ತುಮಕೂರು: ಸಮಾಜದ ಧ್ವನಿಯಾಗಿ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ವ್ಯವಸ್ಥೆಯನ್ನು ಸರಿದಾರಿಗೆ ತರುವ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತದೆ. ಪತ್ರಕರ್ತರು ತಾವು ನಿರ್ವಹಿಸುವುದು ಕೇವಲ ಕೆಲಸವಲ್ಲ, ಅದೊಂದು ಶ್ರೇಷ್ಠ ಜವಾಬ್ದಾರಿ ಎಂದು ಅರಿತುಕೊಳ್ಳುವುದು ಮುಖ್ಯಎಂದು ಟಿವಿ ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಸೋಮವಾರ ಆಯೋಜಿಸಿದ್ದ ಆಧುನಿಕ ಮಾಧ್ಯಮ ರಂಗದ ಉದ್ಯೋಗಾವಕಾಶಗಳ ಕುರಿತ ಕಾರ್ಯಗಾರದಲ್ಲಿ ಮಾತನಾಡಿ, ಒಂದೇ ಪದವಿ ಹತ್ತಾರು ಉದ್ಯೋಗಗಳನ್ನು ಸೃಷ್ಟಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದರೆ ಅದು ಪತ್ರಿಕೋದ್ಯಮದಲ್ಲಿ ಮಾತ್ರ, ಪತ್ರಕರ್ತರಾದವರು ತಾವು ಕಾರ್ಯ ನಿರ್ವಹಿಸುವ ನೆಲದ ವಾತಾವರಣ ಅರ್ಥ ಮಾಡಿಕೊಳ್ಳಬೇಕು, ಅವರು ತಮ್ಮ ಆತ್ಮಸಾಕ್ಷಿಗೆ ಬದ್ಧವಾಗಿ ಕೆಲಸ ಮಾಡಿದಾಗ ಜನಸಾಮಾನ್ಯರ ಧ್ವನಿಯಾಗಲು ಸಾಧ್ಯಎಂದರು.
ಪತ್ರಿಕೋದ್ಯಮ ಕೇವಲ ಭಾಷಣ ಮಾಡುವುದಲ್ಲ, ವೃತ್ತಿಪರತೆ ಮೆರೆಯಬೇಕಿದೆ, ಪತ್ರಕರ್ತನು ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಾಗ ಒತ್ತಡಗಳನ್ನು ನಿಭಾಯಿಸುವ ಕೌಶಲ ಮೈಗೂಡಿಸಿಕೊಳ್ಳಬೇಕಿದೆ, ಸಮಾಜದಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಧನಾತ್ಮಕ ಅಂಶಗಳನ್ನು ರೂಢಿಸಿಕೊಂಡು, ಜನರ ನಾಡಿ ಮಿಡಿತವನ್ನು ತಿಳಿದುಕೊಂಡು ಸಮಾಜಕ್ಕೆ ನ್ಯಾಯ ಒದಗಿಸಬೇಕಿದೆ ಎಂದರು.
ಭಾಷಾ ಶುದ್ಧತೆ, ಕ್ಷೇತ್ರಅಧ್ಯಯನ, ಸಮಯ ಪ್ರಜ್ಞೆ, ಸಮಾಜ ಪ್ರಜ್ಞೆ ಪತ್ರಕರ್ತರಿಗೆ ಅತ್ಯಗತ್ಯ, ಬ್ರೇಕಿಂಗ್ ಪತ್ರಕರ್ತರಾಗುವುದಕ್ಕಿಂತ ಮೇಕಿಂಗ್ ಪತ್ರಕರ್ತರಾಗಬೇಕಾಗಿದೆ, ಕೂಗಾಟ, ಚೀರಾಟಗಳಿಗಿಂತ ಸಂಯಮದ ಸುದ್ದಿ ನಿರೂಪಕರಾಗಿಯೂ ಸಮಾಜ ಗುರುತಿಸುವ ಕೆಲಸ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿವಿ ಕುಲಪತಿಕರ್ನಲ್ ವೈ.ಎಸ್.ಸಿದ್ದೇಗೌಡ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನುತಾವೇ ರೂಪಿಸಿಕೊಳ್ಳಬೇಕು. ಹಾಗಾಗಿ ಗುರಿಯ ಕಡೆ ಲಕ್ಷ್ಯಇರಬೇಕು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಳಿದವರಿಗಿಂತ ಭಿನ್ನವಾಗಿರಬೇಕು, ಅದು ನಿರಂತರ ಕಲಿಕೆಯಿಂದ ಮಾತ್ರ ಸಾಧ್ಯ ಎಂದರು.
ಮಾಧ್ಯಮ ಪ್ರಜಾ ಪ್ರಭುತ್ವದ ನಾಲ್ಕನೇ ಅಂಗ, ಸಮಾಜದಲ್ಲಿ ಮಾಧ್ಯಮ ಅನ್ಯಾಯದ ವಿರುದ್ಧ ಸಿಡಿದೇಳುವಂತದ್ದಾಗಿದೆ, ಮಾಧ್ಯಮಕ್ಕೆ ಸಮಾಜವನ್ನು ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿ ಇದೆ ಎಂದರು.
ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಮಾತನಾಡಿ, ಮಾಧ್ಯಮರಂಗ ಇಂದು ಡಿಜಿಟಲ್ ಯುಗದಲ್ಲಿದ್ದು ನೂರಾರು ಉದ್ಯೋಗಾವಕಾಶಗಳಿವೆ, ಆದರೆ ಅದನ್ನು ಪ್ರವೇಶಿಸಬಯಸುವವರಿಗೆ ಕಂಪ್ಯೂಟರ್ ಜ್ಞಾನ, ಸಂದರ್ಶನ ಕಲೆ, ಸಮಯ ಪ್ರಜ್ಞೆ, ಉತ್ತಮ ಸಂವಹನ ಕಲೆ, ದೀರ್ಘ ಪ್ರಯಾಣದ ಸಾಮರ್ಥ್ಯ, ಜವಾಬ್ದಾರಿ ನಿಭಾಯಿಸುವ ಕೌಶಲ ಇರಬೇಕಾಗುತ್ತದೆ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವಿಭಾಗದ ಸಂಯೋಜಕ ಡಾ.ಸಿಬಂತಿ ಪದ್ಮನಾಭ, ಉಪನ್ಯಾಸಕರಾದ ಡಾ.ಪೃಥ್ವೀರಾಜ ಟಿ., ಕೋಕಿಲ ಎಂ.ಎಸ್., ಅನನ್ಯ ಎಂ., ಪ್ರವೀಣ್ ಕುಮಾರ್, ಅಭಿಷೇಕ್, ಸಹನಾ, ರವಿತೇಜ ಸಿ.ಎಸ್., ಚನ್ನಬಸವ ಇದ್ದರು.
ಪತ್ರಿಕೋದ್ಯಮ ಜವಾಬ್ದಾರಿ ಸ್ಥಾನ ಹೊಂದಿದೆ: ಸ್ವಾತಿ ಚಂದ್ರಶೇಖರ್
Get real time updates directly on you device, subscribe now.
Prev Post
Next Post
Comments are closed.