ಹಾಲು ಉತ್ಪಾದಕರ ಸಂಘಗಳು ನಿಯಮಗಳಂತೆ ಕೆಲಸ ಮಾಡ್ತಿವೆ

ಶಾಸಕರ ಹಸ್ತಕ್ಷೇಪಕ್ಕೆ ಕೃಷ್ಣಕುಮಾರ್‌ ಕಿಡಿ

135

Get real time updates directly on you device, subscribe now.

ಕುಣಿಗಲ್‌: ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾಯಿದೆ, ನಿಯಮಗಳಿಗೆ ಒಳಪಟ್ಟು ಕೆಲಸ ಮಾಡುತ್ತಿದ್ದರೂ ಶಾಸಕರು ವಿನಾಕಾರಣ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಎಂದು ಪಿ.ಎಲ್.ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಡಿ.ಕೃಷ್ಣಕುಮಾರ್‌ ಹೇಳಿದರು.
ತಾಲೂಕಿನ ಗವಿಮಠದ ಖಾಸಗಿ ಸಮುದಾಯ ಭವನದಲ್ಲಿ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳ ಪ್ರಾದೇಶಿಕ ಸಭೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕೊವಿಡ್ ಸಂದರ್ಭದಲ್ಲಿ ತಾಲೂಕಿನ ಗ್ರಾಮಾಂತರ ಪ್ರದೇಶದ 147 ಸಂಘದ 25 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರಿಗೆ ಅವರ ಮನೆಬಾಗಿಲಲ್ಲಿ ನೆರವಾಗಿದ್ದು ತುಮಕೂರು ಹಾಲು ಒಕ್ಕೂಟ, ಸಂಘಗಳಲ್ಲಿ ಎಲ್ಲಾ ಪಕ್ಷದವರು ಇದ್ದಾರೆ, ಆದರೆ ಕೆಲವರು ವಿನಾಕಾರಣ ರಾಜಕಾರಣ ಮಾಡಿ ದುರ್ಬಲಗೊಳಿಸುವ ಕೃತ್ಯ ಮಾಡುತ್ತಿದ್ದು ಎಚ್ಚರ ವಹಿಸಬೇಕು, ತಾಲೂಕಿನಲ್ಲಿ ಜಿಲ್ಲೆಗೆ ಅತಿ ಹೆಚ್ಚು ದಿನ ಒಂದಕ್ಕೆ 1.33 ಲಕ್ಷ ಲೀ. ಹಾಲು ಉತ್ಪಾದಿಸಲಾಗುತ್ತಿದೆ, ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದಿಸಿ ತಾಲೂಕಿಗೆ ಉತ್ತಮ ಹೆಸರು ತರಬೇಕು. ಉತ್ಪಾದಕರೆಲ್ಲರೂ ರಾಸುಗಳಿಗೆ ವಿಮೆ ಮಾಡಿಸಬೇಕು. ವಿಮೆ ಮಾಡಿಸುವಾಗ ಒಕ್ಕೂಟ ಶೇ.80 ರಷ್ಟು, ಉತ್ಪಾದಕ ಶೆ.20 ರಷ್ಟು ಹಾಕಬೇಕು. ಕಳೆದ ಸಾಲಿನಲ್ಲಿ ರಾಸು ವಿಮೆ ಯೋಜನೆಯಲ್ಲಿ 286 ರಾಸುಗಳಿಗೆ 87 ಲಕ್ಷ ರೂ. ಪರಿಹಾರ ನೀಡಲಾಗಿದೆ, ತಾಲೂಕಿನಲ್ಲಿ ರಾಸುಗಳಿಗೆ ಹೆಚ್ಚಿನ ರೋಗ ಭಾದೆ ಕಾಣಿಸಿಕೊಳ್ಳುತ್ತಿದೆ. ಉತ್ಪಾದಕರು ವಿಮೆ ಮಾಡಿಸಲು ನಿರ್ಲಕ್ಷ್ಯ ತೋರಬಾರದು, ರೈತರಿಗೆ ನೆರವಾಗುವ ಯಶಸ್ವಿನಿ ಯೋಜನೆಯ ಮರು ಆರಂಭಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ವಿ.