ನೀರಾವರಿ ಹೋರಾಟದ ಗಂಧಗಾಳಿ ಗೊತ್ತಿಲ್ಲ: ಸುರೇಶ್ ಗೌಡ

ಶಾಸಕ ಗೌರಿಶಂಕರ್ ಗೆ ಜ್ಞಾನದ ಕೊರತೆ

559

Get real time updates directly on you device, subscribe now.

ತುಮಕೂರು: ಅಲೋಕೇಷನ್‌ ಇಲ್ಲದ ಕೆರೆಗಳಿಗೆ ನೀರು ಹರಿಸಿರುವವರು, ಅಲೋಕೇಷನ್‌ ಇರುವ ಕೆರೆಗಳಿಗೆ ನೀರು ಹರಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಕುಣಿಯಲು ಆಗದವರು ನೆಲ ಡೊಂಕು ಎನ್ನುವಂತೆ ಗೂಳೂರು- ಹೆಬ್ಬೂರು ಏತ ನೀರಾವರಿ ಯೋಜನೆಯೇ ಅವೈಜ್ಞಾನಿಕ ಎನ್ನುತ್ತಿದ್ದಾರೆ ಎಂದು ಸಚಿವ ಮಾಧುಸ್ವಾಮಿ, ಶಾಸಕ ಗೌರಿಶಂಕರ್‌ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಲ್ಕು ದಶಕಗಳ ಕಾಲ ರೈತರು ಹೋರಾಟ ಮಾಡಿದ ಫಲವಾಗಿ ಜಾರಿಯಾದ ಹೆಬ್ಬೂರು- ಗೂಳೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎನ್ನುವವರು ತಾಂತ್ರಿಕ ಸಮಿತಿ ವರದಿಯಂತೆ ಸತತ ಮೂರು ತಿಂಗಳ ಕಾಲ ನೀರು ಹರಿಸಲಿ, ಕೆರೆ ತುಂಬುವುದೋ ಇಲ್ಲವೋ ನೋಡೋಣ ಎಂದು ಸವಾಲು ಹಾಕಿದರು.
ಶಾಸಕ ಗೌರಿಶಂಕರ್ ಗೆ ಮಾಹಿತಿ ಕೊರತೆ ಇದೆ, ಆತನಿಗೆ ಜ್ಞಾನವೇ ಇಲ್ಲ, ನೀರಾವರಿ ಯೋಜನೆಗಳ ಬಗ್ಗೆ ದೇವೇಗೌಡರ ಬಳಿ ಮಾಹಿತಿ ಪಡೆದುಕೊಳ್ಳಲಿ, ಶಾಸಕರಾದವರು ಜನರಿಗೆ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಹೇಳಿದರು.
ಈ ಹಿಂದೆ ನಾಗವಲ್ಲಿ, ಹೆಬ್ಬೂರು, ಹೊನ್ನುಡಿಕೆ, ಹೊನಸಿಗೆರೆ ಕೆರೆಗಳಿಗೆ ಇದೇ ಯೋಜನೆಯಲ್ಲಿ ನೀರು ಹರಿಸಲಾಗಿತ್ತು, ಕೆರೆ ತುಂಬಿಸಲಾಗಿತ್ತು, ಅಲೋಕೇಷನ್‌ ಇಲ್ಲದ ಕೆರೆಗಳಿಗೆ ನೀರು ಹರಿಸಿ, ಕಾನೂನು ಉಲ್ಲಂಘಿಸುವವರು, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ನಿಗದಿಯಾಗಿರುವ ಕೆರೆಗಳಿಗೆ ನೀರು ಹರಿಸದೆ, ಏತ ನೀರಾವರಿ ಯೋಜನೆಯನ್ನು ಹಳ್ಳಹಿಡಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.

ನೀರು ಹರಿಸದಿದ್ದರೆ ಹೋರಾಟ: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಯೋಜನೆಯ ಕೆರೆಗಳಿಗೆ ನೀರು ಹರಿಸದೆ ಇದ್ದರೆ ಸತ್ಯಾಗ್ರಹ ನಡೆಸುವುದಾಗಿ ಹೇಳಿದ ಅವರು, ಅಲೋಕೇಷನ್‌ ಇಲ್ಲದ ಕೆರೆಗಳಿಗೆ ನೀರು ತುಂಬಿಸುವುದನ್ನು ಬಿಟ್ಟು, ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಅವರು ನೀರಾವರಿ ಯೋಜನೆಯ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿದರು.
ಗೂಳೂರು- ಹೆಬ್ಬೂರು ಏತ ನೀರಾವರಿ ಯೋಜನೆಯೊಂದಿಗೆ ಪ್ರಾರಂಭವಾದ ತಿಪಟೂರು ಬಹುಗ್ರಾಮ, ಮಾಧುಸ್ವಾಮಿ ಅವರೇ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ, ಅರಸೀಕೆರೆಯ ಯೋಜನೆಗಳು ಯಶಸ್ವಿಯಾಗಿವೆ, ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯ ಕೆರೆಗೆ ನೀರು ಹರಿಸಿಕೊಳ್ಳಲಾಗಿದೆ, ಆದರೂ ಈ ಯೋಜನೆ ವಿಚಾರದಲ್ಲಿ ಮಾತ್ರ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.
ಕಾವೇರಿ ನೀರಾವರಿ ವಿವಾದದ ನಡುವೆಯೇ ಕುಡಿಯುವ ನೀರಿನ ಹನ್ನೊಂದು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ, ಕುಣಿಯಲು ಆಗದವರು ನೆಲ ಡೊಂಕು ಎನ್ನುವಂತೆ ಉಸ್ತುವಾರಿ ಸಚಿವರು ಅವೈಜ್ಞಾನಿಕ ಎನ್ನುತ್ತಿದ್ದಾರೆ, ನೀರಾವರಿ ತಜ್ಞರಾದ ಹೆಚ್‌.ಡಿ.ದೇವೇಗೌಡ, ಬಸವರಾಜ ಬೊಮ್ಮಾಯಿ ಅವರ ಸಲಹೆ ಮಾರ್ಗದರ್ಶನ ಪಡೆದುಕೊಳ್ಳಲಿ ಎಂದು ಒತ್ತಾಯಿಸಿದರು.

