ಗುಬ್ಬಿ: ನಮ್ಮ ಸಮುದಾಯದ ನಾಯಕರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂದು ಹೊರಟಿದ್ದಾರೆ, ಹಾಗಾಗಿ ನಮ್ಮ ಪಕ್ಷದ ಶಾಸಕರಿಗೆ ಮೈಂಡ್ ವಾಷ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜೆಡಿಎಸ್ ಸಮಾವೇಶ ಹಾಗೂ ಯುವ ಮುಖಂಡ ಬಿ.ಎಸ್.ನಾಗರಾಜು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಗೆ ದೇವೇಗೌಡರು ಸಂಸದರ ಚುನಾವಣೆಗೆ ಬರಲ್ಲ ಎಂದು ಹೇಳಿದ್ದರೂ ಒತ್ತಾಯ ಪೂರ್ವಕವಾಗಿ ತಂದು ವ್ಯವಸ್ಥಿತವಾಗಿ ಯಾರು ಸೋಲಿಸಿದರು ಎಂಬುದು ನಮಗೆ ಗೊತ್ತಿದೆ, ಇನ್ನೂ ಪಕ್ಕದ ಕ್ಷೇತ್ರ ತುರುವೇಕೆರೆಯಲ್ಲಿ ನಮ್ಮ ಪಕ್ಷದಲ್ಲಿ ಶಾಸಕರು ಗೆದ್ದರೆ ನನಗೆ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಅಲ್ಲಿ ಅವರನ್ನು ಹೇಗೆ ಸೋಲಿಸಿದ್ದಾರೆ ಎಂಬ ಮಾಹಿತಿಯೂ ಇದೆ, ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ಕಳೆದ 2 ವರ್ಷದಿಂದಲೂ ನನ್ನ ಬಗ್ಗೆ ಹಾಗೂ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುವುದು ನನಗೆ ಗೊತ್ತಿದೆ, ನಮ್ಮ ಪಕ್ಷದಲ್ಲಿಯೇ ಇದ್ದು ಈ ರೀತಿ ಮಾಡುವುದು ಒಳಿತಲ್ಲ ಎಂದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ತುಮಕೂರು ಜಿಲ್ಲೆಯಲ್ಲಿ ಕುಂಚಿಟಿಗ ಸಮಾಜದವರನ್ನು ಮಂತ್ರಿ ಮಾಡಬೇಕು ಎಂಬುದು ದೇವೇಗೌಡರ ಒತ್ತಾಯವಾಗಿತ್ತು, ಆದರೆ ನಾನು ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಮಂತ್ರಿ ಮಾಡಿದ್ದು ನನ್ನ ತಪ್ಪಾಯಿತೆ, ನಾನು ಯಾವತ್ತೂ ಅವರಿಗೆ ಮೋಸ ಮಾಡಿಲ್ಲ, ನನ್ನಿಂದ ಯಾವುದೇ ಸಮಸ್ಯೆ ಅವರಿಗೆ ಆಗಿಲ್ಲ, ನನ್ನ ಬಗ್ಗೆ ಎಷ್ಟು ಬೇಕಾದರೂ ಮಾತನಾಡಿ, ಆದರೆ ಇಂತಹ ಇಳಿ ವಯಸ್ಸಿನಲ್ಲಿ ರಾಜ್ಯವನ್ನು ತಿರುಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ, ಅವರ ಬಗ್ಗೆ ಮಾತಾನಾಡಬೇಡಿ ,ಅವರು ಶಿವನ ಭಕ್ತರು, ಅವರ ಬಗ್ಗೆ ಮಾತನಾಡಿದರೆ ದೇವರು ನೋಡಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಈ ಪಕ್ಷ ಕಟ್ಟಿರುವುದು ನಾನು ಮತ್ತು ದೇವೇಗೌಡರಲ್ಲ, ನೀವು ಕಟ್ಟಿರುವ ಪಕ್ಷವಾಗಿದೆ, ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ, ಅಂತಹ ಸಂದರ್ಭದಲ್ಲಿ ರೈತರ ಪರವಾಗಿ ಕೆಲಸ ಮಾಡಿದ್ದೇನೆ, ಇಪ್ಪತ್ತಾರು ಲಕ್ಷ ಕುಟುಂಬದ ರೈತರ ಸಾಲ ಮನ್ನಾ ಮಾಡಿದ್ದೇನೆ, ಹಲವು ಯೋಜನೆಗಳನ್ನು ಜಾರಿಗೆ ತಂದು ನಾಡಿನ ಜನರಿಗೆ ಒಳಿತು ಮಾಡಿದ್ದೇನೆ ಎನ್ನುವ ಆತ್ಮಸಾಕ್ಷಿ ನನಗೆ ಇದೆ, 12 ವರ್ಷದಿಂದ ಪಕ್ಷ ಕಟ್ಟಬೇಕಾದರೆ ನಾನು ಎಷ್ಟು ಹಿಂಸೆ ಅನುಭವಿಸಿದ್ದೇನೆ ಎಂದು ನನಗೆ ಗೊತ್ತು, ಆದರೆ ನೀವುಗಳು ಈ ಪಕ್ಷವನ್ನು ಉಳಿಸುವ ಕೆಲಸ ಮಾಡಿದ್ದೀರಾ ಎಂದರು.
