ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶ ಸಂಗ್ರೇಶಿ ಪ್ರಶಂಸೆ

ನಮ್ಮ ಪೊಲೀಸರ ಸೇವೆ ಸ್ಮರಣೀಯವಾದುದು

182

Get real time updates directly on you device, subscribe now.

ತುಮಕೂರು: ದೇಶ ಸೇವೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ದಿನ 24 ಗಂಟೆಯೂ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರ ಸೇವೆ ಶ್ಲಾಘನೀಯವಾದುದು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಜಿ.ಎಸ್‌. ಸಂಗ್ರೇಶಿ ತಿಳಿಸಿದರು. ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರ ಸ್ಮಾರಕದ ಪುತ್ಥಳಿಗೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿ ಮಾತನಾಡಿ, ಪೊಲೀಸ್‌ ಇಲಾಖೆ ಸೇರಿದವರ ಬಗ್ಗೆ ಸಾರ್ವಜನಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಶಂಸೆ ದೊರೆಯುತ್ತಿಲ್ಲ, ಆದರೂ ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಾಮಾಣಿಕವಾಗಿ ಅವರ ಕರ್ತವ್ಯ ಮಾಡುತ್ತಾ ಬಂದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪೊಲೀಸ್‌ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂಡಾಯಗೊಳಿಸಿ ಪ್ರತಿಭಟನೆ ನಡೆಸಿರುವುದನ್ನು ಎಲ್ಲಿಯೂ ಕೇಳಿಲ್ಲ, ಆದರೆ ಬೇರೆ ಇಲಾಖೆಗಳಲ್ಲಿ ಸೌಲಭ್ಯಗಳಿಗಾಗಿ ಪ್ರತಿಭಟನೆ ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ, ಬೇರೆ ಇಲಾಖೆಗಳಿಗಿಂತ ವೇತನ ಕಡಿಮೆ ಇದ್ದರೂ ಸಹ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ದಿನ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
1959 ರಲ್ಲಿ ಚೀನಾ ಗಡಿ ಭಾಗದಲ್ಲಿ ಯುದ್ಧ ಮಾಡುವಾಗ 10 ಮಂದಿ ಪೊಲೀಸರು ತಮ್ಮ ಜೀವವನ್ನು ಬಲಿದಾನ ಮಾಡಿದ್ದಕ್ಕಾಗಿ ಹುತಾತ್ಮ ದಿನಾಚರಣೆ ಮಾಡಲಾಗುತ್ತಿದೆ, ಅಂತಹವರ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸಮಾಜದಲ್ಲಿ ಸಾರ್ವಜನಿಕರು ನಿರ್ಭೀತಿಯಿಂದ ಓಡಾಡುವಂತೆ ಮಾಡುವಲ್ಲೂ ಪೊಲೀಸರ ಸೇವೆ ಅತ್ಯಂತ ಪ್ರಶಂಸನೀಯವಾದುದು, ಯಾವುದೇ ಸಾರ್ವಜನಿಕ ಸಭೆ ಸಮಾರಂಭ ಅತ್ಯಂತ ಅಚ್ಚುಕಟ್ಟಾಗಿ ನಡೆಯಬೇಕಾದರೂ ಪೊಲೀಸರ ಪಾತ್ರ ಬಹು ಮುಖ್ಯವಾಗಿದೆ ಎಂದರು.
