೆಸುತ್ತಿದ್ದು, ಬಂದ್‌ ಮಾಡುವ ಅಗತ್ಯವಿರಲಿಲ್ಲ ಎಂದು ಹೇಳಿದರು.
ದಲಿತ ವಿಮೋಚನಾ ಸೇನೆಯ ಹಬ್ಬತ್ತನಹಳ್ಳಿ ಶ್ರೀನಿವಾಸ್, ಅಖಿಲ ಭಾರತ ಡಾ.ಅಂಬೇಡ್ಕರ್‌ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್‌.ಕೆ.ನಿಧಿಕುಮಾರ್‌, ಗೋವಿಂದರಾಜು, ಲಕ್ಷ್ಮೀನಾರಾಯಣ, ನರಸಿಂಹರಾಜು ಟಿ.ಎನ್‌, ಧನರಾಜ್‌, ಸಿದ್ಧಲಿಂಗಯ್ಯ, ರಾಜೇಶ್‌, ಮಧು.ಟಿ, ನಟರಾಜ, ನರಸಿಂಹಮೂರ್ತಿ, ರವಿಕುಮಾರ್‌, ರಜನಿಕಾಂತ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!