ಕುಣಿಗಲ್: ಪಟ್ಟಣದ ಕುದುರೆ ಫಾರಂ ಗೋಡೆಯ ಮೇಲೆ ಅಳವಡಿಸಲಾಗಿರುವ ಜಾಹಿರಾತಿನಲ್ಲಿ ಕನ್ನಡಭಾಷೆ ಬಳಸದೆ ಬರೀ ಆಂಗ್ಲ ಭಾಷೆ ಬಳಸಿರುವ ಬಗ್ಗೆ ಆಕ್ಷೇಪಿಸಿ ವಕೀಲ ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಾಹಿರಾತು ಫಲಕಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಕುದುರೆ ಫಾರಂ ಗೋಡೆಗಳಿಗೆ ಸುಮಾರು ಮುವತ್ತಕ್ಕೂ ಹೆಚ್ಚು ಖಾಸಗಿ ಕಂಪನಿಯ ಸುಗಂಧಿತ ಅಡಿಕೆ ಮಾರಾಟದ ಜಾಹಿರಾತು ಫಲಕ ಹಾಕಲಾಗಿದೆ. ಜಾಹಿರಾತು ಹಾಕಲು ಪುರಸಭೆಗೆ ಹಣ ಪಾವತಿಸಲಾಗಿದೆ, ಆದರೆ ಜಾಹಿರಾತು ಫಲಕದಲ್ಲಿ ಕನ್ನಡ ಭಾಷೆ ಬಳಕೆ ಮಾಡದೆ ಎಲ್ಲೆಡೆ ಆಂಗ್ಲಭಾಷೆ ರಾರಾಜಿಸುತ್ತಿದ್ದರಿಂದ ವಕೀಲ ಗಂಗಾಧರ್, ಕನ್ನಡ ಭಾಷೆಯಲ್ಲಿ ಜಾಹಿರಾತು ಪ್ರಕಟಿಸುವಂತೆ ಮುಖ್ಯಾಧಿಕಾರಿ, ತಹಶೀಲ್ದಾರ್, ಪೊಲೀಸ್ ನಿರೀಕ್ಷಕರಿಗೆ ಕೆಲದಿನದ ಹಿಂದೆ ಮನವಿ ನೀಡಿದ್ದರು. ಯಾವುದೇ ಕ್ರಮವಾಗದ ಕಾರಣ ಕನ್ನಡ ನಾಡಿನಲ್ಲೆ ಕನ್ನಡ ಭಾಷೆಗೆ ಅವಮಾನವಾಗುತ್ತಿದೆ ಎಂದು ಆರೋಪಿಸಿ ಸೋಮವಾರ ರಾಜ್ಯೋತ್ಸವ ಆಚರಣೆಯ ವಿಶೇಷವಾಗಿ ಮಸಿ ಬಳಿಯಲು ಮುಂದಾದರು.
ಸ್ಥಳಕ್ಕಾಗಮಿಸಿದ ಪೊಲೀಸರು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಶೀಘ್ರದಲ್ಲೆ ಕನ್ನಡಭಾಷೆಯ ಫಲಕ ಹಾಕುವ ಬಗ್ಗೆ ಭರವಸೆ ನೀಡಿದ್ದರಿಂದ ಸಾಂಕೇತಿಕವಾಗಿ ಒಂದು ಫಲಕಕ್ಕೆ ಮಸಿಬಳಿದು ಇನ್ನೊಂದು ವಾರದೊಳಗೆ ಕನ್ನಡ ಫಲಕ ಹಾಕದೆ ಇದ್ದಲ್ಲಿ ಎಲ್ಲಾ ಫಲಕಕ್ಕೂ ಮಸಿಬಳಿಯುವ ಎಚ್ಚರಿಕೆ ನೀಡಿದರು.
ಕನ್ನಡ ಅಭಿಮಾನಿಗಳಾದ ಭಾಸ್ಕರ್, ಗುರುಕರುಣೇಶ್, ಇಮ್ರಾನ್, ವೆಂಕಟೇಶ್, ಧನಂಜಯ, ಮುನಿರಾಜು, ನಾಗರಾಜ್ ಇತರರು ಇದ್ದರು.
ಜಾಹಿರಾತಿನಲ್ಲಿ ಇಂಗ್ಲಿಷ್ ಭಾಷೆ ಬಳಕೆಗೆ ಆಕ್ರೋಶ
Get real time updates directly on you device, subscribe now.
Comments are closed.