20 ತಿಂಗಳಿಂದ ಮನೆಯಲ್ಲಿದ್ದ ಮಕ್ಕಳು ಸ್ಕೂಲ್ ಗೆ ಹಾಜರ್

ಶಾಲೆಗಳ ಆವರಣದಲ್ಲಿ ಚಿಣ್ಣರ ಕಲರವ ಶುರು

209

Get real time updates directly on you device, subscribe now.

ತುಮಕೂರು: ರಾಜ್ಯದಲ್ಲಿ ಕೋವಿಡ್‌-19 ಮಹಾಮಾರಿಯ ಆರ್ಭಟದ ಹಿನ್ನೆಲೆಯಲ್ಲಿ ಕಳೆದ 20 ತಿಂಗಳಿನಿಂದ ಬಂದ್‌ ಆಗಿದ್ದ 1 ರಿಂದ 5ನೇ ತರಗತಿ ಸೋಮವಾರದಿಂದ ಆರಂಭವಾಗಿದ್ದು, ಮನೆಯಲ್ಲೇ ಆನ್‌ಲೈನ್‌ ತರಗತಿಗಳನ್ನು ಕೇಳುತ್ತಿದ್ದ ಚಿಣ್ಣರು ಖುಷಿ, ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು.
ಜಿಲ್ಲೆಯಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆಗಳು, ಅನುದಾನ ರಹಿತ ಶಾಲೆಗಳು, ಖಾಸಗಿ ಶಾಲೆಗಳು ಮಾವಿನ ತೋರಣ, ಹೂವುಗಳಿಂದ ಸಿಂಗಾರಗೊಂಡು ಚಿಣ್ಣರನ್ನು ಸ್ವಾಗತಿಸಿದ ದೃಶ್ಯ ಕಂಡು ಬಂದವು.
ಕೊರೊನಾ 1ನೇ ಅಲೆ ನಂತರ ಮನೆಯಲ್ಲಿಯೇ ಉಳಿದು ಆನ್ ಲೈನ್‌ ತರಗತಿಗಳನ್ನು ಕೇಳುತ್ತಿದ್ದ ಚಿಣ್ಣರು ಪ್ರಾಥಮಿಕ ಶಾಲೆಗಳು ಆರಂಭವಾಗುವ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಮೇಲೆ ಒತ್ತಡ ಹೇರಿ ಖುಷಿಯಿಂದಲೇ ಶಾಲೆಗಳಿಗೆ ತೆರಳಿದರು.
ನಗರದ ಮರಳೂರಿನ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ, ಸರಸ್ವತಿಪುರಂನ ವಿದ್ಯಾನಿಕೇತನ ಶಾಲೆ, ಶೇಷಾದ್ರಿಪುರಂ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಚಿಣ್ಣರ ಕಲರವ ಎದ್ದು ಕಾಣುತ್ತಿತ್ತು.
ಶಾಲಾ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಪುಟಾಣಿ ಮಕ್ಕಳು ಕುಳಿತುಕೊಂಡಿದ್ದ ದೃಶ್ಯ ಕಂಡು ಬಂದವು.
ಶಾಲಾ ಸಮವಸ್ತ್ರ ಧರಿಸಿ 20 ತಿಂಗಳು ಕಳೆದಿದೆ, ಶಾಲೆಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಖುಷಿಯೂ ಪುಟಾಣಿ ಮಕ್ಕಳಲ್ಲಿ ಎದ್ದು ಕಾಣುತ್ತಿತ್ತು. ಪುಟಾಣಿ ಮಕ್ಕಳು ಶಾಲೆಗೆ ತೆರಳುವ ಮುನ್ನ ಪೋಷಕರೊಂದಿಗೆ ಅಂಗಡಿಗಳಿಗೆ ಹೋಗಿ ಸ್ಯಾನಿಟೈಸರ್‌ ಖರೀದಿಸಿ ತಮ್ಮ ತಮ್ಮ ಬ್ಯಾಗ್‌ ಗಳಲ್ಲಿ ಇಟ್ಟುಕೊಂಡರು.
