ಅಭಿವೃದ್ಧಿ ಕೆಲಸಗಳು ಕುಂಠಿತ- ಪ್ರಗತಿ ಪರಿಶೀಲನೆಯೂ ಇಲ್ಲ

ಶಿರಾ ತಾಪಂ ತ್ರೈಮಾಸಿಕ ಕೆಡಿಪಿ ಸಭೆ ಯಾವಾಗ?

246

Get real time updates directly on you device, subscribe now.

ಶಿರಾ: ಕೊರೊನಾ ಕಾರಣ ಶಿರಾ ತಾಲ್ಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ದರೆ, ಪ್ರಗತಿ ಪರಿಶೀಲನೆ ನಡೆಸಬೇಕಿದ್ದ ಶಾಸಕರು ಸಂಬಂಧಪಟ್ಟ ಸಭೆ ನಡೆಸದೆ ಇರುವ ಕಾರಣ ಯಾವುದೇ ಮಾಹಿತಿ ಜನರಿಗೆ ಸಿಕ್ಕದಾಗಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಎಂದರೆ ತಾಲ್ಲೂಕು ಪಂಚಾಯಿತಿಯ ಪ್ರಸಕ್ತ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಇನ್ನೂ ಪ್ರಾರಂಭವೇ ಅಗಿಲ್ಲ.
ಕಳೆದ 2020- 21ನೇ ಸಾಲಿನ ಕಡೆಯ ಪ್ರಗತಿ ಪರಿಶೀಲನೆ ನಭೆ ನಡೆದಿದ್ದು, ಪ್ರಸ್ತುತ ವರ್ಷದ ಫೆಬ್ರವರಿ ಮಾಹೆಯಲ್ಲಿ, ಅಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಲೋಕಸಭಾ ಸದಸ್ಯ ನಾರಾಯಣಸ್ವಾಮಿ, ಶಾಸಕರಾದ ಸಿ.ಎಂ.ರಾಜೇಶ್‌ ಗೌಡ, ಚಿದಾನಂದ ಗೌಡ, ತಿಪ್ಪೇಸ್ವಾಮಿ ಅವರು ಹಾಜರಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆಯುವ ಮೂಲಕ ಸಭೆ ನಡೆಸಿದ್ದರು.
ಪ್ರಸ್ತುತ ವರ್ಷ 15ನೇ ಹಣಕಾಸು ಹಾಗೂ ಅನಿರ್ಬಂಧಿತ ಅನುದಾನ ಬಿಡುಗಡೆಯಾಗಿ, ಕ್ರಿಯಾ ಯೋಜನೆಗಳು ಪ್ರಾರಂಭವಾಗಿವೆ. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಾಸಕರ ಅನುಮತಿ ಪಡೆದು ದಿನಾಂಕ ನಿಗದಿಪಡಿಸಿ ತ್ರೈಮಾಸಿಕ ಸಭೆ ನಿಗದಿಪಡಿಸಲು ಹಿಂದೇಟು ಹಾಕುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ, ಇದಲ್ಲದೆ ಕಳೆದ 2020- 21ನೇ ಸಾಲಿನ ಪ್ರಗತಿ ಪರಿಶೀಲನೆ ಕೂಡ ಮುಕ್ತಾಯಗೊಂಡಿಲ್ಲ.
ತ್ರೈಮಾಸಿಕ ಸಭೆ ವಿಳಂಬತೆ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್‌ ಅವರನ್ನು ಮಾತನಾಡಿಸಿದಾಗ ಕೊರೋನ ಕಾರಣದಿಂದ ಇದುವರೆಗೂ ತ್ರೈಮಾಸಿಕ ಸಭೆ ಕರೆಯಲು ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. ಶಾಸಕರು ರಾಜಕೀಯಕ್ಕೆ ಹೊಸಬರಾಗಿದ್ದು, ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಸೇವೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಅವರಿಗೆ ತ್ರೈಮಾಸಿಕ ಸಭೆ ನಡೆಸುವ ಬಗ್ಗೆ ಅಧಿಕಾರಿಗಳಿಂದ ಸರಿಯಾದ ಮಾರ್ಗದರ್ಶನ ದೊರೆತಂತೆ ಕಾಣುತ್ತಿಲ್ಲ.
ತಾಲೂಕು ಪಂಚಾಯಿತಿ ಹಿಂದಿನ ಅಧ್ಯಕ್ಷ ಚಂದ್ರಯ್ಯ ಅಧ್ಯಕ್ಷತೆಯಲ್ಲಿ ಪ್ರಸ್ತುತ ವರ್ಷದ ಏಪ್ರಿಲ್‌ 19ರಂದು ರಂದು ಕೆಡಿಪಿ ಸಭೆ ನಡೆದಿದೆ. ನಂತರ ಚುನಾಯಿತ ಸಮಿತಿಯ ಅವಧಿ ಮುಗಿದಿದ್ದು, ಗಿರೀಶ್‌ ಎಂಬುವವರು ಆಡಳಿತ ಅಧಿಕಾರಿಯಾಗಿ ನೇಮಕಗೊಂಡು ಜೂನ್‌ 18 ರಂದು ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ನಂತರ ಗಿರೀಶ್‌ ಜಾಗಕ್ಕೆ ಡಾ.ರಮೇಶ್‌ ಎಂಬವರು ಆಡಳಿತ ಅಧಿಕಾರಿಯಾಗಿ ನೇಮಕಗೊಂಡು ಸೆಪ್ಟೆಂಬರ್‌ 1ರಂದು ಮತ್ತೊಂದು ಸಭೆ ನಡೆಸಿದ್ದಾರೆ. ಆದರೆ ಶಾಸಕರಿಂದ ನಡೆಯಬೇಕಿದ್ದ ತ್ರೈಮಾಸಿಕ ಸಭೆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ ಮತ್ತು ಇದರ ಬಗ್ಗೆ ಶಾಸಕರ ಗಮನ ಸೆಳೆದಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ಅವರ ಗಮನ ಸೆಳೆದಾಗ, ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಸೂಕ್ತ ನಿರ್ದೇಶನ ನೀಡುವ ಭರವಸೆ ನೀಡಿದ್ದಾರೆ.
ಇಷ್ಟೇ ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಪ್ರತಿ ತಿಂಗಳು ನಡೆಯಬೇಕಿದ್ದ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಕೂಡ ನಿಯಮಿತವಾಗಿ ನಡೆದಿಲ್ಲ. ಒಟ್ಟು 27 ಇಲಾಖೆಗಳ ಪ್ರಗತಿ ಪರಿಶೀಲನೆ ವಿಳಂಬವಾದರೆ ತಾಲೂಕಿನ ಪ್ರಗತಿ ಕುಂಠಿತವಾಗುತ್ತದೆ. ಪ್ರಸಕ್ತ ಸಾಲಿನ ತ್ರೈಮಾಸಿಕ ಸಭೆಗೆ ಮುಹೂರ್ತ ಯಾವಾಗ ಎಂಬುದಕ್ಕೆ ಶಾಸಕರೇ ಉತ್ತರಿಸಬೇಕಿದೆ.

Get real time updates directly on you device, subscribe now.

Comments are closed.

error: Content is protected !!