ಶಿರಾ: ಬೆಳೆದ ಬೆಳೆಯನ್ನು ಹೊರಗಿನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು, ರಾಷ್ಟ್ರೀಯ ಹೆದ್ದಾರಿ ನಂ. 48ರಲ್ಲಿನ ಕರೇಜವನಹಳ್ಳಿ ಟೋಲ್ ಸಿಬ್ಬಂದಿ ಕಿರಿಕಿರಿ ಮಾಡುತ್ತಿದ್ದು, ತಮ್ಮ ನೆರವಿಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತವಾಗಲಿ, ಶಾಸಕರಾಗಲಿ ಬರುತ್ತಾರೆಯೇ ಎಂದು ರೈತರು ಕನವರಿಸುವಂತಾಗಿದೆ.
ತಾಲ್ಲೂಕಿನಲ್ಲಿ ರೈತರು ಸಮೃದ್ಧವಾಗಿ ಟೊಮೋಟೋ ಬೆಳೆದಿದ್ದು, ಕೋಲಾರದ ಮಾರುಕಟ್ಟೆಗೆ ಸಾಗಿಸುವುದು ವಾಡಿಕೆಯಾಗಿ ಬೆಳೆದುಬಂದಿದೆ. ಹಗಲೆಲ್ಲ ಹೊಲದಲ್ಲಿ ಬೆಳೆಯನ್ನು ಕಟಾವು ಮಾಡಿ ಕ್ರೇಟ್ ಗಳಲ್ಲಿ ತುಂಬಿ, ರಾತ್ರಿ 8 ರಿಂದ 9 ಗಂಟೆ ಸುಮಾರಿಗೆ ಶಿರಾ ಬಿಡುವ ಲಾರಿಗಳ ಮೂಲಕ ಬೆಳಗಿನ ಜಾವ 3 ಗಂಟೆಯ ಒಳಗೆ ಕೋಲಾರ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹೀಗೆ ಸಮಯಕ್ಕೆ ಸರಿಯಾಗಿ ಹೋಗುವ ಬೆಳೆಗೆ ಪ್ರಸ್ತುತ ಉತ್ತಮ ದರ ಸಿಗುತ್ತಿದ್ದು, ಕ್ರೇಟ್ ಒಂದಕ್ಕೆ ಗರಿಷ್ಟ 700 ರೂ. ವರೆಗೆ ರೇಟು ಸಿಕ್ಕುತ್ತಿದೆಯಂತೆ.
ತುಮಕೂರು, ಬೆಂಗಳೂರು ಮಾರ್ಗವಾಗಿ, ಕೆಲವೊಮ್ಮೆ ತುಮಕೂರು, ದೊಡ್ಡಬಳ್ಳಾಪುರ, ವಿಜಯಪುರ ಮಾರ್ಗವಾಗಿ ಕೋಲಾರಕ್ಕೆ ಲಾರಿಗಳು ತೆರಳುತ್ತವೆ. ಹೀಗೆ ಲೋಡ್ ತೆಗೆದುಕೊಂಡು ಹೋಗುವ ಲಾರಿಗಳಿಗೆ ಬಾಡಿಗೆ ದರ ನಿಗದಿಪಡಿಸಿ, ಚಾಲಕರ ಊಟ- ತಿಂಡಿ ಇತರೆ ಖರ್ಚಿಗೆ ಇಂತಿಷ್ಟು ಎಂದು ಕೊಟ್ಟು ಕಳುಹಿಸಲಾಗುತ್ತದೆ. ಚಾಲಕರ ಜೊತೆಯಲ್ಲಿ ಕೆಲವೊಮ್ಮೆ ರೈತರೂ ಕೋಲಾರ ಮಾರುಕಟ್ಟೆಗೆ ಹೋಗಿ ಬರುತ್ತಾರೆ.
