ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ನನ್ನ ಹಂಬಲ: ಮಾಧುಸ್ವಾಮಿ

432

Get real time updates directly on you device, subscribe now.

ನಿಟ್ಟೂರು: ಗುಬ್ಬಿ ತಾಲ್ಲೂಕಿನ ಬಿಕ್ಕೆಗುಡ್ಡ ಹಾಗೂ ಹಾಗಲವಾಡಿ ಯೋಜನೆಗಳನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದು ಕೂಡಲೇ ಆ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹಾಗೂ ಇಡಕನಹಳ್ಳಿ ಗ್ರಾಮದಲ್ಲಿ ತಿಮ್ಮಪ್ಪನಹಟ್ಟಿ, ಹೊಸಹಳ್ಳಿ ಹಾಗೂ ನಿಟ್ಟೂರಿನ ಮರಿಯಮ್ಮ ದೇವಾಲಯದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಇಡೀ ಜಿಲ್ಲೆಯನ್ನು ಸಮಗ್ರ ನೀರಾವರಿ ಯೋಜನೆ ಮಾಡಬೇಕು ಎಂಬುದು ನನ್ನ ಹಂಬಲವಾಗಿದೆ, ಹಾಗಾಗಿ ಅಭಿವೃದ್ಧಿಯ ವಿಚಾರದಲ್ಲಿ ಎಲ್ಲಿಯೂ ಕೂಡ ರಾಜಕೀಯ ಮಾಡಿಲ್ಲ, ಜಿಲ್ಲೆಗೆ ಹೇಮಾವತಿ ನೀರಿನಿಂದ ಈ ಬಾರಿ ಸಾಕಷ್ಟು ನೀರು ಹರಿಯುತ್ತಿದೆ, ಆದರೆ ಕೆಲವು ಭಾಗದ ಕೆರೆಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ಕಾರಣ ಪಂಪು ಮೋಟಾರು ಅಳವಡಿಸಿರುವುದು ಹಾಗೂ ಏತ ನೀರಾವರಿ ವ್ಯವಸ್ಥೆ ಇರುವ ಭಾಗದಲ್ಲಿ ಸಾಕಷ್ಟು ಸಮಸ್ಯೆಯಿದೆ ಮತ್ತು ಹಿಂದೆ ಕೆರೆಗಳಿಗೆ ಮಾಡಿರುವ ಅಲೋಕೇಶನ್‌ ನೀರು ಹರಿಸುವ ಪ್ರಮಾಣದಲ್ಲಿ ಸಾಕಷ್ಟು ತಪ್ಪಾಗಿದೆ, ಹಾಗಾಗಿ ಎಲ್ಲಾ ಕೆರೆಗಳಲ್ಲೂ ನೀರು ನಿಲ್ಲಿಸುವುದು ಸ್ವಲ್ಪ ಕಷ್ಟವಾಗುತ್ತದೆ, ಬಹುತೇಕ ಯೋಜನೆಗಳನ್ನು ಕುಡಿಯುವ ನೀರಿನ ಯೋಜನೆಯಾಗಿ ಅಳವಡಿಸಿರುವುದರಿಂದ ಅಲ್ಲಿಗೆ ಹೆಚ್ಚಿನ ನೀರು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ, ನೇರವಾಗಿ ನಾಲೆಯ ಮೂಲಕ ಹರಿಯುವ ಎಲ್ಲಾ ಕೆರೆಗಳಲ್ಲೂ ನೀರು ನಿಲ್ಲುತ್ತದೆ, ಆದರೆ ಪಂಪು ಮೋಟಾರು ಹಾಗೂ ಏತ ನೀರಾವರಿ ಯೋಜನೆ ಇರುವ ಭಾಗದಲ್ಲಿ ನೀರು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಅಧಿಕಾರಿಗಳಿಗೆ 1 ಮೋಟಾರು ಇರುವ ಕಡೆ ಮತ್ತೊಂದು ಮೋಟಾರ್‌ ಅಳವಡಿಸಿ 2 ಮೋಟಾರ್ ಗಳನ್ನು ಓಡಿಸಿ ಆ ಕೆರೆಗಳಿಗೆ ನೀರು ಹರಿಸುವಂತೆ ತಾಕೀತು ಸಹ ಮಾಡಲಾಗಿದೆ ಎಂದರು.
