ಶಿರಾ: ಮೊನ್ನೆ ನಡೆದ ಎರಡು ಉಪ ಚುನಾವಣೆಗಳಲ್ಲಿ ಮುಖ್ಯಮಂತ್ರಿಗಳ ಸ್ವಂತ ಜಿಲ್ಲೆ, ಅವರ ಪ್ರಭಾವ ಇರುವ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವುದು ಮುಂದಿನ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ ಎನ್ನುವುದರ ಸೂಚನೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹರ್ಷ ವ್ಯಕ್ತಪಡಿಸಿದರು.
ಇಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳ ಪ್ರಭಾವ, ಅಧಿಕಾರ ಲೆಕ್ಕಿಸದೇ ಆಡಿದ ಮಾತು, ಹಣ ಮತ್ತು ತೋಳ್ಬಲ ಪ್ರಯೋಗಿಸಿದ ನಂತರವೂ ಜನರು ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಪಕ್ಷಕ್ಕೆ ಹೊಸ ಶಕ್ತಿ, ಮಾನಸಿಕ ಹುರುಪು, ಧೈರ್ಯ ತಂದು ಕೊಟ್ಟಿದೆ. ಮುಂದಿನ ಚುನಾವಣೆ ಇನ್ನು ಒಂದೂವರೆ ವರ್ಷದಲ್ಲಿ ಬರಲಿದ್ದು, ಕಾಂಗ್ರೆಸ್ ಸದೃಢವಾಗಿ ಸಂಘಟನೆ ಆಗಲಿದೆ ಎಂದರು.
ಹಾನಗಲ್ ಕ್ಷೇತ್ರದಲ್ಲಿ ನಾನೂ ಕೆಲ ದಿನಗಳ ಕಾಲ ಪ್ರಚಾರ ನಡೆಸಿದ್ದೆ, ನನ್ನೊಡನೆ ನನ್ನ ಕ್ಷೇತ್ರದ ಹಲವರು ಬಂದಿದ್ದರು, ಅದರಂತೆ ಬೇರೆ ಬೇರೆ ಕಡೆಯಿಂದಲೂ ಬಂದು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ ಎಲ್ಲರೂ ಅಭಿನಂದನಾರ್ಹರು, ಗೆಲುವು ಕಂಡ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಶುಭಾಶಯಗಳು ಎಂದರು.
ಕ್ಷೇತ್ರದ ಪ್ರಗತಿ ಬಗ್ಗೆ ವರದಿ ನೀಡಲಿ
ಇದೇ ವೇಳೆ ಶಿರಾ ಕ್ಷೇತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಮಾಜಿ ಸಚಿವರು, ನನ್ನ ಕಾಲ ಅಂದ್ರೆ 2017- 18ನೇ ಸಾಲಿನಲ್ಲಿ ಆಗಿದ್ದ ಪ್ರಗತಿ ಬಿಟ್ಟರೆ ಕ್ಷೇತ್ರದಲ್ಲಿ ಹೊಸ ಪ್ರಗತಿ ಆಗಿಲ್ಲ, ಹೊಸದಾಗಿ ಮನೆಗಳ ಹಂಚಿಕೆಯಾಗಿಲ್ಲ, ಹಳೆ ಮನೆಗಳಿಗೆ ಸರಿಯಾಗಿ ಬಿಲ್ ನೀಡಲಾಗುತ್ತಿಲ್ಲ, ಹೊಸ ಕಾಮಗಾರಿಗಳು ಆರಂಭಗೊಂಡಿಲ್ಲ, ಒಂದು ವರ್ಷದ ಸಾಧನೆ ಏನು? ಎಷ್ಟು ಹೊಸ ಕಾಮಗಾರಿ ತರಲಾಗಿದೆ, ಎಷ್ಟು ಹೊಸ ಮನೆಗಳ ಹಂಚಿಕೆ ಆಗಿದೆ, ಎಷ್ಟು ಬಿಲ್ ಮಾಡಲಾಗಿದೆ ಎಂಬುದನ್ನು ಶಾಸಕರು ಜನರ ಮುಂದೆ ಬಿಚ್ಚಿಡಲಿ ಎಂದು ಸವಾಲು ಎಸೆದರು.
ಕೊರೊನಾದಿಂದ ಸತ್ತವರಿಗೆ ಸರ್ವೋಚ್ಚ ನ್ಯಾಯಾಲಯ 50 ಸಾವಿರ ಪರಿಹಾರ ಕೊಡುವಂತೆ ನಿರ್ದೇಶಿಸಿದೆ, ಸರ್ಕಾರ ಒಂದು ಲಕ್ಷ ಕೊಡುವ ಮಾತಾಡಿತ್ತು, ಈಗ ಅದೇ ಆದೇಶ ಹಿಂಪಡೆದು 50 ಸಾವಿರ ಕೊಡುವುದಾಗಿ ಹೇಳಿದ್ರು, ಕೊರೊನಾದಿಂದ ತಾಲ್ಲೂಕಿನಲ್ಲಿ ಸುಮಾರು 25 ಕ್ಕೂ ಹೆಚ್ಚು ಸಾವು ಆಗಿದೆ, ಕನಿಷ್ಟ ಸತ್ತವರಿಗೆ ಕೊರೊನಾದಿಂದ ಸಾವು ಎನ್ನುವ ಸರ್ಟಿಫಿಕೇಟ್ ಕೊಡಲು ಸಾಧ್ಯವಾಗಿಲ್ಲ ಎಂದು ಚುಚ್ಚಿದರು.
ತಾಯಿ ಮಕ್ಕಳ ಆಸ್ಪತ್ರೆಗೆ ಪ್ರತ್ಯೇಕ ಸಿಬ್ಬಂದಿ ನೇಮಕವಾಗಿಲ್ಲ, ಮೊದಲಿದ್ದ ಆಸ್ಪತ್ರೆಯ ಸಿಬ್ಬಂದಿಯೇ ಅಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾರೆ, ಆಕ್ಸಿಜನ್ ಪ್ಲಾಂಟ್ ಉದ್ಘಾಟನೆಗೊಂಡಿದೆ, ಅದು ಹೇಗೆ ಕೆಲಸ ನಿರ್ವಹಿಸುತ್ತಿದೆ ಎನ್ನುವ ಬಗ್ಗೆ ಜನರಿಗೆ ಮಾಹಿತಿ ನೀಡಲಾಗಿಲ್ಲ. ಆಡಳಿತ ಪಕ್ಷದ ಶಾಸಕರೇ ಹೇಳುವಂತೆ ನಮಗೆ ಎಷ್ಟು ಪರ್ಸಂಟೇಜ್ ಸಿಗುತ್ತೆ ಎನ್ನುವುದರ ಮೇಲೆ ಅಭಿವೃದ್ಧಿ ಕಾರ್ಯಗಳು ಅವಲಂಬಿತವಾಗಿವೆ ಎಂದಿದ್ದಾರೆ. ಇದು ಸರ್ಕಾರದ ಕಾರ್ಯವೈಖರಿಗೆ ಉದಾಹರಣೆ ಎಂದರು.
ನರಸತ್ತವರು ಯಾರು?