ಇಲ್ಲಿನ ಶಾಸಕರು ನನಗೆ ವರ್ಚಸ್ಸು ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ, ಈಗ ವರ್ಚಸ್ಸು ಬೆಳೆಸಲು ಓಡಾಡುತ್ತಿದ್ದಾರೆ ಎಂದು ಹೇಳಿದ್ದಾರೆ, ಕೊರೊನಾ ಇದ್ದ ಕಾರಣ ಎಲ್ಲಿಯೂ ಸಂಘಟನೆ ಮಾಡುವುದಕ್ಕೆ ಬರಲಿಲ್ಲ, ಸಾವು ನೋವುಗಳಿದ್ದಾಗ ನಾವು ರಾಜಕೀಯ ಮಾಡಬಾರದು ಅನ್ನುವ ದೃಷ್ಟಿಯಲ್ಲಿ ಈಗ ಹೋರಾಟ ಮಾಡುತ್ತಿದ್ದೇವೆ ಎಂದರು.
ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ನಾಗರಾಜು ಅವರಿಗೆ ನಾನೇ ಕರೆ ಮಾಡಿ ಶ್ರೀನಿವಾಸ್ ಅವರ ಮನೆಗೆ ಹೋಗಿ ಕಾರ್ಯಕ್ರಮಕ್ಕೆ ಆಹ್ವಾನ ಮಾಡುವಂತೆ ಹೇಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವಂತೆ ಕೇಳಿಕೊಳ್ಳಿ ಎಂದು ತಿಳಿಸಿದ್ದೆ, ಆದರೆ ಆ ಆಹ್ವಾನವನ್ನು ಅವರು ತಿರಸ್ಕಾರ ಮಾಡಿದ್ದಾರೆ ಮತ್ತು ಸಿಂದಗಿಗೆ ಬಂದು ಮಾತನಾಡಿ ಎಂದು ಸಹ ನಾನು ಹೇಳಿದ್ದೆ, ಆದರೆ ಅಲ್ಲಿಗೂ ಬರಲಿಲ್ಲ, ಬಿಡದಿಯಲ್ಲಿ ನಡೆದ ಸಭೆಗೂ ಕೂಡ ನಾನೇ ಕರೆ ಮಾಡಿ ಬನ್ನಿ ಎಂದರೂ ಮೊದಲ ದಿನ ಬಂದು ಏನು ಮಾತನಾಡದೆ ಹೋಗಿದ್ದಾರೆ, ಬೇರೆ ಪಕ್ಷಕ್ಕೆ ಹೋಗುವುದಾದರೆ ಸಂತೋಷವಾಗಿ ಹೋಗಲಿ, ಆದರೆ ಪಕ್ಷದ ಬಗ್ಗೆ ಎಲ್ಲಿಯೂ ಮಾತನಾಡಬೇಡಿ ಎಂದು ತಿಳಿಸಿದ ಅವರು 2ಬಾರಿ ಬೇರೆಯವರ ಹಂಗಿನಲ್ಲಿ ಮುಖ್ಯಮಂತ್ರಿಯಾಗಿದ್ದೇನೆ, ಈ ಬಾರಿ ಅದು ಆಗದೆ ನೂರ 123 ಸೀಟುಗಳನ್ನು ರಾಜ್ಯದ ಜನರು ಈ ಬಾರಿ ಕೊಡಬೇಕು ಎಂದು ಮನವಿ ಮಾಡಿದರು.