ದೇಶದ ಗಡಿಭಾಗದಲ್ಲಿ ಸೈನಿಕರು ಕೆಲಸ ಮಾಡಿದರೆ, ದೇಶದ ಒಳಗೆ ನಾಗರಿಕರ ಹಿತವನ್ನು ಕಾಪಾಡುವುದು ಪೊಲೀಸರು, ಹಾಗಾಗಿ ಪೊಲೀಸರ ಕರ್ತವ್ಯ, ಸಮಯ ಪ್ರಜ್ಞೆ ಶ್ಲಾಘನೀಯ ಎಂದರು.
ನಮ್ಮ ದೇಶದ ಉತ್ತರ ಭಾಗದಲ್ಲಿ ಚೀನಾ ದೇಶದ ಸೈನಿಕರು ನಮ್ಮ ದೇಶದ ಸೈನಿಕರ ಮೇಲೆ ದುಷ್ಕೃತ್ಯ ನಡೆಸಿ ಪೊಲೀಸರನ್ನು ಹತ್ಯೆ ಮಾಡಿದ್ದರು, ಇದರ ನೆನಪಿಗಾಗಿ ಅಂದಿನಿಂದ ಇಂದಿನವರೆಗೂ ಹುತಾತ್ಮ ದಿನಾಚರಣೆ ಆಚರಿಸಿಕೊಂಡು ಬಂದಿದ್ದೇವೆ, ಚೀನಾ ದೇಶವು ಸೈನಿಕರನ್ನು ಕೈದಿಗಳಾಗಿ ಬಂಧನದಲ್ಲಿ ಇಟ್ಟುಕೊಂಡು ಚಿತ್ರ ಹಿಂಸೆ ನೀಡಿದ್ದರು ಎಂದರು.
ದೇಶದ ನಾಗರಿಕರ ಸಂರಕ್ಷಣೆಗೆ ಪೊಲೀಸರು ಕಟಿಬದ್ಧರಾಗಿರುವುದು ನಿಜಕ್ಕೂ ಶ್ಲಾಘನೀಯ, ನಾಗರಿಕರ ಹಿತ ಕಾಪಾಡಲು ಪೊಲೀಸರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅವರು ನಿರ್ವಹಿಸುವ ಕರ್ತವ್ಯದ ಹಿನ್ನೆಲೆಯಲ್ಲಿ ನಾವೆಲ್ಲರೂ ಸುಭೀಕ್ಷವಾಗಿ, ಸುರಕ್ಷಿತವಾಗಿ ಇದ್ದೇವೆ, ಈ ದೇಶದ ರಕ್ಷಣೆಗಾಗಿ, ಕಾನೂನು ಸುವ್ಯವಸ್ಥೆಗಾಗಿ, ಜನರ ಸಂರಕ್ಷಣೆಗಾಗಿ ತಮ್ಮ ಜೀವವನ್ನೇ ಪೊಲೀಸರು ಬಲಿದಾನ ಮಾಡಿದ್ದಾರೆ. ಹುತಾತ್ಮ ದಿನಾಚರಣೆ ಸಂದರ್ಭದಲ್ಲಿ ಅವರೆಲ್ಲರನ್ನೂ ನಾವು ಸ್ಮರಿಸೋಣ ಎಂದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್ ಕುಮಾರ್‌ ಶಹಪೂರ್ ವಾಡ್‌ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ನಾವು ಪೊಲೀಸ್‌ ಹುತಾತ್ಮರ ದಿನಾಚರಣೆ ಆಚರಿಸುತ್ತಿದ್ದೇವೆ, ನಮ್ಮ ದೇಶದಲ್ಲಿ ಉತ್ತರದ ಗಡಿಭಾಗ ವರ್ಷಪೂರ್ತಿ ಹಿಮದಿಂದ ಆವೃತವಾಗಿರುತ್ತದೆ, ಆ ಜಾಗದಲ್ಲಿ 1959 ರ ಅ. 21 ರಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ಸಿಆರ್‌ಪಿಎಫ್‌ ನವರು ಕಾವಲು ಕಾಯುತ್ತಿದ್ದರು, ಆಗ ಚೀನಾದ ಅಸಂಖ್ಯಾ ಸೈನಿಕರು ಒಳನುಗ್ಗಿದಾಗ ಅಪ್ರತಿಮವಾಗಿ ಹೋರಾಡಿ ಸಾವನ್ನಪ್ಪಿದ ವೀರ ಪೊಲೀಸರ ಸೇವೆ ಸ್ಮರಿಸುವ ಸಲುವಾಗಿ ಈ ಆಚರಣೆ ಮಾಡಲಾಗುತ್ತಿದೆ ಎಂದರು.
ದೇಶದಲ್ಲಿ ವೀರ ಮರಣವನ್ನಪ್ಪಿದ 377 ಮಂದಿ ಹುತಾತ್ಮ ಪೊಲೀಸರ ಹೆಸರುಗಳನ್ನು ಪಠಿಸಿ, ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌, ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಸಿದ್ದಾರ್ಥ ಗೋಯಲ್‌, ಡಿವೈಎಸ್ಪಿ ಶ್ರೀನಿವಾಸ್‌ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!