ಟೋಲ್ ಸಿಬ್ಬಂದಿ ಕಿರಿಕಿರಿ: ಹೀಗೆ ಕೋಲಾರದೆಡೆಗೆ ಮುಖ ಮಾಡುವ ಲಾರಿಗಳು, ರಾ.ಹೆ. 48ರ ಕರೇಜವನಹಳ್ಳಿ ಟೋಲ್ ದಾಟುವುದು ಅನಿವಾರ್ಯ, ಟೋಲ್ ಈಗ ಫಾಸ್ಟ್ ಟ್ಯಾಗ್ ಮೂಲಕ ನಿರ್ವಹಿಸುತ್ತಿದ್ದು, ಕ್ಯಾಷ್ ಲೆಸ್ ವ್ಯವಹಾರ ನಡೆಸಲಾಗುತ್ತಿದೆ. ಒಮ್ಮೆ ಟೋಲ್ ಮೂಲಕ ಲಾರಿ ಹಾದುಹೋದರೆ ಪಾಸ್ಟ್ ಟ್ಯಾಗ್ ಮೂಲಕ ಸಂಬಂಧಿಸಿದ ಹಣ ಐ.ಆರ್.ಬಿ ಖಾತೆಗೆ ಜಮಾ ಆಗುತ್ತದೆ. ಇಲ್ಲಿರುವ ಸಿಬ್ಬಂದಿ ವಾಹನಗಳ ಸುಗಮ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಟ್ಟರೆ ಸಾಕು.
ಆದರೆ ಸುಗಮ ಸಂಚಾರಕ್ಕೆ ನೆರವಾಗಬೇಕಿದ್ದ ಟೋಲ್ ಸಿಬ್ಬಂದಿ, ಲೋಡ್ ಲಾರಿಗಳನ್ನು ತಡೆಹಾಕಿ, ನಿಗದಿತ ಟನ್ನೇಜ್ ಗಿಂತ ಹೆಚ್ಚು ಲೋಡ್ ತರುತ್ತೀರಿ, ಅದಕ್ಕಾಗಿ 155 ರೂ. ಪಾವತಿ ಮಾಡಬೇಕು ಎಂದು ಲಾರಿ ಸಿಬ್ಬಂದಿಯನ್ನು ಬೆದರಿಸುತ್ತಾರೆ. ಹಣ ಪಾವತಿ ಮಾಡುತ್ತೇವೆ, ರಸೀದಿ ಕೊಡಿ ಎಂದು ಲಾರಿಯವರು ಕೇಳುವಂತಿಲ್ಲ, ಇದರಿಂದ ಲಾರಿ ಚಾಲಕರು ಮತ್ತು ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ, ನಿತ್ಯ ಒಂದಲ್ಲೊಂದು ಗಲಾಟೆ ನಡೆಯುತ್ತಿರುತ್ತದೆ. ಕೆಲ ಲಾರಿ ಚಾಲಕರು ಅದನ್ನು ತಮ್ಮ ಮೊಬೈಲ್ ಗಳಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಫಾಸ್ಟ್ ಟ್ಯಾಗ್ ನಲ್ಲಿಯೇ ಹೆಚ್ಚುವರಿ ಟನ್ನೇಜಿಗೆ ಸಂಬಂಧಿಸಿದ ಹೆಚ್ಚುವರಿ ಹಣ ಜಮಾ ಮಾಡಿಕೊಳ್ಳುವಂತೆ ಚಾಲಕರು ತಿಳಿಸಿದಾಗ್ಯೂ ಇಂತಿಷ್ಟು ಹಣ ಕೊಡದೆ ಹೋದರೆ ಲಾರಿ ಬಿಡುವುದಿಲ್ಲ ಎಂದು ಸಿಬ್ಬಂದಿ ದಬಾಯಿಸುತ್ತಾರೆ ಎನ್ನುವ ದೂರು ಕೇಳಿಬಂದಿದೆ. ಅನಿವಾರ್ಯವಾಗಿ ಲಾರಿ ಚಾಲಕರು ತಮ್ಮ ಊಟ- ತಿಂಡಿಗೆ ನೀಡಿರುವ ಖರ್ಚಿನಲ್ಲಿ ಬಹುತೇಕ ಪಾಲನ್ನು ಟೋಲ್ ಸಿಬ್ಬಂದಿಗೆ ಕೊಟ್ಟು ಮುಂದುವರೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಟೋಲ್ ಮಂದಿಯಿಂದ ಆರ್.ಟಿ.ಓ ಕೆಲಸ
