ಜೀವನ ಹಾಳಾದಾಗ ಯಾವ ಸ್ನೇಹಿತರು ಬರುವುದಿಲ್ಲ: ಸ್ವಾಮೀಜಿ

ಕೆಟ್ಟ ಯೋಚನೆ, ದುಶ್ಚಟ ಬಿಟ್ಟರೆ ಬದುಕು ಸುಂದರ

337

Get real time updates directly on you device, subscribe now.

ತುಮಕೂರು: ಮನಸ್ಸಿನಲ್ಲಿ ಕೆಟ್ಟ ಯೋಚನೆ ಮತ್ತು ದುಶ್ಚಟ ತೊರೆದಾಗ ಮಾತ್ರ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶ್ರೀಶ್ವೇತ ಕಮಠಾಪುರಿ ಜಂಗಮ ಸುಕ್ಷೇತ್ರದ ಕಾರದ ವೀರಬಸವ ಸ್ವಾಮೀಜಿ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ತುಮಕೂರು ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನವಜೀವನೋತ್ಸವ ಮತ್ತು ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಧರ್ಮಗಳನ್ನು ಹೋಗಲಾಡಿಸುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ಕಾರ್ಯ ಶ್ಲಾಘನೀಯವಾದದ್ದು, ಮನುಷ್ಯ ಹಾಳಾಗುವ ಸಮಯದಲ್ಲಿ ಧರ್ಮ ಉಳಿಸುವ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದರು.
ಸರ್ಕಾರ ಕುಡಿಸಿ ಹಾಳು ಮಾಡುತ್ತಿದ್ದರೆ ಪರ್ಯಾಯ ಯೋಜನೆಗಳ ಮೂಲಕ ಧರ್ಮಸ್ಥಳ ಸಂಸ್ಥೆ ಇದರಲ್ಲಿ ಸಿಲುಕಿರುವವರಿಗೆ ನವಜೀವನ ಕಲ್ಪಿಸಿಕೊಡುತ್ತಿದೆ, ಅದಕ್ಕೆ ಧರ್ಮಸ್ಥಳದ ಮಂಜುನಾಥನ ದೈವಿಶಕ್ತಿ ಪ್ರೇರಣೆಯಾಗಿದೆ, ಮದ್ಯವ್ಯಸನ ಬಿಟ್ಟು ಉತ್ತಮ ಜೀವನ ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.
ಸ್ನೇಹಿತರ ಒತ್ತಾಸೆಗೋ, ಪ್ರೇರಣೆಗೋ ಒಳಗಾಗಿ ಕುಡಿತ ಕಲಿತು ಸಂಸಾರದ ಜೀವನವನ್ನು ನರಕ ಮಾಡಿಕೊಂಡವರು ಅರ್ಥ ಮಾಡಿಕೊಳ್ಳಬೇಕಿದೆ, ಜೀವನ ಹಾಳಾದಾಗ ಯಾವ ಸ್ನೇಹಿತರು ಬಂದು ಸರಿಪಡಿಸುವುದಿಲ್ಲ, ಹಾಗಾಗಿ ಸಜ್ಜನರ ಸಹವಾಸದಿಂದ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ಜನಜಾಗೃತಿ ವೇದಿಕೆ ತುಮಕೂರು ಜಿಲ್ಲಾಧ್ಯಕ್ಷ ಪ್ರೆಸ್‌ ರಾಜಣ್ಣ ಮಾತನಾಡಿ, ಕುಟುಂಬದ ಜವಾಬ್ದಾರಿ ಹೊರಬೇಕಾದ ಶೇ.40 ರಷ್ಟು ಮಂದಿ ಇಂದು ಮದ್ಯಕ್ಕೆ ದಾಸರಾಗಿ ಕುಟುಂಬದ ಹೊಣೆ ಮರೆತಿದ್ದಾರೆ, ಧರ್ಮಸ್ಥಳ ಸಂಸ್ಥೆಯ ಜನಜಾಗೃತಿ ವೇದಿಕೆ 153 ತಾಲ್ಲೂಕುಗಳಲ್ಲಿ ಮದ್ಯಪಾನದ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದು, ಕುಡಿತದ ದಾಸ್ಯದಿಂದ ಹೊರಬಂದು ಕುಟುಂಬ ನಿರ್ವಹಣೆ ಮಾಡುವ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಯುವ ಸಮುದಾಯ ಇಂದು ಮಾದಕ ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು, ಮಾದಕ ವಸ್ತು, ವ್ಯಸನದಿಂದ ಹೊರಬರುವ ನಿಟ್ಟಿನಲ್ಲಿ ನಮ್ಮ ಸಂಪ್ರದಾಯ, ಸಂಸ್ಕೃತಿ ತಿಳಿಸಬೇಕು, ಗಾಂಧೀಜಿ ಅವರ ಆದರ್ಶ ಪಾಲಿಸಬೇಕು, ಗಾಂಧಿ ತತ್ವ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಆಸ್ತಿಯಾಗಿ ರೂಪುಗೊಳ್ಳುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ್‌ ಪಿ ಆಚಾರ್ಯ ಮಾತನಾಡಿ, ದಾನಕ್ಕೆ ಹೆಸರಾಗಿರುವ ಧರ್ಮಸ್ಥಳ ಸಂಸ್ಥೆ ಬಡವರ ಅಭಿವೃದ್ಧಿ ಸಹಾಯ ಮಾಡುವ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭಿಸಿ ಸಾಲಸೌಲಭ್ಯ ನೀಡುವ ಕಾರ್ಯ ಪ್ರಾರಂಭಿಸಿದರು, ಸಾಲ ಸದ್ಬಳಕೆ ಮಾಡದ ಕಾರಣ ಕುಡಿತ, ಕುಡಿತ ಬಿಡಿಸುವುದಕ್ಕಾಗಿಯೇ ಕಳೆದ ಮೂವತ್ತು ವರ್ಷಗಳಿಂದ ಮದ್ಯ ವರ್ಜನ ಕಾರ್ಯ ನಡೆಸುತ್ತಿದೆ ಎಂದರು.
ರಾಜ್ಯದಲ್ಲಿ 1.20 ಲಕ್ಷ ಮಂದಿ ಇಂದು ಮದ್ಯವರ್ಜನ ಶಿಬಿರದ ಅನುಕೂಲ ಪಡೆದುಕೊಂಡು ನವ ಜೀವನದಲ್ಲಿ ಭಾಗಿಯಾಗಿದ್ದಾರೆ, ಇದರಿಂದ ಹತ್ತು ಲಕ್ಷ ಮಂದಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ, ಶಾಲಾ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ಕಳೆದ ಹತ್ತು ವರ್ಷಗಳಿಂದ ದುಶ್ಚಟಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಎ.ಶ್ರೀನಿವಾಸ್‌, ಮುಖಂಡರಾದ ಕಾಮರಾಜು, ಟಿ.ಎಲ್‌.ಕುಂಭಯ್ಯ, ಪ್ರೇಮಾ ಹೆಗಡೆ, ಡಾ.ಸಂಜಯ್‌ ನಾಯಕ್‌, ತಾಲ್ಲೂಕು ಯೋಜನಾಧಿಕಾರಿ ಸುನೀತಾ ಪ್ರಭು, ಜನಜಾಗೃತಿ ಸಮಿತಿ ಉಪಾಧ್ಯಕ್ಷ ಅಮರನಾಥ ಶೆಟ್ಟಿ, ವಿಜಯಾಭಾಸ್ಕರ್‌, ರಾಜೇಶ್‌ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!