ಕನ್ನಡ ರಾಜ್ಯೋತ್ಸವ ಆಚರಣೆ ಹೃದಯದ ಆರಾಧನೆ: ಮಾಧುಸ್ವಾಮಿ

ಜಗತ್ತಿಗೆ ಕನ್ನಡ ಭಾಷೆ ಕಂಪಿನ ಮಹತ್ವ ಸಾರಿ

136

Get real time updates directly on you device, subscribe now.

ತುಮಕೂರು: ಅನ್ಯ ಭಾಷೆ ವ್ಯಾಮೋಹ ಬಿಟ್ಟು ಕನ್ನಡ ಭಾಷೆ ಬಳಸಿ ಬೆಳೆಸಬೇಕು ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಕರೆ ನೀಡಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಸಂದೇಶ ನೀಡಿದ ಅವರ, ಮಾತೃ ಭಾಷೆ ಬೆಳೆಸುವುದರ ಜೊತೆ ಜೊತೆಗೆ ನಾಡಿನ ಸಂಸ್ಕೃತಿ ಉಳಿಸಿ ಬೆಳೆಸಿ ಉನ್ನತ ಶಿಖರಕ್ಕೆ ಕೊಂಡೊಯ್ಯಬೇಕು ಎಂದರು.
ಕನ್ನಡ ರಾಜ್ಯೋತ್ಸವದ ಆಚರಣೆ ಹೃದಯದ ಆರಾಧನೆಯಾಗಿದೆ. ಸಂಭ್ರಮದ ಸಂಕೇತವಾಗಿದೆ, ಸ್ಪುಟವಾಗಿ ಕನ್ನಡ ಭಾಷೆ ಮಾತನಾಡುವ ಕೆಲವೇ ಕೆಲವು ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆಯೂ ಒಂದಾಗಿರುವುದು ಹೆಮ್ಮೆ ಎಂದರು.
ಕನ್ನಡ ಕಂಪಿನ ಈ ಕನ್ನಡ ರಾಜ್ಯೋತ್ಸವ ಆಚರಣೆ ಕನ್ನಡ ನೆಲದಲ್ಲಿ ಮಾತ್ರ ಸೀಮಿತವಾಗಿಲ್ಲ, ದೇಶ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಅತ್ಯಂತ ಪ್ರೀತಿ, ಹೆಮ್ಮೆಯಿಂದ ರಾಜ್ಯೋತ್ಸವ ಆಚರಣೆ ಮಾಡುತ್ತಾ, ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ ಎಂದು ನುಡಿದರು.
ಕರುನಾಡು 1956ರ ನವೆಂಬರ್‌ 1ರಂದು ಏಕೀಕರಣವಾಗಿದೆ. ಏಕೀಕರಣವಾಗಲು ನಾಡಿನ ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರಿದಂತೆ ಹಲವು ಮಹನೀಯರು ನೀಡಿದ ಕೊಡುಗೆ ಅಪಾರವಾಗಿದೆ. ಇದಕ್ಕೆ ಕಾರಣವಾದ ಮತ್ತು ನಮ್ಮ ನಾಡಿನ ಭೂಪಟದ ಸ್ಪಷ್ಟತೆಯ ಬುನಾದಿಗೆ ತ್ಯಾಗ ಬಲಿದಾನಗಳನ್ನು ಸಂದಾಯ ಮಾಡಿದ ಮಹನೀಯರನ್ನು ನಾವು ಗೌರವದಿಂದ ಸ್ಮರಿಸಬೇಕು. ಅನೇಕ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕ ಒಂದು ಪ್ರಾಂತ್ಯವಾಗಿ ರೂಪ ತಾಳಲು ಡೆಪ್ಯೂಟಿ ಚನ್ನಬಸಪ್ಪ, ವೆಂಕಟ ನಾರಾಯಣಪ್ಪ ಬೆಳ್ಳಾವಿ, ಆಲೂರು ವೆಂಕಟರಾಯರು, ಉತ್ತಂಗಿಚನ್ನಪ್ಪ, ಬಿ.ಎಂ.ಶ್ರೀಕಂಠಯ್ಯ, ನಿಟ್ಟೂರು ಶ್ರೀನಿವಾಸರಾಯ, ಗೊರೂರು ರಾಮಸ್ವಾಮಿ ಅಯ್ಯಂಗಾರರು, ತೀ.ನಂ.ಶ್ರೀಕಂಠಯ್ಯ, ಹೆಚ್‌.ಎಸ್‌.ದೊರೈಸ್ವಾಮಿ, ಪಾಟೀಲ ಪುಟ್ಟಪ್ಪ, ಕೊ.ಚನ್ನಬಸಪ್ಪ, ಅ.ನ. ಕೃಷ್ಣರಾಯರು ಮೊದಲಾದವರು ಕಾರಣಕರ್ತರಾಗಿ ಕನ್ನಡ ನಾಡ ಪರಂಪರೆಯಲ್ಲಿ ಅವಿಸ್ಮರಣೀಯರಾಗಿದ್ದಾರೆ ಎಂದರು.
