ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಪೌರಾಯುಕ್ತರು ಏಕೆ?

ಕಮಿಷನರ್ ಉಮಾಕಾಂತ್ ಎತ್ತಂಗಡಿಗೆ ಆಗ್ರಹ

344

Get real time updates directly on you device, subscribe now.

ತಿಪಟೂರು: ಇಲ್ಲಿನ ನಗರಸಭೆ ಪೌರಾಯುಕ್ತ ಉಮಾಕಾಂತ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ, ಅಷ್ಟೇ ಅಲ್ಲ ಇವರ ಈ ನಡೆಗೆ ಈಗ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಸರ್ಕಾರಿ ಅಧಿಕಾರಿಯಾಗಿದ್ದು ತಿಪಟೂರಿನಲ್ಲಿ ನಡೆದ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಗಣವೇಷಧಾರಿಯಾಗಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕೊರೊನಾ ಸಮಯದಲ್ಲಿ ಶೌಚಾಲಯ ಶುಚಿ ಮಾಡುವುದು, ಕೋವಿಡ್ ನಿಂದ ಮೃತಪಟ್ಟ ಅನಾಥ ಶವಗಳ ಅಂತ್ಯಕ್ರಿಯೆ ಮಾಡುವ ಮೂಲಕ ಅನೇಕ ಅಧಿಕಾರಿಗಳಿಗೆ ಮಾದರಿಯಾಗಿದ್ದರು. ಅದೆಲ್ಲಾ ಫೈನ್.. ಇದಲ್ಲದೆ ಕೆಲ ತಿಂಗಳ ಹಿಂದೆ ಬಿ.ಸಿ.ನಾಗೇಶ್ ಗೆ ಸಚಿವ ಸ್ಥಾನ ದೊರೆಯಿತೆಂದು ಉರುಳು ಸೇವೆ ಮಾಡಿದ್ದರು, ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗಿತ್ತು, ಈಗ ಆರ್ ಎಸ್ ಎಸ್ ನ ಪಥ ಸಂಚಲನದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೆನೂರು ಕಾಂತರಾಜು ಮಾತನಾಡಿ, ನಗರದ ಸ್ವಚ್ಛತೆ ಮತ್ತು ನಾಗರಿಕರ ಸಮಸ್ಯೆಗೆ ಸ್ಪಂದಿಸಬೇಕಾದ ಪೌರಾಯುಕ್ತರು ಆರ್ ಎಸ್ ಎಸ್ ಸೇವಕರಾಗಿ ಕರ್ತವ್ಯ ನಿರ್ವಹಿಸಿ ಸಂಬಳ ಪಡೆಯುತ್ತಿದ್ದಾರೆ, ಸಚಿವರ ತವರೂರಿನ ರಸ್ತೆಗಳು ಹದಗೆಟ್ಟಿವೆ, ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಸಂಘ ಪರಿವಾರದ ಕೆಲಸದಲ್ಲಿ ತೊಡಗಿದ್ದಾರೆ ಅಷ್ಟೇ, ಉನ್ನತ ಅಧಿಕಾರಿಗಳು ತಕ್ಷಣ ಇವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.
ನಗರಸಭಾ ಸದಸ್ಯ ಯೋಗೇಶ್ ಮಾತನಾಡಿ, ಆರ್ ಎಸ್ ಎಸ್ ನ ಕಾರ್ಯಕ್ರಮಕ್ಕೆ 2 ಲಕ್ಷ ದೇಣಿಗೆ ನೀಡಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ, ಆರ್ ಎಸ್ ಎಸ್ ವೇಷಧರಿಸಿ ಪಥಸಂಚಲನ ಮಾಡಿರುವುದು ಕಾನೂನು ಬಾಹಿರ, ಬಿಜೆಪಿ ಸದಸ್ಯರು ಫೋನಿಗೆ ಸ್ಪಂದಿಸಿ ವಾರ್ಡ್ ಗಳಿಗೆ ಭೇಟಿ ನೀಡುವ ಆಯುಕ್ತರು, ಕಾಂಗ್ರೆಸ್ ಸದಸ್ಯರ ಫೋನಿಗೆ ಸಿಗುವುದೇ ಇಲ್ಲ, ತಮ್ಮ ಸೇವಾವಧಿಯ ಅರ್ಧ ಸಮಯವನ್ನು ಪೂಜೆ, ಹೋಮ, ಉರುಳುಸೇವೆ ಈಗ ಗಣ ವೇಷಧಾರಿಯಾಗಿ ಕಾಣಿಸಿಕೊಂಡಿರುವುದಕ್ಕೆ ತರವಲ್ಲ ಎಂದರು.
ಬಿಜೆಪಿಯ ಕೈಗೊಂಬೆಯಾಗಿರುವ ಇವರಿಂದ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಮುಂದುವರೆದಿದೆ, ಇಂತಹ ಅಧಿಕಾರಿಗಳನ್ನು ತಕ್ಷಣ ಎತ್ತಂಗಡಿ ಮಾಡಿ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನಗರಸಭಾ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!