ಗುಬ್ಬಿ: ಹೇಮಾವತಿ ನಾಲೆಯಲ್ಲಿ ಸಾಕಷ್ಟು ನೀರು ಹರಿಯುತ್ತಿರುವುದರಿಂದ ಗುಬ್ಬಿ ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಕಡಬ ಕೆರೆ ಮಾತ್ರ ಬಾಕಿ ಇದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ಪಟ್ಟಣದ ಅಮಾನಿಕೆರೆ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಮಾತನಾಡಿ, 15 ದಿನಗಳಿಂದ ಕೋಡಿ ಹೋಗುತ್ತಿದ್ದು ಈಗ ಬಾಗಿನ ಅರ್ಪಣೆ ಮಾಡಲಾಗಿದ್ದು, ಎಲ್ಲಾ ಕೆರೆಗಳು ತುಂಬುತ್ತಿರುವುದರಿಂದ ರೈತಾಪಿ ವರ್ಗದವರಿಗೆ ಸಾಕಷ್ಟು ಅನುಕೂಲಕರವಾಗಿದೆ ಎಂದರು.
ಗುಬ್ಬಿಯಲ್ಲಿ ಸಮಾವೇಶ ಮಾಡುತ್ತಿರುವವರು ಮಾಡಿಕೊಳ್ಳಲಿ, ನಮ್ಮ ಯಾವುದೇ ಕಾರ್ಯಕರ್ತರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ, ಹಾಗಾಗಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ ಅವರು 2004 ರಿಂದಲೂ ನನ್ನ ಕಾರ್ಯಕರ್ತರು ನನ್ನ ಜೊತೆಯಲ್ಲಿದ್ದಾರೆ, ಹಾಗಾಗಿ ಯಾವುದೇ ಗೊಂದಲವಿಲ್ಲ, 3 ಜನ ಜೆಡಿಎಸ್ ಬಿಟ್ಟು ಹೊರ ಹೋಗಿರುವ ಕಾರ್ಯಕರ್ತರು ಮಾತ್ರ ಸಮಾವೇಶದ ಬಗ್ಗೆ ಓಡಾಡುತ್ತಿದ್ದಾರೆ ಬಿಟ್ಟರೆ ಬೇರೆ ಯಾರೂ ಕೂಡ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ ಎಂದರು.
ಪಕ್ಷದ ವರಿಷ್ಠರ ಜೊತೆಯಲ್ಲಿ ನಾನೇ ಮಾತುಕತೆಗೆ ಮುಂದಾದರೂ ಅವರಿಗೆ ಇಷ್ಟವಿಲ್ಲ ಎಂದ ಮೇಲೆ ನನಗೂ ಅದರ ಅವಶ್ಯಕತೆಯಿಲ್ಲ, ನಾನು ಕಾಂಗ್ರೆಸ್ಸಿಗೆ ಹೋಗುತ್ತೇನೋ ಬಿಜೆಪಿಗೆ ಹೋಗುತ್ತೇನೋ ಎಂಬ ಚಿಂತನೆಯನ್ನು ಮಾಡಿಲ್ಲ, ನಮ್ಮ ಪಕ್ಷದಲ್ಲಿ ನನಗೆ ಗೌರವ ಕೊಡುತ್ತಿಲ್ಲ ಎಂದ ಮೇಲೆ ಇಲ್ಲಿರುವುದು ಒಳಿತಲ್ಲ ಎಂಬುದೂ ನನ್ನ ಭಾವನೆ, ಬೆಮೆಲ್ ಕಾಂತರಾಜು ಹಾಗೂ ನಾನು ಇಬ್ಬರೂ ಸೇರಿಯೇ ಸಂಘಟನೆ ಮಾಡಬೇಕು ಎಂದುಕೊಂಡಿದ್ದೆವು ಹಾಗೂ ತುರುವೇಕೆರೆಯಲ್ಲೂ ಸಹ ಡ್ಯಾಮೇಜ್ ಆಗುತ್ತದೆ ಎಂದು ವರಿಷ್ಠರಿಗೆ ತಿಳಿಸಿದ್ದೆ, ಆದರೂ ನಮ್ಮ ರಾಜ್ಯ ನಾಯಕರು ನಮ್ಮಿಬ್ಬರನ್ನು ಹೊರಗೆ ಅಟ್ಟುತ್ತಿದ್ದಾರೆ, ಹಾಗಾಗಿ ಹೋದರೆ ಕಾಂತರಾಜು ಹಾಗೂ ನಾನು ಜೊತೆಯಲ್ಲೇ ಹೋಗುತ್ತೇವೆ, ನಾವು ಮಾತ್ರ ಅಲ್ಲ ರಾಜ್ಯದ ಸಾಕಷ್ಟು ಜನ ಇವರ ನಡವಳಿಕೆಯಿಂದ ಬೇಸತ್ತು ಪಕ್ಷ ಬಿಡುವ ನಿರ್ಧಾರ ಮಾಡಿದ್ದಾರೆ ಎಂದು ವರಿಷ್ಠರಿಗೆ ಟಾಂಗ್ ನೀಡಿದರು.
ಎಂಎಲ್‌ಸಿ ಕಾಂತರಾಜು ಮಾತನಾಡಿ, ನಾವು ಸನ್ಯಾಸಿಗಳಲ್ಲ, ರಾಜಕೀಯದಲ್ಲಿ ಸಾರ್ವಜನಿಕ ಸೇವೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬಂದಿದ್ದು ನಮಗೆ ಬೆಲೆ ಇಲ್ಲದಂತಹ ಪಕ್ಷದಲ್ಲಿ ನಾವು ಇರಲು ಸಾಧ್ಯವಿಲ್ಲ, ಹಾಗಾಗಿ ಮುಂದಿನ ದಿನದಲ್ಲಿ ನಮಗೆ ಅನುಕೂಲವಾಗುವಂಥ ಪಕ್ಷದೊಳಗೆ ನಾವು ಸಾಗುತ್ತಿದ್ದೇವೆ, ನಮಗೆ ಯಾವ ಪಕ್ಷ ತತ್ವ ಸಿದ್ಧಾಂತ ಒಪ್ಪುತ್ತದೆಯೋ ಆ ಪಕ್ಷಕ್ಕೆ ನಾವು ಹೋಗಿ ನಮ್ಮ ರಾಜಕೀಯ ಜೀವನ ಕಟ್ಟಿಕೊಳ್ಳಲು ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯರಾದ ಕುಮಾರ್, ರೇಣುಕಸ್ವಾಮಿ, ಶಿವಕುಮಾರ್, ಸಾದಿಕ್, ಮುಖಂಡರಾದ ಯೋಗಾನಂದ್, ವೆಂಕಟೇಶ್ ಇನ್ನಿತರರು ಹಾಜರಿದ್ದರು.
ಜೆಡಿಎಸ್ ಸಮಾವೇಶಕ್ಕೆ ನಮ್ಮ ಕಾರ್ಯಕರ್ತರು ಹೋಗಲ್ಲ: ಶ್ರೀನಿವಾಸ್
ನಮ್ಮನ್ನು ಪಕ್ಷದಿಂದ ಹೊರ ದಬ್ಬುತ್ತಿದ್ದಾರೆ
Get real time updates directly on you device, subscribe now.
Comments are closed.