ತಾಲ್ಲೂಕಿನಲ್ಲಿ ನಾನು ಕಟ್ಟಿಸಿದ್ದ 121 ಬ್ಯಾರೇಜ್ ಗಳಲ್ಲಿ ಇತ್ತೀಚಿನ ಮಳೆಯಿಂದ ಸುಮಾರು 119 ಬ್ಯಾರೇಜ್ಗಳು ತುಂಬಿವೆ. ನನ್ನಅಧಿಕಾರದ ಅವಧಿಯಲ್ಲಿ ಹೇಮಾವತಿ ಚಾನಲ್ ನ್ನು ಬಾಗೂರು- ನವಿಲೆವರೆಗೆ ವಿಸ್ತರಿಸುವ ಕೆಲಸ ಮಾಡಿದ್ದೆ, ಅದಕ್ಕೂ ಮುನ್ನವೇ ಹಳೆ ಚಾನಲ್ ನಲ್ಲಿ 18 ಟಿಎಂಸಿ ವರೆಗೆ ನೀರು ಹರಿಸಿದ್ದೆ, ಈಗ ವಿಸ್ತರಣೆಗೊಂಡ ಚಾನಲ್ ನಲ್ಲಿ ಹರಿದಿರುವುದು ಕೇವಲ 11 ಟಿಎಂಸಿ, ವಿಸ್ತರಣೆಗೊಂಡ ಚಾನಲ್ ನಲ್ಲೂ ನಿಗದಿತ ನೀರು ಹರಿಸಲಾಗದಿದ್ದರೆ ಈಗ ನರಸತ್ತವರು ಯಾರು ಎಂದು ಹೇಳಬೇಕು? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
2015- 16ನೇ ಸಾಲಿನಲ್ಲಿ ಅಪ್ಪರ್ ಭದ್ರಾದ ತುಮಕೂರು ಚಾನಲ್ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆ, ಅದರ ಮೂಲಕ 10 ಟಿಎಂಸಿ ನೀರು ತರುವುದು ನಮ್ಮ ಯೋಜನೆ, ಇದಕ್ಕಾಗಿ ಸುಮಾರು 3060 ಎಕರೆ ಭೂ ಸ್ವಾಧೀನ ಆಗಬೇಕಿದೆ, ಅದರಲ್ಲಿ ಇಲ್ಲಿವರೆಗೆ ಎಷ್ಟು ಭೂ ಸ್ವಾಧೀನಗೊಂಡಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡುವರು ಯಾರು?
ಅದರಲ್ಲಿ ಶಿರಾಕ್ಕೆ 2.3 ಟಿಎಂಸಿ ನೀರು ಹಂಚಿಕೆಯಾಗಿತ್ತು, ಅದನ್ನು ಬಳಸಿ 45 ಕೆರೆಗಳಿಗೆ ಸುಮಾರು ಅರ್ಧ ತುಂಬುವಷ್ಟು ನೀರು ಎಂದು ಗುರುತಿಸಲಾಗಿತ್ತು, ಈಗ 65 ಕೆರೆಗಳಿಗೆ ನೀರನ್ನು ಹಂಚಿಕೆ ಮಾಡಲಾಗಿದೆ, ಆದರೆ ನೀರಿನ ಪ್ರಮಾಣ ಎಷ್ಟು ಹೆಚ್ಚಿಸಲಾಗಿದೆ ಎನ್ನುವ ಬಗ್ಗೆ ತುಟಿ ಬಿಡುತ್ತಿಲ್ಲ, ಹೊಸ ಹಂಚಿಕೆ ಪ್ರಕಾರ ಕೆರೆಗಳಿಗೆ ಕೇವಲ 30 ಪರ್ಸೆಂಟ್ ನೀರನ್ನು ಮಾತ್ರ ಹರಿಸಲಾಗುವುದು, ಅದರಂತೆ ಒಂದು ಟಿಎಂಸಿ ನೀರು ಶಿರಾಕ್ಕೆ ಬಂದರೆ ಉಳಿದ 1.3 ಟಿಎಂಸಿ ನೀರು ಹೋಗುವುದಾದರೂ ಎಲ್ಲಿಗೆ? ಇದರ ಬಗ್ಗೆ ಶಾಸಕರು ಮಾಹಿತಿ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು, ಹೀಗೆ ಶಿರಾ ಭಾಗದ ನೀರನ್ನು ಬೇರೆಕಡೆ ತೆಗೆದುಕೊಂಡು ಹೋಗಲು ನಾವು ಬಿಡುವುದಿಲ್ಲ. ನಮ್ಮ ಭಾಗದ ಕೊನೆ ಕೆರೆಗೂ ಅರ್ಧದಷ್ಟು ನೀರು ಹರಿಸಲೇ ಬೇಕು ಇದು ನಮ್ಮಒತ್ತಾಯ ಎಂದು ವಿವರಿಸಿದರು.
Comments are closed.