ತುರುವೇಕೆರೆ ಹಾಗೂ ಗುಬ್ಬಿ ತಾಲ್ಲೂಕಿನ ಬಹುತೇಕ ಕೆರೆಗಳು ಸಮೃದ್ಧವಾಗಿವೆ, ತುಮಕೂರು ಗ್ರಾಮಾಂತರ, ಕುಣಿಗಲ್ ವರಗೂ ಎಲ್ಲಾ ಕೆರೆಗಳನ್ನು ತುಂಬಿಸುವ ಯೋಜನೆ ಮಾಡಲಾಗುತ್ತಿದ್ದು ಭದ್ರಾ ಮೇಲ್ದಂಡೆ, ಹೇಮಾವತಿ, ಏತ ನೀರಾವರಿ ಯೋಜನೆ ಬಳಸಿಕೊಂಡು ಎಲ್ಲಾ ಕೆರೆಗಳಿಗೂ ನೀರು ಹರಿಸುವ ಯೋಜನೆ ಮಾಡಲಾಗುತ್ತದೆ ಹಾಗೂ ಗುಬ್ಬಿ ತಾಲ್ಲೂಕಿನ ನಿಟ್ಟೂರು ಭಾಗದಲ್ಲಿ ಎಚ್.ಎ.ಎಲ್‌ ನಿರ್ಮಾಣವಾಗಿರುವುದರಿಂದ ಅಲ್ಲಿಗೆ ಬೇಕಾದ ನೀರನ್ನು ಕಡಬ ಕೆರೆಯಿಂದ ಅಳವಡಿಸಲು ಯೋಜಿಸಲಾಗಿದೆ, ಕೆರೆಯ ಬದಲಿಗೆ ನೇರವಾಗಿ ನಾಲೆಯಿಂದಲೇ ಕೈಗಾರಿಕಾ ಒಳಭಾಗಕ್ಕೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಇನ್ನೂ ನಿಟ್ಟೂರು ಭಾಗದ ಕೆರೆ ತುಂಬಿ ತೋಟ ಹೊಲಗಳಿಗೆ ಹರಿಯುತ್ತಿರುವುದು ನೋಡಿದ್ದು, ಈ ಬಾರಿ ನೀರು ನಿಂತ ಕೂಡಲೆ ಕಡಬ ಕೆರೆಗೆ ನೇರವಾಗಿ ನೀರು ಹರಿಯುವಂತೆ ವೈಜ್ಞಾನಿಕವಾಗಿ ಅದರ ಕೆಲಸ ಮಾಡಿಸುತ್ತೇನೆ ಎಂದು ತಿಳಿಸಿದರು.
ತುಮಕೂರು ಗ್ರಾಮಾಂತರ ಭಾಗದಲ್ಲಿ ನಲವತ್ತು ಕೆರೆಗಳಿಗೆ ಯೋಜನೆ ಮಾಡಲಾಗಿದೆ, ಆದರೆ ಅರ್ಧ ಟಿಎಂಸಿ ನೀರನ್ನು ಮಾತ್ರ ಇಡಲಾಗಿದೆ, ಹಾಗಾಗಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವುದು ಕಷ್ಟ, ಇದು ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದೆ ದೊಡ್ಡ ಸುದ್ದಿಯಾಗಿತ್ತು ಎಂದು ತಿಳಿಸಿದರು.
ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ಮುಂದಿನ ವರ್ಷದ ಮಾರ್ಚ್‌, ಏಪ್ರಿಲ್‌ ತಿಂಗಳ ಅವಧಿಯಲ್ಲಿ ಈ ಭಾಗದಲ್ಲಿ ನಿರ್ಮಾಣವಾಗಿರುವ ಎಚ್.ಎ.ಎಲ್‌ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ, ಇಲ್ಲಿ ಈ ಘಟಕ ನಿರ್ಮಾಣವಾಗುತ್ತಿರುವುದರಿಂದ ಸಾವಿರಾರು ಜನರಿಗೆ ಜಿಲ್ಲೆಯಲ್ಲಿ ಉದ್ಯೋಗ ಸಿಗುತ್ತದೆ ಹಾಗೂ ನಿಟ್ಟೂರು ಭಾಗವು ಜಿಲ್ಲೆಯಲ್ಲೇ ಅತ್ಯಂತ ಅಭಿವೃದ್ಧಿ ಕ್ಷೇತ್ರವಾಗಿ ನಿರ್ಮಾಣವಾಗುವುದರಲ್ಲಿ ಎರಡನೆಯ ಮಾತಿಲ್ಲ ಎಂದ ಅವರು ಹೇಮಾವತಿ ನೀರು ನಿಟ್ಟೂರು ಕೆರೆ ತುಂಬಿ ಹೊಲಗಳಲ್ಲಿ ಹಾಗೂ ರಸ್ತೆಗಳಲ್ಲಿ ಹರಿದು ಪೋಲಾಗುವುದು ತಪ್ಪಿಸಬೇಕಾಗಿದೆ, ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿನ ನೀರು ನೇರವಾಗಿ ಕಡಬ ಕೆರೆಗೆ ಹರಿಯುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಇನ್ನು 1000 ಕೋಟಿ ಸರ್ಕಾರದಿಂದ ಅನುದಾನ ದೊರಕಿದಲ್ಲಿ ಹೇಮಾವತಿ ನಾಲೆಯ ಆಧುನೀಕರಣಗೊಳಿಸಿ ಈಗ ಹರಿಯುತ್ತಿರುವ 750 ಕ್ಯೂಸೆಕ್ಸ್ ಬದಲಿಗೆ 1600 ಕ್ಯೂಸೆಕ್ಸ್ ನಷ್ಟು ನೀರು ನಾಲೆಯಲ್ಲಿ ಹರಿಯುವುದರಿಂದ ಇಡೀ ಜಿಲ್ಲೆಗೆ ಸಾಕಷ್ಟು ನೀರು ಹರಿದು ಎಲ್ಲಾ ಕೆರೆಗಳು ತುಂಬುತ್ತವೆ, ಅದನ್ನು ಸಹ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಮತ್ತು ಗುಬ್ಬಿ ತಾಲ್ಲೂಕಿಗೆ ಸುಮಾರು 34 ವಿದ್ಯುತ್‌ ಕೇಂದ್ರಗಳನ್ನು ಮಾಡಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಬಿ.ಚಂದ್ರಶೇಖರ್‌ ಬಾಬು ಮಾತನಾಡಿ ಸುಮಾರು 12 ವರ್ಷಗಳಿಂದ ಕಡಬ ಕೆರೆ ತುಂಬಿಸಲು ಸಾಧ್ಯವಾಗಿರಲಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಹೇಮಾವತಿ ನಾಲೆಯಲ್ಲಿ ಹೆಚ್ಚಿನ ನೀರು ಹರಿಸಿದ ಕಾರಣದಿಂದಾಗಿ ದಶಕದ ಕನಸು ಈಗ ನನಸಾಗಿದೆ, ಕೇವಲ ನೀರಾವರಿ ಮಾತ್ರವಲ್ಲದೆ ಸಮಗ್ರ ಅಭಿವೃದ್ಧಿಯನ್ನು ಜಿಲ್ಲೆಯಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎನ್‌.ಸಿ.ಪ್ರಕಾಶ್‌, ತಾಲ್ಲೂಕು ಅಧ್ಯಕ್ಷ ಪಂಚಾಕ್ಷರಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ನವ್ಯಾ ಚಂದ್ರಶೇಖರಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್‌, ವಿ.ಎಸ್.ಎಸ್.ಎನ್‌ ಅಧ್ಯಕ್ಷ ಕಿಡಿಗಣ್ಣಪ್ಪ, ಹಿಂದುಳಿದ ವರ್ಗದ ಮುಖಂಡ ಜಿ.ಎನ್‌.ಬೆಟ್ಟಸ್ವಾಮಿ, ನರಸೇಗೌಡ, ನವ್ಯಾ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!