ಬರದಲ್ಲಿ ನೀರು ಸಾಧ್ಯವೇ?: 2016-17, 2017-18ರಲ್ಲಿ ಏತ ನೀರಾವರಿ ಯೋಜನೆಯಡಿ ನೀರು ಹರಿಸಲಾಗಿಲ್ಲ ಎಂದು ಆರೋಪ ಮಾಡಲಾಗುತ್ತಿದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಉಂಟಾದ ಬರ ಪರಿಸ್ಥಿತಿಯಿಂದಾಗಿ 2016- 17, 2017- 18ರಲ್ಲಿ ಕೇವಲ ಆರು ಟಿಎಂಸಿ ನೀರು ಜಿಲ್ಲೆ ಹರಿಸಲಾಗಿದೆ, ಅಂತಹ ಬರ ಪರಿಸ್ಥಿತಿಯಲ್ಲಿ ನೀರು ಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾವೇರಿ ನೀರಾವರಿ ಪ್ರದೇಶದಲ್ಲಿ ಮಳೆಯಿಂದಾಗಿ ನೀರು ಸಮುದ್ರದ ಪಾಲಾಗುತ್ತಿದ್ದರು ಸಹ ಜಿಲ್ಲೆಯಲ್ಲಿ ನಿಗದಿಯಾಗಿರುವ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಎಂತಹ ಅಸಮರ್ಥರು ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು, ಬರೀ ಸುಳ್ಳುಗಳನ್ನೇ ಹೇಳಿಕೊಂಡು ಜನರಿಗೆ ಮಕ್ಮಲ್‌ ಟೋಪಿ ಹಾಕುವುದನ್ನು ಬಿಟ್ಟು ನೀರು ಹರಿಸಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರವೀಶ್‌, ಮಾಜಿ ಜಿಪಂ ಸದಸ್ಯ ಗೂಳೂರು ಶಿವಕುಮಾರ್‌, ಮಾಜಿ ತಾಪಂ ಸದಸ್ಯ ನರಸಿಂಹಮೂರ್ತಿ, ಎಪಿಎಂಸಿ ಅಧ್ಯಕ್ಷ ಉಮೇಶ್‌ಗೌಡ, ಸಿದ್ದೇಗೌಡ ಸೇರಿದಂತೆ ಇತರರಿದ್ದರು.

ಗೌರಿಶಂಕರ್‌ ಅಸಮರ್ಥ ಶಾಸಕ
ಎಲ್ಲೋ ಇದ್ದ ಗಿರಾಕಿ, ಇಲ್ಲಿ ಬಂದು ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡು ಗೆದ್ದ ಗ್ರಾಮಾಂತರ ಶಾಸಕರು ನೀರಾವರಿ ಹೋರಾಟದ ಗಂಧಗಾಳಿ ಗೊತ್ತಿಲ್ಲದೇ ಮಾತನಾಡುತ್ತಿದ್ದಾರೆ, ನೀರು ಕೊಡ್ರಿ ಅಂದ್ರೆ ಬೀರು ಕೊಡ್ತೀವಿ ಎನ್ನುವರಿಗೆ ನಾಗವಲ್ಲಿ ಕೆರೆಗೆ ನೀರು ತುಂಬಿತ್ತಾ ಇಲ್ಲವೇ ಗೊತ್ತಿಲ್ಲವಾ? ಯೋಜನೆ ಅವೈಜ್ಞಾನಿಕವಾಗಿಲ್ಲ ಎನ್ನುವವರಿಗೆ ನೀರು ತುಂಬಿಸುವ ಯೋಗ್ಯತೆ ಇಲ್ಲದ ಅಸಮರ್ಥ ಶಾಸಕರು.
-ಬಿ.ಸುರೇಶ್‌ಗೌಡ, ಮಾಜಿ ಶಾಸಕ

Get real time updates directly on you device, subscribe now.

Comments are closed.

error: Content is protected !!