ತುಮಕೂರು: ವಸತಿಹೀನರಿಗೆ ನಿವೇಶನ ಹಂಚುವಂತೆ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಬಂದಿರುವ ಪತ್ರಕ್ಕೆ ಯಾವುದೇ ಕಿಮ್ಮತ್ತು ನೀಡದ ತಹಶೀಲ್ದಾರ್ ವಿರುದ್ಧ ಪ್ರಜಾ ವಿಮೋಚನಾ ಚಳವಳಿ ಪಿವಿಸಿ ಸ್ವಾಭಿಮಾನ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರಜಾ ವಿಮೋಚನಾ ಚಳವಳಿ ಪಿವಿಸಿ ಸ್ವಾಭಿಮಾನ ಸಮಿತಿ ರಾಜ್ಯಾಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ಇಂದು ರಾಜಕಾರಣಿಗಳು ಅಸಹಾಯಕ ವರ್ಗವನ್ನು ಅಸಹಾಯಕತೆಗೆ ದೂಡಿ, ಮತಬ್ಯಾಂಕ್ ಮಾಡಿಕೊಳ್ಳುತ್ತಿದ್ದಾರೆ, ಎಲ್ಲ ಜಾತಿಗಳಲ್ಲಿರುವ ಬಡವರಿಗೆ ನಿವೇಶನ, ವಸತಿ ಅವಶ್ಯಕವಾಗಿದ್ದರು ಸಹ ನಿವೇಶನ ನೀಡಲು ಮುಂದಾಗದೆ ಇರುವುದು ಖಂಡನೀಯ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯಲ್ಲಿದ್ದರು ಸಹ ದಲಿತರು ಮತ್ತು ಬಡವರ ಅಭ್ಯುದಯಕ್ಕೆ ಯಾವುದೇ ಕ್ರಮ ವಹಿಸದೇ ಇರುವುದು ಭ್ರಷ್ಟಾಚಾರಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ತುಮಕೂರು ಗ್ರಾಮಾಂತರ ತಾಲ್ಲೂಕಿನ ಮಂಚಗೊಂಡನಹಳ್ಳಿ ಗ್ರಾಮದ ಸರ್ವೆ ನಂ. 102 ರಲ್ಲಿರುವ 1 ಎಕರೆ 38 ಗುಂಟೆ ಸರ್ಕಾರದ ಗೋಮಾಳದ ಜಮೀನಿನಲ್ಲಿ ಕಳೆದ 5 ವರ್ಷಗಳಿಂದಲೂ ಸ್ಥಳೀಯ ವಸತಿಹೀನ ಎಲ್ಲ ಜಾತಿಯ ಬಡವರಿಗೆ ವಸತಿ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಸಲ್ಲಿಸಿರುವ ಮನವಿಯನ್ನು ಕಸದ ಬುಟ್ಟಿಗೆ ಹಾಕಿದ್ದಾರೆ, ಅಧಿಕಾರಿಗಳು ಹಾಗೂ ರಾಜಕಾರಣಿಗಳು ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಬಡವರನ್ನು ಮತ್ತಷ್ಟು ಶೋಷಣೆ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಮಂಚಗೊಂಡನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ವಸತಿ ಹೀನರಿಗೆ ನಿವೇಶನವನ್ನು ನೀಡದೇ ಇದ್ದರೆ ಮುಂದಿನ ದಿನಗಳಲ್ಲಿ ಸಂತ್ರಸ್ಥರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ, ನೆತ್ತಿಗೊಂದು ಸೂರು ಕೊಡಲು ಆಗದ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ವಸತಿ ಹಕ್ಕಿಗಾಗಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಸಮಿತಿಯ ಜಿಲ್ಲಾಧ್ಯಕ್ಷ ಡಿ.ಕುಮಾರ್ ಮಾತನಾಡಿ, ಮಂಚಗೊಂಡನಹಳ್ಳಿಯಲ್ಲಿ ವಾಸವಾಗಿರುವ ವಸತಿಹೀನರಿಗೆ ನಿವೇಶನ ನೀಡಲು ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಜಿಲ್ಲಾಡಳಿತಕ್ಕೆ ಪತ್ರ ಬರೆದು ಸೂಚಿಸಿದರು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ವಸತಿ ಹೀನರು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ತಿಮ್ಮೇಗೌಡ ಸ್ವಾಮಿ ಮಾತನಾಡಿ, ನೆತ್ತಿಗೊಂದು ಸೂರು ಕಲ್ಪಿಸಬೇಕಿರುವುದು ಪ್ರತಿ ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಸಂವಿಧಾನದ ಪ್ರಕಾರ ಜನರಿಗೆ ನೀಡಬೇಕಾದ ಕನಿಷ್ಠ ಸೌಲಭ್ಯ ಒದಗಿಸಲು ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಅಧಿಕಾರಿಗಳ ಭ್ರಷ್ಟಾಚಾರದಿಂದ ವಸತಿಹೀನರ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಲೇ ಇದ್ದು, ಮಂಚಗೊಂಡನಹಳ್ಳಿಯ ವಸತಿಹೀನರಿಗೆ ನಿವೇಶನ ಮಂಜೂರು ಮಾಡುವ ಮೂಲಕ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಗೋವಿಂದಸ್ವಾಮಿ, ಬಸವರಾಜು, ರತ್ನಮ್ಮ, ಚಂದ್ರಮ್ಮ, ಉಮಾ, ಯಶೋಧ ಸೇರಿದಂತೆ ಇತರರು ಇದ್ದರು.
Get real time updates directly on you device, subscribe now.
Next Post
Comments are closed.