ನಾಡಿನ ಶೈಕ್ಷಣಿಕ ಕ್ರಾಂತಿಗೆ ಮಹಾನ್‌ ಕೊಡುಗೆ ನೀಡಿರುವ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ, ಮಹಾನ್‌ ಸಂತ, ಕಾಯಕ ಯೋಗಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಸ್ಮರಿಸಿದ ಅವರು, ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ, ಕಲೆ, ಶಿಲ್ಪಕಲೆ, ಪರಂಪರೆಗಳೆಲ್ಲವೂ ವಿಶ್ವಮಟ್ಟದ ಮನ್ನಣೆಗೆ ಪಾತ್ರವಾಗಿವೆ. ಇಂದು ನಮ್ಮ ನಾಡು ವಿಜ್ಞಾನ- ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಸಾಂಸ್ಕೃತಿಕ, ಸಾಹಿತ್ಯಿಕ, ಪಾರಂಪರಿಕ ಹಿನ್ನೆಲೆ ಪಡೆದಿರುವ ಕನ್ನಡ ನಾಡು ವೈಜ್ಞಾನಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿಯೂ ವೈವಿಧ್ಯತೆ ಹೊಂದಿದೆ ಎಂದರು.
ಪುರಾತನವಾದ ಕನ್ನಡ ಭಾಷೆ ಕಂಪಿನ ಮಹತ್ವವನ್ನು ಸಾರಲು ನಾವೆಲ್ಲರೂ ಮುಂದಾಗೋಣ, ಕನ್ನಡ ನೆಲ ಸಾಹಿತ್ಯ, ಕಲೆಗಳ ಬೀಡಾಗಿದ್ದು, ನದಿಗಳಿಂದ ಫಲವದ್ಭರಿತವಾಗಿರುವ ಈ ನೆಲದಲ್ಲಿ ಹುಟ್ಟಿದ ನಾವೇ ಧನ್ಯರು. ನಾಡು-ನುಡಿ, ಜೀವ-ಜಲವನ್ನು ಪೋಷಿಸುವುದರೊಂದಿಗೆ ನಮ್ಮ ನೆಲ-ಜಲ ಸಮರ್ಥವಾಗಿ ಬಳಸಿಕೊಂಡು ಸಮೃದ್ಧ ಕರ್ನಾಟಕ ನಿರ್ಮಾಣ ಮಾಡೋಣ ಎಂದು ನುಡಿದರು.
ಜಿಲ್ಲೆಯಲ್ಲಿ ಹೇಮಾವತಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಹಾಗೂ ವರುಣನ ಕೃಪೆಯಿಂದಾಗಿ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿದ್ದು, ಕಲ್ಪತರು ನಾಡಲ್ಲಿ ಅನೇಕ ವರ್ಷಗಳ ಬಳಿಕ ಹಸಿರುತನ ಮೈದಳೆದಿದೆ ಎಂದರು.