ಸಾಮಾನ್ಯವಾಗಿ ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕವನ್ನು ಲಾರಿಗಳಲ್ಲಿ ಹೇರಿದಾಗ, ಅದನ್ನು ಪರಿಶೀಲಿಸಿ, ಅದಕ್ಕೆ ತಕ್ಕಂತೆ ದಂಡ ವಿಧಿಸುವುದು ಸಾರಿಗೆ ಇಲಾಖೆ ಅಧಿಕಾರಿಗಳ ಕೆಲಸ, ಆದರೆ ಆ ಕೆಲಸವನ್ನೂ ಟೋಲ್ ಸಿಬ್ಬಂದಿಯೇ ಗುತ್ತಿಗೆಗೆ ತೆಗೆದುಕೊಂಡಿರುವಂತೆ ವರ್ತಿಸುತ್ತಿದ್ದಾರೆ ಎನ್ನುವುದು ಲಾರಿ ಚಾಲಕರ ದೂರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದ ಪತ್ರಿಕೆಗೆ ದೊರೆತ ಪ್ರತಿಕ್ರಿಯೆಯೂ ಅದೆ, ಅದು ಆರ್.ಟಿ.ಓ ನವರ ಕೆಲಸ, ಅದನ್ನು ಟೋಲ್ ಸಿಬ್ಬಂದಿ ಹೇಗೆ ಮಾಡುತ್ತಾರೆ ಎಂದು ಸಚಿವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಫಾಸ್ಟ್ ಟ್ಯಾಗ್, ಕ್ಯಾಷ್ ಲೆಸ್ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವವರು ಹಣಪಾವತಿ ಮಾಡಿ ಮುಂದುವರೆಯುತ್ತಾರೆ ಎಂದು ರೈತರೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೈಚಲ್ಲಿದ ತಾಲ್ಲೂಕು ಆಡಳಿತ
ಈ ಬಗ್ಗೆ ಸಿಕ್ಕ ವಿಡಿಯೋಗಳು ಮತ್ತು ರೈತರಿಂದ ಮಾಹಿತಿ ಪಡೆದ ಪತ್ರಿಕೆ ಟೋಲ್ ಸಿಬ್ಬಂದಿ ದಬ್ಬಾಳಿಕೆ ಬಗ್ಗೆ ತಹಸೀಲ್ದಾರ್ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಕೇಳಿದಾಗ, ಈ ಬಗ್ಗೆ ನಮಗೆ ರೈತರಿಂದ ನೇರ ದೂರು ಬರಲಿ, ತಪ್ಪಿದರೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಉತ್ತರ ತಹಸೀಲ್ದಾರರಿಂದ ದೊರೆತಿದೆ. ಪ್ರಸ್ತುತ ರೈತರಿಗೆ ಉತ್ತಮ ದರ ದೊರೆಯುತ್ತಿರುವ ಕಾರಣ ಆದಷ್ಟು ಬೇಗನೆ ತಮ್ಮ ಬೆಳೆ ಕಟಾವು ಮಾಡಿ ಸಮಯಕ್ಕೆ ಸರಿಯಾಗಿ ಕೋಲಾರ ತಲುಪಿಸಿ, ಒಂದಷ್ಟು ಕಾಸಿನ ಮುಖ ಕಾಣಲು ಬಯಸುತ್ತಿರುವ ರೈತರು ಬಿಡುವಾಗಿ ತಹಸೀಲ್ದಾರರಿಗೆ ದೂರು ಸಲ್ಲಿಸಲು ಮುಂದೆ ಬರುತ್ತಿಲ್ಲ.
ತಹಸೀಲ್ದಾರರು ಕೈ ಚೆಲ್ಲಿದ ಕಾರಣ ಈಗ ಜಿಲ್ಲಾಧಿಕಾರಿಗಳೇ ಇತ್ತ ಗಮನ ಹರಿಸಿ, ದೂರು ಬರುವವರೆಗೆ ಕಾಯದೆ ಟೋಲ್ ಸಿಬ್ಬಂದಿಗೆ ತಿಳಿವಳಿಕೆ ನೀಡುವುದು ಅಥವಾ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು, ಟೋಲ್‌ನಲ್ಲಿ ನಡೆಯುತ್ತಿರುವ ಹಗಲು ದರೋಡೆ ನಿಲ್ಲಿಸುವ ಕೆಲಸ ಮಾಡುತ್ತಾರೆಯೇ ಕಾದು ನೋಡಬೇಕು.
