ಕುಣಿಗಲ್: ಪಟ್ಟಣದ ಸಂತೇಮೈದಾನ, ಕೋಟೆ ರಸ್ತೆಯು ಬೀದಿ ಬದಿ ವ್ಯಾಪಾರಿಗಳಿಂದ ವ್ಯಾಪಕ ಒತ್ತುವರಿಯಾಗಿದ್ದು ಕೂಡಲೆ ತೆರವಿಗೆ ಕ್ರಮಕೈಗೊಳ್ಳುವಂತೆ ಸದಸ್ಯರಾದ ನಾಗಣ್ಣ, ಉದಯ್ ಪುರಸಭೆ ಅಧಿಕಾರಿಗಳಿಗೆ ಆಗ್ರಹಿಸಿದರು.
ಮಂಗಳವಾರ ಪುರಸಭೆ ಅಧ್ಯಕ್ಷ ನಾಗೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಸದಸ್ಯರಾದ ನಾಗಣ್ಣ, ಉದಯ್, ಪುರಸಭೆ ರಸ್ತೆಗಳನ್ನು ಬೀದಿಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡು ಪ್ರಶ್ನಿಸಿದವರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ, ಇದರಿಂದ ಪುರಸಭೆಗೆ ಕೆಟ್ಟ ಹೆಸರು ಬರುತ್ತಿದೆ ಕೂಡಲೆ ಎರಡೂ ರಸ್ತೆಯ ಅತಿಕ್ರಮಣ ತೆರವುಗೊಳಿಸಿ ಎಲ್ಲರನ್ನು ಸಂತೇಮೈದಾನಕ್ಕೆ ಕಳಿಸಬೇಕೆಂದರು, ಮುಖ್ಯಾಧಿಕಾರಿ ರವಿಕುಮಾರ್ ಶೀಘ್ರದಲ್ಲೆ ಕಾರ್ಯಾಚರಣೆ ನಡೆಸುವ ಭರವಸೆ ನೀಡಿದರು.
ಸದಸ್ಯ ರಂಗಸ್ವಾಮಿ ಮಾತನಾಡಿ, ಪುರಸಭೆ ಕಾಮಗಾರಿಯಲ್ಲಿ ಶೇ.45 ರಷ್ಟು ಕಡಿಮೆ ನಮೂದಿಸಿ ಕೆಲಸ ಮಾಡುತ್ತಿದ್ದಾರೆ. ಇವರು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ, ಕಾಮಗಾರಿ ಗುಣಮಟ್ಟ ಏನು ಎಂದು ಪ್ರಶ್ನಿಸಿದರು. ಸದಸ್ಯ ರಾಮು, ಪುರಸಭೆ ಕಾಮಗಾರಿಗಳು ಕಳಪೆಯಾಗಿವೆ, ರಸ್ತೆ, ಚರಂಡಿ ಯಾವುದು ಸರಿ ಇಲ್ಲ, ಸುಮ್ಮನೆ ಗುತ್ತಿಗೆದಾರರ ನೆಪದಲ್ಲಿ ಪುರಸಭೆ ಅನುದಾನ ಪೋಲಾಗುತ್ತಿದೆ, ಕೆಲಸ ಮಾಡೋದೆ ಬೇಡ, ಪುರಸಭೆಗೆ ದುಡ್ಡಾದರೂ ಉಳಿಯಲಿ, ಕಾಮಗಾರಿ ಗಮನಿಸಬೇಕಾದ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾದರೆ ಕೆಲಸ ಎಷ್ಟರ ಮಟ್ಟಿಗೆ ಇರುತ್ತದೆ. ಪುರಸಭೆ ಕೆಲಸ ಮಾಡಿಸೋದೆ ಬೇಡ ಎಂದರು.