ಕೊರೋನಾ ವಾರಿಯರ್ಸ್‌ ಹಾಗೂ ಸಾರ್ವಜನಿಕರ ಸಹಕಾರದಿಂದ ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿಯೂ ಮಹಾಮಾರಿ ಕೋವಿಡ್‌ ಸೋಂಕು ಕ್ಷೀಣಿಸಿದೆ. ಸೋಂಕಿನ ಪ್ರಮಾಣ ಹತೋಟಿಗೆ ಬರಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ದೇಶದಲ್ಲಿನ 100 ಸ್ಮಾರ್ಟ್ ಸಿಟಿಗಳ ಪೈಕಿ ತುಮಕೂರು ಸ್ಮಾರ್ಟ್ ಸಿಟಿ 16ನೇ ಸ್ಥಾನದಲ್ಲಿದೆ. ಹಲವು ಟೀಕೆ- ಟಿಪ್ಪಣಿಗಳ ನಡುವೆಯೂ ತುಮಕೂರು ಸ್ಮಾರ್ಟ್ ಸಿಟಿ ಉತ್ತಮ ಪ್ರಗತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಂಡ ಬಳಿಕ ತುಮಕೂರು ಚಿತ್ರಣ ಬದಲಾಗಲಿದೆ ಎಂದು ಹೇಳಿದರು.
ರೈಲ್ವೆ ಭೂಪಟದಲ್ಲಿಯೂ ತುಮಕೂರು ಜಿಲ್ಲೆಯನ್ನು ಕಾಣುವಂತೆ ಮಾಡಲಾಗುತ್ತಿದೆ. ರಾಯದುರ್ಗ- ದಾವಣಗೆರೆ ರೈಲ್ವೆ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ರೈಲ್ವೆ ಮಾರ್ಗಗಳು ಬ್ರಾಡ್ಗೇಜ್‌ ಆಗಲಿವೆ. ಇದರಿಂದ ಬೆಂಗಳೂರು ನಗರದಂತೆಯೇ ಜಿಲ್ಲೆಯ ವ್ಯಾಪಾರ- ವಹಿವಾಟು ಸುಲಭವಾಗಲಿದೆ ಎಂದರು.
ಬೆಂಗಳೂರು ನಂತರ ತುಮಕೂರು ಎಲ್ಲಾ ಕ್ಷೇತ್ರದಲ್ಲೂ ಮಾನ್ಯತೆ ಪಡೆದ ಜಿಲ್ಲೆಯಾಗಲಿದ್ದು, ಕೈಗಾರಿಕಾ ಕ್ಷೇತ್ರದಲ್ಲೂ ಮುಂಚೂಣಿ ಸ್ಥಾನ ಪಡೆಯಲಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಪ್ರಸಕ್ತ ವರ್ಷ 800 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವ ನಿರೀಕ್ಷೆ ಹೊಂದಲಾಗಿದೆ. ಅಂತೆಯೇ, ಕೊರಟಗೆರೆ ಮತ್ತು ಮಧುಗಿರಿಯಲ್ಲಿಯೂ ಕೈಗಾರಿಕೆಗಳನ್ನು ಸ್ಥಾಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಯಲ್ಲಿ ತೆಂಗು ಬೆಳೆಯನ್ನು ಆಯ್ಕೆ ಮಾಡಲಾಗಿದ್ದು, ತೆಂಗು ಬೆಳೆಯ ಉತ್ಪನ್ನಗಳಿಗೆ ಪೂರಕವಾದ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ತಮಿಳುನಾಡಿನ ತೆಂಗು ನಾರಿನ ಕೈಗಾರಿಕೆಗಳಿಗೆ ತುಮಕೂರಿನಿಂದಲೇ ಕಚ್ಚಾ ವಸ್ತು ರಫ್ತಾಗುತ್ತಿದೆ. ಈ ಕಚ್ಚಾವಸ್ತುಗಳನ್ನು ಜಿಲ್ಲೆಯಲ್ಲಿಯೇ ಬಳಸಿಕೊಳ್ಳುವ ನಿಟ್ಟಿನಲ್ಲಿ ನಾರಿನ ಕೈಗಾರಿಕೆ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಕೃಷಿ ಮತ್ತು ಕೈಗಾರಿಕೆ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿಕೊಂಡು ನಡೆದರೆ ಕೃಷಿ ಲಾಭದಾಯಕವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರ ಬೆಳೆಸುವುದರ ಜೊತೆಗೆ ಕೈಗಾರಿಕಾ ಸ್ಥಾಪನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಎತ್ತಿನಹೊಳೆ ನೀರಾವರಿ ಯೋಜನೆಯಿಂದ ಜಿಲ್ಲೆಯು ಜಲ ಸಂಪದ್ಭರಿತವಾಗಲಿದೆ. ಈ ಯೋಜನೆ ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಜಿಲ್ಲೆಗೆ ನೀರು ಹರಿಯಲಿದೆ. ಅಂತೆಯೇ, ಭದ್ರಾ ಮೇಲ್ದಂಡೆ ಯೋಜನೆ ಮೂಲಕವೂ ಜಿಲ್ಲೆಗೆ 6 ಟಿಎಂಸಿ ನೀರು ತರುವ ಯೋಜನಾ ಕಾರ್ಯ ವೇಗವಾಗಿ ನಡೆಯುತ್ತಿದೆ. ಆರಂಭದಲ್ಲಿ ಈ ಯೋಜನೆಯಿಂದ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ಭಾಗಕ್ಕೆ ನೀರನ್ನು ತರಲಾಗುವುದು. ಬಳಿಕ ಉಳಿದೆಲ್ಲಾ ಭಾಗಕ್ಕೆ ನೀರನ್ನು ಹರಿಸಲಾಗುವುದು. ಈ ಎರಡೂ ಯೋಜನೆಗಳಿಂದ ಜಿಲ್ಲೆಯ ನೀರಿನ ಬೇಡಿಕೆ ಈಡೇರಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿಯೂ ಬಹಳ ದೊಡ್ಡ ಹೆಜ್ಜೆಯನ್ನಿಡಲು ಮುಂದಾಗಿದ್ದೇವೆ. ಈಗಾಗಲೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೂ ಚಿಂತನೆ ನಡೆಸಲಾಗಿದೆ. ವೈದ್ಯಕೀಯ ಸೇವೆಯನ್ನು ಉತ್ತಮವಾಗಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿಯೂ ಆಮ್ಲಜನಕ ಹಾಸಿಗೆಗಳ ಸೇವೆ ಕಲ್ಪಿಸಲಾಗಿದ್ದು, ಪ್ರತಿ ಪಿ.ಎಚ್.ಸಿಗಳಲ್ಲಿಯೂ ಆಮ್ಲಜನಕ ಹಾಸಿಗೆ ಸೇವೆ ಒದಗಿಸಲು ಕ್ರಮ ವಹಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು ಸ್ವತಃ ಆಮ್ಲಜನಕ ಉತ್ಪತ್ತಿ ಮಾಡುವ ಶಕ್ತಿ ಹೊಂದಿದ್ದು, ಆಮ್ಲಜನಕದ ಕೊರತೆ ನೀಗಿದೆ. ಅಲ್ಲದೆ, ದಾನಿಗಳೂ ಸಹ ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದು, ಇದರಿಂದ ಗ್ರಾಮೀಣ ಮಟ್ಟದಲ್ಲಿಯೂ ಉತ್ತಮ ವೈದ್ಯಕೀಯ ಸೇವೆ ನೀಡಲು ಸುಲಭವಾಗಿದೆ ಎಂದರು.
ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಿ ಜಲಜೀವನ್‌ ಮಿಷನ್‌ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಎಲ್ಲಾ ಮನೆ-ಮನೆಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು. ಈಗಾಗಲೇ ಪ್ರಥಮ ಆದ್ಯತೆ ಮೇರೆಗೆ ನೀರಿನ ಮೂಲವಿರುವ ಹಾಗೂ ಓವರ್‌ ಹೆಡ್‌ ಟ್ಯಾಂಕ್‌ ಹೊಂದಿರುವ ಗ್ರಾಮಗಳ ಮನೆ ಮನೆಗೆ ನಳ ಅಳವಡಿಸುವ ಕಾರ್ಯ ನಡೆಯುತ್ತಿದೆ. ಉಳಿದ ಗ್ರಾಮಗಳಿಗೆ ಓವರ್ ಹೆಡ್ ಟ್ಯಾಂಕ್‌ ನಿರ್ಮಿಸಿ ಜಲಜೀವನ್‌ ಮಿಷನ್‌ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿಯೂ ಉತ್ತಮ ಕೆಲಸ ಮಾಡಲಾಗುತ್ತಿದೆ. ತಾಲೂಕುವಾರು ಅದಾಲತ್‌ ನಡೆಸಿ ರೈತರಿಗೆ ಸ್ಥಳದಲ್ಲಿ ಸಮಸ್ಯೆ ಬಗೆಹರಿಸಿ ವಿಲೇವಾರಿ ಮಾಡಲಾಗುತ್ತಿದೆ. ತಾಲೂಕೊಂದರಲ್ಲಿ ತಿಂಗಳಿಗೆ ಎರಡು ಮೂರು ಅದಾಲಾತ್‌ ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯ ಕಲೆರಂಗ ಕಲೆ ಉಳಿಸಿ ಬೆಳೆಸುವ ಕೆಲಸ ಮಾಡುವ ನಿಟ್ಟಿನಲ್ಲಿ ರಂಗಭೂಮಿಯಲ್ಲಿ ಗುರುತಿಸಿಕೊಂಡ ಮಹಾನ್‌ ವ್ಯಕ್ತಿಗಳ ಹೆಸರಿನಲ್ಲಿ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಜಾನಪದ ಕಲೆಗಳನ್ನು ಜೀವಂತವಾಗಿರಿಸಲು ಪ್ರಯತ್ನ ಮಾಡಲಾಗುತ್ತಿದ್ದು, ಜನಪದ ಕ್ಷೇತ್ರದ ಉಳಿಸಿ ಬೆಳೆಸಲು ಒತ್ತು ಕೊಡಲಾಗಿದೆ ಎಂದರು.
ಕೃಷಿಯಲ್ಲಿಯೂ ಜಿಲ್ಲೆ ಫಲವತ್ಭರಿತವಾಗುತ್ತಿದ್ದು, ಉತ್ತಮ ಮಳೆಯಾಗಿರುವುದರಿಂದ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಶೇ.94ರಷ್ಟು ಬಿತ್ತನೆಯಾಗಿದೆ. ಇದರಿಂದ ನೀರು, ಮೇವಿನ ಕೊರತೆ ಕಾಡುವ ಪ್ರಮೇಯ ಎದುರಾಗುವುದಿಲ್ಲ. ಜಿಲ್ಲೆಯಲ್ಲಿ ತೆಂಗು ಬೆಳೆಯಂತೆಯೇ ಅಡಿಕೆ ಬೆಳೆಯೂ ವ್ಯಾಪಕವಾಗಿ ಹೆಚ್ಚುತ್ತಿದ್ದು, ಅಡಿಕೆ ಬೆಳೆಗೂ ಉತ್ತೇಜನ ನೀಡಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ ಶೀಥಲ ಘಟಕ ಮತ್ತು ಹಣ್ಣು ಮಾಗಿಸುವ ಘಟಕಗಳನ್ನು ಸ್ಥಾಪಿಸಲಾಗಿದೆ. ಹೂವಿನ ವ್ಯಾಪಾರವನ್ನು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಶಿರಾದಲ್ಲಿ ಹೂವು ಮಾರುಕಟ್ಟೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಮೂಸಂಬಿ ಮತ್ತು ಡ್ರಾಗನ್‌ ಫ್ರೂಟ್‌ ಬೆಳೆಗೂ ಜಿಲ್ಲೆಯಲ್ಲಿ ಹೆಚ್ಚು ಆದ್ಯತೆ ನೀಡಲಾಗಿದ್ದು, ಎಣ್ಣೆ ಕಾಳುಗಳ ಬೆಳೆಗೂ ಸಹ ಉತ್ತೇಜನ ನೀಡಲು