ತುಮಕೂರು: ಆಧುನಿಕ ಜೀವನ ಶೈಲಿಯಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅಭಿಪ್ರಾಯಪಟ್ಟರು.
ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಮಾನಸಿಕ ವಿಭಾಗ, ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯಕೀಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಉತ್ತಮ ಜೀವನಕ್ಕಾಗಿ ಆರೋಗ್ಯ ಬಹು ಮುಖ್ಯ, ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನೂ ಉತ್ತಮವಾಗಿಟ್ಟುಕೊಳ್ಳಬೇಕು, ಈ ನಿಟ್ಟಿನಲ್ಲಿ ಇಲಾಖೆಗಳು ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಶಿಕ್ಷಣ ನೀಡಬೇಕು ಎಂದರು.
ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ಪ್ರತಿ ವ್ಯಕ್ತಿಗೂ ಆರೋಗ್ಯ ಸಲಹೆ, ಚಿಕಿತ್ಸೆ ಪಡೆಯಲು, ಅಗತ್ಯ ಮಾಹಿತಿ ಪಡೆಯಲು ಹಾಗೂ ಮಾನವೀಯತೆ ದೃಷ್ಟಿಯಿಂದ ಸಾಮಾನ್ಯರೊಟ್ಟಿಗೆ ಸಂಘ ಜೀವನ ನಡೆಸಲು ಹಕ್ಕುಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ವೀರಭದ್ರಯ್ಯ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲಾ ಒಂದು ರೀತಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಕೆಲವರಲ್ಲಿ ರೋಗದ ತೀವ್ರತೆ ಹೆಚ್ಚಾಗಿರುತ್ತದೆ, ಅಂತಹವರನ್ನು ಗುರುತಿಸಿ ಅವರೊಟ್ಟಿಗೆ ಸ್ನೇಹಯುತವಾಗಿ ಒಡನಾಟ ಬೆಳೆಸಿಕೊಳ್ಳುವುದರ ಮೂಲಕ ಅವರನ್ನು ಸಾಮಾನ್ಯರಂತೆ ಕಾಣುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮತ್ತು ಪೋಷಕರ ನಡುವೆ ಮಾನಸಿಕ ಅಂತರ ಹೆಚ್ಚಾಗುತ್ತಿರುವುದರಿಂದ ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳುವ ಹಂತ ತಲುಪುತ್ತಿದ್ದಾರೆ ಎಂದರಲ್ಲದೆ, ಅಗತ್ಯಕ್ಕಿಂತ ಹೆಚ್ಚಿನ ಸಲುಗೆಯ ಪರಿಣಾಮ ಸಣ್ಣ ಪುಟ್ಟ ವಿಷಯಗಳಿಗು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಮಕ್ಕಳಿಗೂ ಮಾನಸಿಕ ಆರೋಗ್ಯದ ಶಿಕ್ಷಣ ಮತ್ತು ಅರಿವು ಮೂಡಿಸುವಲ್ಲಿ ಪೋಷಕರು ಜಾಗೃತರಾಗಬೇಕು ಎಂದರು.
ಮನೋವೈದ್ಯ ಡಾ.ಸುರೇಂಧರ್‌ನಾಥ್ ಡಿ.ಎಸ್. ಮಾತನಾಡಿ ಹಣವಂತರಿಗೆ ಮಾತ್ರ ಚಿಕಿತ್ಸೆ ಎಂಬ ಪರಿಕಲ್ಪನೆ ಬದಲಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ದೊರೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಡಾ.ಲೋಕೇಶ್ ಬಾಬು ಮಾನಸಿಕ ಆರೋಗ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ, ಮಧುಗಿರಿ ತಾಲ್ಲೂಕು ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋವೈದ್ಯ ಸರ್ವೇಶ್ ಕುಮಾರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಮತ್ತು ಮಾನಸಿಕ ರೋಗ ನಿವಾರಣಾಧಿಕಾರಿ ಡಾ.ಚೇತನ್ ಎಂ, ಡಿಹೆಚ್‌ಇಓ ಚಂದ್ರಪ್ಪ ಎನ್.ಟಿ, ಜಿಲ್ಲಾ ಮಲೇರಿಯಾ ಅಧಿಕಾರಿ ಪುರುಷೋತ್ತಮ್, ಕುಟುಂಬ ಕಲ್ಯಾಣಾಧಿಕಾರಿ ಮಹಿಮಾ ಮತ್ತಿತರರು ಇದ್ದರು.
Get real time updates directly on you device, subscribe now.
Comments are closed.