ತುಮಕೂರು ಬಂದ್‌ ಯಶಸ್ವಿ

ಬಂದ್ ಗೆ ಬೆಂಬಲ ನೀಡಿದ ಸಾರ್ವಜನಿಕರು

3,365

Get real time updates directly on you device, subscribe now.

ತುಮಕೂರು: ಬಜರಂಗದಳ ಕಾರ್ಯಕರ್ತರಾದ ಮಂಜು ಭಾರ್ಗವ್‌ ಮತ್ತು ಕಿರಣ್‌ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಗೋಹತ್ಯಾ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಆಚರಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ತುಮಕೂರು ಬಂದ್‌ ಯಶಸ್ವಿಯಾಗಿದೆ.
ಶುಕ್ರವಾರ ಬೆಳಗ್ಗೆಯಿಂದಲೇ ವ್ಯಾಪಾರಸ್ಥರು ಹಾಗೂ ಹೊಟೇಲ್ ಗಳನ್ನು ಮುಚ್ಚಿ ತುಮಕೂರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದವು, ಹಾಲಿನ ಅಂಗಡಿಗಳು, ಮೆಡಿಕಲ್‌ ಸ್ಟೋರ್ ಗಳು, ತರಕಾರಿ ಅಂಗಡಿಗಳು, ಆಸ್ಪತ್ರೆ, ಖಾಸಗಿ ಕ್ಲಿನಿಕ್ ಗಳು ಬಾಗಿಲು ತೆರೆದಿದ್ದನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟು, ಹೋಟೆಲ್ ಗಳು, ಖಾಸಗಿ ಕಚೇರಿಗಳು ಬಾಗಿಲು ಬಂದ್‌ ಮಾಡುವ ಮೂಲಕ ತುಮಕೂರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು ನಗರದಾದ್ಯಂತ ಕಂಡು ಬಂತು.
ನಗರದ ಎಂ.ಜಿ.ರಸ್ತೆ, ಬಿ.ಹೆಚ್‌.ರಸ್ತೆ, ಅಶೋಕ ರಸ್ತೆ, ಬಿ.ಜಿ.ಪಾಳ್ಯ ಸರ್ಕಲ್‌, ಮಂಡಿಪೇಟೆ ರಸ್ತೆ, ಗುಬ್ಬಿ ಗೇಟ್‌ ಸರ್ಕಲ್‌, ಎಸ್‌.ಎಸ್‌.ಪುರಂ, ಎಸ್‌ಐಟಿ ಮುಖ್ಯ ರಸ್ತೆ ಸೇರಿದಂತೆ ನಗರದ ಎಲ್ಲಾ ರಸ್ತೆಗಳಲ್ಲಿನ ಅಂಗಡಿಗಳು ಬಾಗಿಲು ಹಾಕಿದ್ದವು.
ಆದರೆ ಕೆಎಸ್ಸಾರ್ಟಿಸಿ ಬಸ್ ಗಳು, ಖಾಸಗಿ ಬಸ್‌ಗಳು, ಕಾರು, ಸರಕು ಸಾಗಾಣೆ ವಾಹನಗಳು ಹಾಗೂ ಆಟೋ ರಿಕ್ಷಾಗಳ ಸಂಚಾರ ಎಂದಿನಂತಿತ್ತು, ವಾಹನಗಳ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ, ಹೀಗಾಗಿ ನಗರಕ್ಕೆ ಬರುವ, ನಗರದಿಂದ ಹೊರ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ.
ಬಂದ್‌ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೈಕ್‌ ರ್ಯಾಲಿ ಮೂಲಕ ಹಲ್ಲೆ ಖಂಡಿಸಿ ಆಕ್ರೋಶ ಹೊರಹಾಕಿದರು. ಟೌನ್ ಹಾಲ್ ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ನಂತರ ಟೌನ್ ಹಾಲ್ ನಿಂದ ಚರ್ಚ್‌ ಸರ್ಕಲ್ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ಹಿಂದೂ ಪರಿಷತ್‌ ವಿಭಾಗೀಯ ಉಸ್ತುವಾರಿ ಬಸವರಾಜು ಮಾತನಾಡಿ, ನಗರದಲ್ಲಿರುವ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಿಸಬೇಕು ಹಾಗೂ ಮಂಜು ಭಾರ್ಗವ್ ಗೆ ಕೊಲೆ ಬೆದರಿಕೆ ಹಾಕಿದ್ದ ಇಸ್ಮಾಯಿಲ್‌ ಅವರನ್ನು ಬಂಧಿಸುವಂತೆ ಆಗ್ರಹಿಸಿದ ಅವರು ಹಿಂದೂಗಳನ್ನು ಮುಟ್ಟಿದರೆ ಎಲ್ಲರು ಒಗ್ಗಟ್ಟಾಗುತ್ತಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ ಎಂದು ಹೇಳಿದರು.