ಈಗಾಗಲೇ ಸರ್ಕಾರ 9 ರಿಂದ 12ನೇ ತರಗತಿ, 6 ರಿಂದ 9ನೇ ತರಗತಿ ಆರಂಭಿಸಿ ಯಶಸ್ವಿಯಾಗಿ ತರಗತಿಗಳು ನಡೆದಿರುವ ಹಿನ್ನೆಲೆಯಲ್ಲಿ ಅದೇ ಮಾದರಿಯಲ್ಲಿ ಇನ್ನು ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದೆ.
ಸುಮಾರು 20 ತಿಂಗಳಿಗೂ ಅಧಿಕ ದಿನಗಳಿಂದ ಶಾಲಾ ಆವರಣಗಳಲ್ಲಿ ಮಕ್ಕಳ ಪ್ರಾರ್ಥನೆಯ ಸದ್ದು ಕೇಳಿ ಬಂದಿರಲಿಲ್ಲ. ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಸಾಮಾಜಿಕ ಅಂತರದೊಂದಿಗೆ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ನಿಂತು ಪ್ರಾರ್ಥನೆ ಮಾಡಿದರು.
20 ತಿಂಗಳಿಂದ ಶಾಲಾ ಆವರಣದಲ್ಲಿ ಚಿಣ್ಣರ ಕಲರವ ಇಲ್ಲದೆ ಬಣಗುಡುತ್ತಿದ್ದ ಶಾಲಾ ಆವರಣಗಳು ಮಕ್ಕಳಿಂದ ತುಂಬಿ ಒಂದು ರೀತಿಯ ಆಹ್ಲಾದಕರ ವಾತಾವರಣ ನಿರ್ಮಾಣವಾಗಿತ್ತು.
ಒಂದು ಕೊಠಡಿಯಲ್ಲಿ 15-20 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಪ್ರವಚನ ಮಾಡಲಾಗುತ್ತಿದೆ, ಮಕ್ಕಳ ಸಂಖ್ಯೆ ಹೆಚ್ಚಿದ್ದು ಕೊಠಡಿ ಸಂಖ್ಯೆ ಕಡಿಮೆ ಇದ್ದರೆ ಪಾಳಿ ಪ್ರಕಾರ ತರಗತಿ ನಡೆಸಲು ಎರಡೂ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐಗಳು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.
ಡಿಡಿಪಿಐ ಸಿ.ನಂಜಯ್ಯ ಮಾತನಾಡಿ, ಸರ್ಕಾರದ ಮಾರ್ಗಸೂಚಿ ಅನ್ವಯ ಸರ್ಕಾರಿ, ಅನುದಾನ ರಹಿತ, ಖಾಸಗಿ ಶಾಲೆಗಳಿಗೆ ಎಲ್ಲಾ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸ್‌ ಮಾಡಿ ಎಸ್‌ಓಪಿ ಅನುಸರಿಸುವ ಮೂಲಕ ತರಗತಿ ನಡೆಸುವಂತೆ ಸೂಚನೆ ನೀಡಲಾಗಿದ್ದು, ಅದರಂತೆ ಎಲ್ಲಾ ಶಾಲೆಗಳಲ್ಲೂ 1 ರಿಂದ 5ನೇ ತರಗತಿವರೆಗೆ ಪಾಠ ಪ್ರವಚನ ಆರಂಭವಾಗಿವೆ ಎಂದರು.
1 ರಿಂದ 5ನೇ ತರಗತಿಯ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭವಾಗಿವೆ, ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಬೇಕು, ಹಾಗೆಯೇ ಪೋಷಕರ ಒಪ್ಪಿಗೆ ಪತ್ರವೂ ಕಡ್ಡಾಯವಾಗಿರುತ್ತದೆ. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಶೌಚಾಲಯಗಳ ವ್ಯವಸ್ಥೆ ಮಾಡಿರುವಂತೆಯೂ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!