ಸದಸ್ಯ ನಾಗಣ್ಣ, ಪಟ್ಟಣದಲ್ಲಿ ಹಾದು ಹೋಗಿರುವ ಬಿಎಂ ಎಸ್ತೆ, ಮದ್ದೂರು- ತುಮಕೂರು ರಸ್ತೆಯ ಇಕ್ಕೆಲಗಳಲ್ಲಿ ವಾಣಿಜ್ಯ ಮಳಿಗೆ ಇದ್ದರೂ ಸರಿಯಾದ ಆಸ್ತಿ ತೆರಿಗೆ ವಸೂಲು ಮಾಡುತ್ತಿಲ್ಲ. ಪುರಸಭೆಗೆ ವಾರ್ಷಿಕ 4 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ವಂಚನೆಯಾಗುತ್ತಿದೆ, ಆಸ್ತಿ ತೆರಿಗೆ ವಿಭಾಗದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಸದಸ್ಯರೆಲ್ಲರೂ ಹೋಗಿ ಭೌತಿಕವಾಗಿ ಪರಿಶೀಲಿಸಿ ತೆರಿಗೆ ವಸೂಲಿ ಕ್ರಮಕೈಗೊಳ್ಳಬೇಕು, ಇದಕ್ಕಾಗಿ ವಿಶೇಷ ಸಭೆ ಕರೆಯಿರಿ ಎಂದು ಒತ್ತಾಯಿಸಿದರು. ಸದಸ್ಯ ಶ್ರೀನಿವಾಸ್, ಪುರಸಭೆ ರಸ್ತೆಯ ಫುಟ್ ಪಾತ್ ಗಳ ವ್ಯಾಪಕ ಒತ್ತುವರಿಯಾಗಿದೆ, ಶಾಲಾ ಮಕ್ಕಳು, ನಾಗರಿಕರು ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಫುಟ್ ಪಾತ್ ತೆರವಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅಧ್ಯಕ್ಷರು ಮಾತನಾಡಿ, ಪೊಲೀಸರೊಂದಿಗೆ ಚರ್ಚಿಸಿ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದರು.
2ನೇ ವಾರ್ಡ್ ನಲ್ಲಿ ಕುಡಿಯುವ ನೀರಿನ ಸಿಸ್ಟನ್ ಸ್ವಚ್ಛಗೊಳಿಸಲು ಅನುದಾನ ಇಲ್ಲ ಎಂಬ ಉತ್ತರಕ್ಕೆ ಎಲ್ಲಾ ಸದಸ್ಯರು ಆಕ್ಷೇಪಿಸಿ, ಸ್ವಚ್ಛಗೊಳಿಸಲು ಹಣ ಇಲ್ಲ ಎಂದರೆ ಹೇಗೆ, ಕೂಡಲೆ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು, ಸದಸ್ಯ ದೇವರಾಜ್, ಮುಖ್ಯ ರಸ್ತೆಗಳೆಲ್ಲಾ ಗುಂಡಿಮಯವಾಗಿವೆ, ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ, ಗುಂಡಿ ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪುರಸಭೆಯ ವಾರ್ಡ್ ಗಳಲ್ಲಿ ಸ್ವಚ್ಛತೆ ನಿರ್ವಹಣೆಯಾಗದಿರುವ ಬಗ್ಗೆ ಸದಸ್ಯ ರಾಮು, ಜಯಲಕ್ಷ್ಮೀ, ಅಸ್ಮ, ನಾಗಣ್ಣ ಆರೋಗ್ಯ ನಿರೀಕ್ಷಕಿ, ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು, ಅಧ್ಯಕ್ಷರು ಇರುವ ಖಾಯಂ ಸಿಬ್ಬಂದಿ ಪೈಕಿ ಬಹುತೇಕರು ಗೈರಾಗುತ್ತಿದ್ದು ಸಿಬ್ಬಂದಿ ಕೊರತೆಯಾಗಿದೆ, ಎಂದಾಗ ಸದಸ್ಯರು ಪದೇ ಪದೆ ಗೈರಾಗುವ ಸಿಬ್ಬಂದಿ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದರು.
ದೊಡ್ಡಪೇಟೆ ರಸ್ತೆ ಕಾಮಗಾರಿಗೆ ಹಣವಿದ್ದರೂ ಕೆಲಸ ಏಕೆ ಮಾಡುತ್ತಿಲ್ಲ ಎಂದು ಸದಸ್ಯರು ಪ್ರಶ್ನಿಸಿದಾಗ, ಅಧ್ಯಕ್ಷರು, ಸದರಿ ಕಾಮಗಾರಿಯಲ್ಲಿ ಚರಂಡಿ ಸೇರಿಸಿಲ್ಲ, ಹೊಸದಾಗಿ ಚರಂಡಿ ಸೇರಿಸಿದ ನಂತರ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ, ಪುರಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು.
Get real time updates directly on you device, subscribe now.
Prev Post
Comments are closed.