ಗುಬ್ಬಿಯಲ್ಲಿ 3 ಬಾರಿ ನಮ್ಮ ಪಕ್ಷಕ್ಕೆ ಗೆಲುವು ಕೊಟ್ಟಿರುವ ನೀವು ಈ ಬಾರಿಯೂ ಗೆಲುವನ್ನ ಕೊಡಬೇಕು ಎಂದು ಮಾರ್ಮಿಕವಾಗಿ ನಾಗರಾಜ್ ಅವರ ಮುಖ ನೋಡಿ ತಿಳಿಸಿದರು.
ಜೆಡಿಎಸ್ ಸೇರ್ಪಡೆಗೊಂಡ ನಾಗರಾಜು ಮಾತನಾಡಿ, ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಬಂದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಂಬಿರುವ ನಾನು ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ನಾಯಕತ್ವ ಮತ್ತು ಅವರ ಜನಪರ ಕಾಳಜಿ ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಮುಂದಿನ ದಿನದಲ್ಲಿ ಗುಬ್ಬಿ ತಾಲ್ಲೂಕಿನ ಗಲ್ಲಿಗಲ್ಲಿಯಲ್ಲಿ ತಿರುಗಿ ಪಕ್ಷದ ಸಂಘಟನೆ ಹಾಗೂ ಯುವಕರನ್ನು ಒಗ್ಗೂಡಿಸಿ ಪಕ್ಷದ ಬಲವರ್ಧನೆಗೆ ಮುಂದಾಗುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ, ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್, ಮಧುಗಿರಿ ಶಾಸಕ ವೀರಭದ್ರಯ್ಯ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಎಂ.ಟಿ.ಕೃಷ್ಣಪ್ಪ, ಸುರೇಶ್ ಬಾಬು, ನಾಗರಾಜಯ್ಯ, ಸುಧಾಕರ್ ಲಾಲ್, ನಿಂಗಪ್ಪ ಸೇರಿದಂತೆ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಜರಿದ್ದರು.
ಎಂಟಿಕೆ ಸೋಲಿಗೆ ಕಾಂತರಾಜು ಕಾರಣ
ತುರುವೇಕೆರೆ ಕ್ಷೇತ್ರದ ಕೃಷ್ಣಪ್ಪನ ಸೋಲಿಗೆ ಮೂಲ ಕಾರಣ ಎಂಎಲ್‌ಸಿ ಕಾಂತರಾಜು, ಎಲ್ಲೋ ಇದ್ದವರನ್ನು ತುಮಕೂರು ಜಿಲ್ಲೆಗೆ ಕರೆದುಕೊಂಡು ಬಂದು ಎಂಎಲ್ಸಿ ಮಾಡಿದ ಪ್ರತಿಫಲವಾಗಿ ತುರುವೇಕೆರೆ ಕ್ಷೇತ್ರವನ್ನು ನಾವು ಕಳೆದುಕೊಂಡಿದ್ದೇವೆ, ಚುನಾವಣಾ ಸಮಯದಲ್ಲಿ ಕಾಂತರಾಜು ಅವರ ಸಂಬಂಧಿ ನಾರಾಯಣಗೌಡ ಎಂಬ ವ್ಯಕ್ತಿಯನ್ನು ನಿಲ್ಲಿಸಿ ಕೃಷ್ಣಪ್ಪ ಅವರನ್ನ ಸೋಲಿಸಲಾಗಿದೆ,
ಇವರೆಲ್ಲ ನಿಷ್ಠಾವಂತರು, ದೇವೇಗೌಡರಿಗೆ ಯಾರು ಎಷ್ಟು ಜನ ಟೋಪಿ ಹಾಕಿದ್ದಾರೆ ಎಂಬುದು ಗೊತ್ತಿದೆ, ಅವರು ಏನಾಗಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ, ಹಾಗಾಗಿ ಈ ಪಕ್ಷ ಉಳಿಸುವ ಬೆಳೆಸುವ ಕೆಲಸ ನಿಮ್ಮದು.
ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
Comments are closed.