ಹಿಂದೂ ಯುವಕರು ಶಾಂತಿ ಕಳೆದುಕೊಂಡರೆ ಏನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ ಎಂದ ಅವರು ಶಾಂತಿಯುತವಾಗಿ ಪ್ರತಿಭಟನೆ ಮಾಡುವುದಾಗಿ ಜಿಲ್ಲೆಯ ಪೊಲೀಸರಿಗೆ ಮನವಿ ಮಾಡಿದ್ದೆವು, ಅದರಂತೆ ಎಲ್ಲಾ ಕಾರ್ಯಕರ್ತರು ಶಾಂತಿ ಕಾಪಾಡಬೇಕು, ಕಾರ್ಯಕರ್ತರು ಏನಾದರೂ ಮಾಡುತ್ತಾರೆ ಎನ್ನುವ ಭಯ ಪೊಲೀಸರಿಗೆ ಇತ್ತು, ಆದರೆ ನಮ್ಮ ಹುಡುಗರು ಅದಕ್ಕೆ ಅವಕಾಶ ಕೊಡದೆ ಇದ್ದುದಕ್ಕೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಶಾಸಕ ಜ್ಯೋತಿಗಣೇಶ್‌ ಮಾತನಾಡಿ, ಹಿಂದೂಪರ ಸಂಘಟನೆಗಳು ಮಾಡಿರುವ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಅವರ ಸರ್ಕಾರದ ಮೇಲೆ ಭರವಸೆ ಇಡಬೇಕು ಎಂದು ಮನವಿ ಮಾಡಿದ ಅವರು, ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ನಡೆದ ಬಂದ್‌ ಹಾಗೂ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಪಾಲ್ಗೊಳ್ಳುವ ಮೂಲಕ ಸಹಕರಿಸಿದ ಜನರಿಗೆ ಹಾಗೂ ವ್ಯಾಪಾರಿಗಳಿಗೆ, ಯುವಕರಿಗೆ ಕೃತಜ್ಞತೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಮಾತನಾಡಿ, ಪೊಲೀಸ್‌ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಮೂಲಕ ಬೇಡಿಕೆ ಸಲ್ಲಿಸಿದ್ದೀರಿ, ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಗೋರಕ್ಷಣೆ ಮಾಡುವ ನಿಟ್ಟಿನಲ್ಲಿ ಶಿರಾದಲ್ಲಿ ಗೋಶಾಲೆ ತೆರೆಯಲು ಜಾಗ ಗುರುತಿಸಲಾಗಿದೆ, ಹಾಗೆಯೇ ಗೋರಕ್ಷಕರು ಪ್ರಾರಂಭಿಸುವ ಗೋ ಶಾಲೆಗಳಿಗೆ ಸಹಕಾರ ನೀಡುವುದಾಗಿ ಹೇಳಿದ ಅವರು, ನಗರದಲ್ಲಿ ನಡೆಯುತ್ತಿರುವ ಅನಧಿಕೃತ ಕಸಾಯಿಖಾನೆಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತೆ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು ರೀತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.
ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಪೂರವಾಡ್‌, ಎಎಸ್ಪಿ ಉದೇಶ್‌, ಡಿವೈಎಸ್ಪಿ ಶ್ರೀನಿವಾಸ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ್‌ ಬಿದರೆ, ಹಿಂದೂಪರ ಸಂಘಟನೆಯ ಮುಖಂಡ ಜಿ.ಕೆ.ಶ್ರೀನಿವಾಸ್‌ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!