ತುಮಕೂರು: ನಗರದಲ್ಲಿ ಎರಡು ದಿನಗಳ ಹಿಂದೆ ಟ್ರಾಫಿಕ್ ವಿಚಾರವಾಗಿ ನಡೆದ ಗಲಭೆಗೆ ಕೋಮು ಬಣ್ಣ ಕಟ್ಟಿ ನಗರದಲ್ಲಿ ಶಾಂತಿ ಕದಡುವ ಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಮಾಜಿ ಶಾಸಕರಾದ ಎಸ್.ಷಫಿ ಅಹ್ಮದ್ ಮತ್ತು ಡಾ.ರಫಿಕ್ ಅಹ್ಮದ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ನಗರದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಾ.ರಫಿಕ್ ಅಹ್ಮದ್, ದಾರಿ ಬಿಡುವ ವಿಚಾರದಲ್ಲಿ ಇಬ್ಬರ ನಡುವೆ ನಡೆದಿರುವ ಘಟನೆಯನ್ನೇ ದೊಡ್ಡದು ಮಾಡಿ ತುಮಕೂರು ಬಂದ್ ಗೆ ಮುಂದಾಗಿದ್ದಾರೆ, ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ, ಕಳೆದ 20 ವರ್ಷಗಳಿಂದ ಮುಸ್ಲಿಂ ಮತ್ತು ಹಿಂದೂಗಳು ಅಣ್ಣ ತಮ್ಮಂದಿರಂತೆ, ಶಾಂತಿ ಸೌಹಾರ್ದತೆಯಿಂದ ಬದುಕುತಿದ್ದೇವೆ. ಹಾಗಾಗಿ ಹೊರಗಿನ ಶಕ್ತಿಗಳು ಈ ಘಟನೆ ಲಾಭ ಪಡೆದು ನಗರದ ಜನರಲ್ಲಿರುವ ಶಾಂತಿ ಸೌಹಾರ್ದತೆ ಕದಡದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಎಸ್.ಷಪಿ ಅಹ್ಮದ್ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಸಹೋದರತೆ, ಬ್ರಾತೃತ್ವ ಕದಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿದೆ, ಎರಡು ಕಡೆಯ ಯುವಕರು ಪರಿಸ್ಥಿತಿ ಅರ್ಥ ಮಾಡಿಕೊಂಡು ಶಾಂತಿಯಿಂದ ವರ್ತಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.
ಪಾಲಿಕೆಯ ವಿರೋಧ ಪಕ್ಷದ ನಾಯಕ ಕೆ.ಕುಮಾರ್ ಮಾತನಾಡಿ, ರಸ್ತೆಯಲ್ಲಿ ಜಾಗ ಬಿಡುವ ವಿಚಾರಕ್ಕೆ ನಡೆದ ಘಟನೆಗೆ ಕೋಮು ಬಣ್ಣ ಹಚ್ಚಿ, ವಿಚಿದ್ರಕಾರಿ ಶಕ್ತಿಗಳು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಂದಾಗಿವೆ. ಈಗಾಗಲೇ ಪೊಲೀಸರು ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಿದ್ದಾರೆ. ಮುಂದೆ ಇಂತಹ ಘಟನೆ ನಡೆಯದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ವಕೀಲ ಟಿ.ಎಸ್.ನಿರಂಜನ್ ಮಾತನಾಡಿ, ಇಬ್ಬರು ವ್ಯಕ್ತಿಗಳ ನಡುವೆ ನಡೆದ ಘಟನೆ ದುರ್ಘಟನೆಯಾಗಬಾರದು, ಇಬ್ಬರು ವ್ಯಕ್ತಿಗಳ ಕಿತ್ತಾಟ ಸಮುದಾಯದ ಕಿತ್ತಾಟವಾಗದಂತೆ ಹಾಗೂ ಅಮಾಯಕ ಯುವಕರು ಬಲಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ವೇಳೆ ಪಾಲಿಕೆಯ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ನಯಾಜ್, ಪಾಲಿಕೆ ಸದಸ್ಯ ಮಹೇಶ್, ಮುಖಂಡರಾದ ಚಿಕ್ಕರಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ರಾಜು, ಮೆಹಬೂಬ್ ಪಾಷ ಇತರರು ಇದ್ದರು.
ನಗರದಲ್ಲಿ ಶಾಂತಿ: ಕಾಂಗ್ರೆಸ್ ಮುಖಂಡರ ಮನವಿ
Get real time updates directly on you device, subscribe now.
Prev Post
Comments are closed.