ಕ್ರಮವಹಿಸಲಾಗಿದೆ. ತುಮಕೂರು ಜಿಲ್ಲೆಯನ್ನು ಎಣ್ಣೆಕಾಳು ಬೆಳೆಗಳ ಜಿಲ್ಲೆಯನ್ನಾಗಿ ಪರಿವರ್ತನೆ ಮಾಡಲು ಕ್ರಮ ವಹಿಸಲಾಗಿದೆ. ಎಣ್ಣೆಕಾಳು ಬೆಳೆಗಳ ಬೆಳೆಯುವ ಭೂಪಟದಲ್ಲಿ ತುಮಕೂರು ಜಿಲ್ಲೆಯು ಕಾಣುವಂತೆ ಮಾಡಲಾಗುವುದು. ಇದಕ್ಕಾಗಿ ಎಣ್ಣೆಕಾಳುಗಳ ಬೆಳೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಇದೇ ವೇಳೆ ಚಿತ್ರನಟ ಪುನೀತ್‌ ರಾಜ್‌ ಕುಮಾರ್‌, ಸಂಚಾರಿ ವಿಜಯ್‌, ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಮೃತರಾದ ಅನೇಕರನ್ನು ಸ್ಮರಿಸಿದರು.
ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವರು ತುಕಡಿಗಳ ಪರಿವೀಕ್ಷಣೆ ನಡೆಸಿದರು. ಬಳಿಕ ಜಿಲ್ಲಾ ಶಸಸ್ತ್ರ ಮೀಸಲು ಪೊಲೀಸ್‌ ಪಡೆ, ನಾಗರಿಕ ಪೊಲೀಸ್‌ ತಂಡ, ರಾಜ್ಯ ಮೀಸಲು ಪೊಲೀಸ್‌ ತಂಡ, ಗೃಹ ರಕ್ಷಕ ದಳ, ಸರ್ಕಾರಿ ಮಹಿಳಾ ಕಾಲೇಜಿನ ರೇಂಜಸ್‌ ತಂಡ, ಮಹಿಳಾ ಪೊಲೀಸ್‌ ತಂಡ, ನಾಲ್ಕನೇ ಕರ್ನಾಟಕದ ಬೆಟಾಲಿಯನ್‌ ಎನ್‌ಸಿಸಿ ಬಾಲಕಿಯರ ಮತ್ತು ಬಾಲಕರ ತಂಡಗಳು ಸೇರಿದಂತೆ 8 ತುಕಡಿಗಳು ಪಥ ಸಂಚಲನ ನಡೆಸಿ ಗೌರವ ಸಲ್ಲಿಸಿದವು.
ಇದೇ ವೇಳೆ ನಗರದ ಅಹಮದಾಬಾದ್ ನಲ್ಲಿ ನಡೆದ ಅಖಿಲ ಭಾರತ 30ನೇ ರೈಫಲ್‌ ಶೂಟಿಂಗ್ ನಲ್ಲಿ ವಿಜೇತರಾಗಿ ರಾಷ್ಟಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್‌, ಮೇಯರ್‌ ಬಿ.ಜಿ. ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಾಪುರವಾಡ್‌, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಧಿಕಾರಿ ಅಜಯ್‌, ತಹಸೀಲ್ದಾರ್‌ ಮೋಹನ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ, ತೋಟಗಾರಿಕಾ ಉಪ ನಿರ್ದೇಶಕ ರಘು, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಕನ್ನಡ ಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆಗೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಜಾನಪದ ಕಲಾ ತಂಡಗಳೊಂದಿಗೆ ಆರಂಭವಾದ ಮೆರವಣಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ತಲುಪಿತು.
ಈ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪುರವಾಡ್‌, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ. ಉಪವಿಭಾಗಧಿಕಾರಿ ಅಜಯ್‌ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!