ರಾಜಕಾರಣಿಗಳ ವೈಯಕ್ತಿಕ ಟೀಕೆ ಸರಿಯಲ್ಲ: ಕೆ ಎನ್ ಆರ್

249

Get real time updates directly on you device, subscribe now.

ತುಮಕೂರು: ರಾಜಕಾರಣಿಗಳು ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ, ವೈಯಕ್ತಿಕ ಟೀಕೆಗಳು ರಾಜಕಾರಣಿಗಳಿಗೆ ಭೂಷಣ ತರುವುದಿಲ್ಲ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ನೀಡಿರುವ ಹೇಳಿಕೆ ಖಂಡಿಸಿದ ಅವರು, ರಾಹುಲ್ ಗಾಂಧಿಯವರ ಬಗ್ಗೆ ಡ್ರಗಿಸ್ಟ್, ಡ್ರಗ್‌ ಪೆಡ್ಲರ್‌ ಎಂದು ಕಟೀಲ್‌ ಹೇಳಿಕೆ ನೀಡಿರುವುದು ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆಗೆ ಶೋಭೆ ತರುವುದಿಲ್ಲ. ಈ ಹೇಳಿಕೆ ಕಟೀಲ್ ಗಿಂತ ಹೆಚ್ಚಾಗಿ ಆ ಪಕ್ಷಕ್ಕೂ ಶೋಭೆ ತರುವುದಿಲ್ಲ ಎಂದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ತಪ್ಪು ಹುಡುಕಬೇಕು ಎಂದರೆ ಒಂದಲ್ಲಾ ಒಂದು ತಪ್ಪು ಸಿಗುತ್ತವೆ, ಉಪ ಚುನಾವಣೆಯಲ್ಲಿ ಜನರನ್ನು ಆಕರ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ವೈಯಕ್ತಿಕ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದರು.
ರಾಹುಲ್ ಗಾಂಧಿಯವರನ್ನು ಡ್ರಗಿಸ್ಟ್, ಡ್ರಗ್‌ ಪೆಡ್ಲರ್‌ ಎಂದೆಲ್ಲ ಮಾತನಾಡುವ ಮೂಲಕ ಯಾರೂ ಸಹಿಸಿಕೊಳ್ಳಲಿಕ್ಕೆ ಆಗದೆ ಇರುವಂತಹ ಪದ ಬಳಕೆಯನ್ನು ಕಟೀಲ್‌ ಮಾಡಿದ್ದಾರೆ. ಆದರೆ ಯಡಿಯೂರಪ್ಪನವರು ಈ ಬಗ್ಗೆ ಸಮಜಾಯಿಷಿ ಕೊಟ್ಟಿರುವುದು ಕೊಂಚ ಸಮಾಧಾನ ತಂದಿದೆ ಎಂದರು.
ಹಾಗೆಯೇ ಸಿದ್ದರಾಮಯ್ಯನವರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ, ಏಕವಚನ ಪದ ಪ್ರಯೋಗ ಮಾಡುವುದೂ ರಾಜಕಾರಣಿಗಳ ಘನತೆಗೆ ತಕ್ಕದ್ದಲ್ಲ, ಯಾರೂ ಏಕ ವಚನದಲ್ಲಿ ಮಾತನಾಡುವುದನ್ನು ನಾನು ಒಪ್ಪುವುದಿಲ್ಲ, ಸಾರ್ವಜನಿಕವಾಗಿ ಮಾತನಾಡುವಾಗ ಏಕವಚನ ಪದ ಪ್ರಯೋಗ ಬಳಕೆ ಮಾಡಬಾರದು ಎಂದರು.
ನಾವೆಲ್ಲ ರಾಜಕಾರಣಿಗಳು, ನಮ್ಮನ್ನು ನಾವೇ ಬೈದುಕೊಂಡು ಹೋದರೆ ಸಾರ್ವಜನಿಕರ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ. ಈ ಬಗ್ಗೆ ರಾಜಕಾರಣಿಗಳಾದ ನಮಗೆ ಅರಿವಿರಬೇಕು, ರಾಜಕಾರಣಿಗಳಿಗೆ ವೈಯಕ್ತಿಕ ಜೀವನ ಮತ್ತು ಸಾರ್ವಜನಿಕ ಜೀವನ ಇರುತ್ತದೆ. ಹಾಗಾಗಿ ಯಾರೂ ವೈಯಕ್ತಿಕವಾಗಿ ಟೀಕೆ ಮಾಡಬಾರದು ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದು.
ಕಾಂಗ್ರೆಸ್‌ ಪಕ್ಷ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ, ಎಲ್ಲಾ ಜಾತಿಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂದ ಅವರು, ಚುನಾವಣೆಯಲ್ಲಿ ಗೆಲ್ಲಲ್ಲು ಎಲ್ಲಾ ಜಾತಿಯ ಮತ ಮುಖ್ಯ, ಒಂದೇ ಜಾತಿಯ ಮತಗಳಿಂದ ಯಾರೂ ಗೆಲ್ಲಲು ಸಾಧ್ಯವಿಲ್ಲ ಎಂದರು.
ಉಪ ಚುನಾವಣೆಯಲ್ಲಿ ಜೆಡಿಎಸ್ ನವರು ಬಿಜೆಪಿಯೊಂದಿಗೆ ಹೊಂದಾಣಿಕೆಯಲ್ಲೇ ಇದ್ದಾರೆ, ಬಿಜೆಪಿಗೆ ಸಹಾಯವಾಗುವ ರೀತಿಯಲ್ಲಿ ಇವರ ನಡವಳಿಕೆ ಕಂಡು ಬರುತ್ತಿದೆ, ಹಾಗಾಗಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದರು.
ಮೇಲ್ನೋಟಕ್ಕೆ ಕುಮಾರಸ್ವಾಮಿ ಅವರು ಆರ್ ಎಸ್ ಎಸ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಅಷ್ಟೆ, ಮೊದಲಿನಿಂದಲೂ ಜೆಡಿಎಸ್‌ ಬಿಜೆಪಿಯ ಬಿ ಟೀಮ್‌ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಗುಬ್ಬಿಯಲ್ಲಿ ನಡೆಯಲಿರುವ ಜೆಡಿಎಸ್‌ ಸಮಾವೇಶ ಶಾಸಕ ಶ್ರೀನಿವಾಸ್‌ ವಿರುದ್ಧದ ಸಮಾವೇಶ, ನಾನಂತೂ ಶ್ರೀನಿವಾಸ್‌ ಪರ ಇದ್ದೇನೆ, ಮುಂದೆ ಏನಾಗುತ್ತದೋ ಕಾದು ನೋಡೋಣ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!