ಪ್ರಸ್ತುತ ಕೋಲಾರ ಮಾರುಕಟ್ಟೆಯಲ್ಲಿ ಟಮೋಟೋಗೆ ಒಳ್ಳೆಯ ಬೆಲೆ ದೊರೆಯುತ್ತಿದೆ. ನಾನೂ ಟಮೋಟೋ ಬೆಳೆದಿದ್ದು, ಕಳೆದೆರಡು ತಿಂಗಳಿಂದ ಕೋಲಾರ ಮಾರುಕಟ್ಟೆಗೆ ಸಾಗಿಸುತ್ತಿದ್ದೇನೆ. ಜೊತೆಯಲ್ಲಿ ನಮ್ಮ ಸುತ್ತಮುತ್ತಲಿನ ರೈತರು ಮತ್ತು ಹಿರಿಯೂರು ಭಾಗದ ರೈತರು ಬೆಳೆದಿರುವ ಟಮೋಟೋ ಸಾಗಿಸುವ ಕೆಲಸವನ್ನೂ ಮಾಡುತ್ತಿದ್ದೇನೆ. ಲಾರಿಯಲ್ಲಿ ಸುಮಾರು 700ರಿಂದ 800 ಕ್ರೇಟ್ ವರೆಗೆ ಸಾಗಿಸಲಾಗುತ್ತದೆ. ಒಮ್ಮೊಮ್ಮೆ ರೈತರು ಬೆಳೆದಿರುವುದನ್ನು ಬಿಟ್ಟು ಹೋಗಲಾಗದೇ ಹತ್ತಿಪ್ಪತ್ತು ಕ್ರೇಟ್ ಹೆಚ್ಚಿಗೆ ಲೋಡ್ ಮಾಡುವುದೂ ಉಂಟು.
ಲಾರಿಯಲ್ಲಿ 500 ಕ್ರೇಟ್ ಇರಲೀ 800 ಕ್ರೇಟ್ ಇರಲಿ ಟೋಲ್ ಮಂದಿ ಹೇಳುವುದು ಮಾತ್ರ ಓವರ್ ಟನ್ನೇಜ್. ಅದಕ್ಕೆ 155 ರೂ. ದಂಡ ಪಾವತಿಸಬೇಕು ಎಂದು ಒತ್ತಾಯಿಸುತ್ತಾರೆ. ನಾನು ಈ ಹಿಂದೆ ಕರಬೂಜ, ಕಲ್ಲಂಗಡಿಯನ್ನೂ ಸಹಾ ರಾಜ್ಯದ ವಿವಿಧ ಭಾಗಗಳಿಗೆ ಸರಬರಾಜು ಮಾಡಿದ್ದೇನೆ. ಯಾವುದೇ ಟೋಲ್ ಗಳಲ್ಲಿ ಟನ್ನೇಜ್ ಗೆ ದಂಡ ವಿಧಿಸುವುದಿಲ್ಲ. ಆದರೆ ಕರೇಜವನಹಳ್ಳಿ ಟೋಲ್ ಮಾತ್ರ ಎಲ್ಲದಕ್ಕಿಂತ ಭಿನ್ನ. ಇಲ್ಲಿ ಸಿಬ್ಬಂದಿ ನಿತ್ಯ ಕಿರಿಕಿರಿ ಮಾಡುತ್ತಾರೆ. ಫಾಸ್ಟ್ ಟ್ಯಾಗ್ ನಲ್ಲಿ ಹಣ ಕಟಾವು ಮಾಡಿಕೊಳ್ಳಿ ಎಂದರೂ ಸುಮ್ಮನಾಗದೇ, ದಂಡ ಕಟ್ಟಲೇಬೇಕು ಎಂದು ಒತ್ತಾಯಿಸುತ್ತಾರೆ. ಸರ್ಕಾರ ಕ್ಯಾಷ್ ಲೆಸ್ ಎನ್ನುತ್ತದೆ. ಇವರು ಸರ್ಕಾರದ ಆದೇಶಗಳಿಗೆ ಕ್ಯಾರೇ ಎನ್ನದೇ ವರ್ತಿಸುತ್ತಾರೆ ಎಂದು ಶಿರಾ ತಾಲ್ಲೂಕು, ಲಕ್ಕವ್ವನಹಳ್ಳಿಯ ರೈತ ರಮೇಶ್ ಮತ್ತು ಹಿರಿಯೂರು ತಾಲ್ಲೂಕು, ಧರ್ಮಪುರದ ರೈತ ಮಂಜುನಾಥ್ ಬೇಸರಿಸಿದ್ದಾರೆ.
-ರೈತ ರಮೇಶ್ ಮತ್ತು ರೈತ ಮಂಜುನಾಥ್
Comments are closed.