ಮಹಾದೇವಯ್ಯ ಮಾತನಾಡಿ, ಜಿಲ್ಲೆಯಲ್ಲಿ ದಿನ ಒಂದಕ್ಕೆ 8.30 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಹಾಲನ್ನು ದ್ರವರೂಪದಲ್ಲೆ ಮಾರಾಟ ಮಾಡಿದಾಗ ಉತ್ಪಾದಕರಿಗೂ, ಒಕ್ಕೂಟಕ್ಕೂ ಲಾಭವಾಗುತ್ತದೆ. ಈ ನಿಟ್ಟಿನಲ್ಲಿ ಒಕ್ಕೂಟವು ಕೇಂದ್ರ, ರಾಜ್ಯ ಸರ್ಕಾರದ ನೆರವಿನಿಂದ ವಿವಿಧ ಯೋಜನೆ ಕೈಗೊಳ್ಳುತ್ತಿದೆ. ಕೊವಿಡ್‌ ಸಂದರ್ಭದಲ್ಲಿ ರಾಜ್ಯದ ವಿವಿಧ ಒಕ್ಕೂಟಗಳು ಹಾಲಿಗೆ ರಜೆ ಮಾಡಿದರೂ ತುಮಕೂರು ಒಕ್ಕೂಟ ರಜೆ ಮಾಡದೆ ಉತ್ಪಾದಕರಿಗೆ ಒಂದು ವಾರಕ್ಕೆ 19.50 ಕೋಟಿ ರೂ. ಬಟವಾಡೆ ಮಾಡಲಾಗಿದ್ದು ಯಾವುದೇ ಬಾಕಿ ನಿಲ್ಲಿಸಿಲ್ಲ, ತಾಲೂಕಿನಲ್ಲಿ ಬೃಹತ್‌ ಹಾಲು ಸಂಸ್ಕರಣ ಘಟಕಕ್ಕೆ ಶೀಘ್ರದಲ್ಲೆ ಶಂಕುಸ್ಥಾಪನೆ ಮಾಡಲಾಗುವುದು ಎಂದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುಬ್ಬರಾಯಭಟ್ಟ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘವೂ ಎಲ್ಲಾ ಸಹಕಾರಿಗಳ ಶಕ್ತಿಯಿಂದ ರೂಪುಗೊಂಡ ಸಂಘವಾಗಿದ್ದು, ಈ ಮಹಾಶಕ್ತಿಯನ್ನು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ವಿನಿಯೋಗಿಸಿದಾಗ ಉತ್ತಮ ಯಶಸ್ಸುಸಾಧ್ಯ ಎಂದರು.
ಕ್ಷೀರಕ್ರಾಂತಿ ಪಿತಾಮಹ ಕುರಿಯನ್‌, ನಂದಿನಿ ಉತ್ಪನ್ನಗಳ ಪ್ರಚಾರಕ ನಟ ಪವರ್ ಸ್ಟಾರ್‌ ಪುನೀತ್ ರಾಜಕುಮಾರ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಸಭೆ ಪ್ರಾರಂಭಿಸಲಾಯಿತು. ತಾಲೂಕು ಶಾಖಾ ವ್ಯವಸ್ಥಾಪಕಿ ನವ್ಯಶ್ರೀ, ಎಡೆಯೂರು ಘಟಕದ ವ್ಯವಸ್ಥಾಪಕ ಕುಮಾರ್‌, ವಕೀಲ ನಾರಾಯಣಗೌಡ ಇತರರು ಇತರರು ಇದ್ದರು. ಉತ್ಪಾದಕರ ಕುಟುಂಬದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!