ಬೋರ್ ವೆಲ್‌ ಮಾಲೀಕರು ರೈತರ ಹಿತಾಸಕ್ತಿ ಕಾಪಾಡಲಿ

151

Get real time updates directly on you device, subscribe now.

ತುಮಕೂರು: ನಗರದ ಕನ್ನಡ ಭವನದಲ್ಲಿ ತುಮಕೂರು ಜಿಲ್ಲಾ ಬೋರ್ ವೆಲ್‌ ಏಜೆಂಟ್ಸ್ ಅಸೋಸಿಯೇಷನ್ ನ ಉದ್ಘಾಟನಾ ಸಮಾರಂಭವನ್ನು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ನೆರವೇರಿಸಿದರು.
ಉದ್ಘಾಟನಾ ನುಡಿಗಳನ್ನಾಡಿದ ಸಿದ್ಧಲಿಂಗ ಮಹಾಸ್ವಾಮೀಜಿ, ಇಲ್ಲಿಯವರೆಗೆ ಬೋರ್ ವೆಲ್‌ ಏಜೆಂಟರ್ ಗಳು ಎಷ್ಟು ಮಂದಿ ಇದ್ದಾರೆ ಎಂಬುದು ಗೊತ್ತಿರಲಿಲ್ಲ, ಇಂದು ಎಲ್ಲರೂ ನೋಂದಾಯಿಸಿಕೊಂಡು ಯಾರ್ಯಾರು ಎಲ್ಲೆಲ್ಲಿ ಇದ್ದೇವೆ, ಏನು ಮಾಡುತ್ತಿದ್ದೇವೆ ಎಂಬ ಎಲ್ಲವೂ ಸಂಘದಿಂದ ತಿಳಿಯಲಿದೆ ಎಂದರು.
ನಜೀರ್ ಸಾಬ್‌ ಅವರನ್ನು ಬೋರ್ ವೆಲ್‌ ಕೊರೆಯುವವರು ನಿಜವಾಗಲೂ ಜ್ಞಾಪಿಸಿಕೊಳ್ಳಬೇಕು, ಅವರು ಮೊದಲಿಗೆ ಬೋರ್ ವೆಲ್‌ ಯೋಜನೆ ತಂದು ರೈತರಿಗೆ ಮಾತ್ರ ಕೃಷಿಗೆ ಮಾತ್ರ ಎಂಬ ನಿಟ್ಟಿನಲ್ಲಿ ಪ್ರಾರಂಭ ಮಾಡಿದರು, ಅಲ್ಲಿಂದ ಬೋರ್ ವೆಲ್‌ ಕಾರ್ಯ ದೊಡ್ಡ ಉದ್ಯಮವಾಗಿ ಬೆಳೆದು ಎಲ್ಲಾ ಕ್ಷೇತ್ರಗಳಲ್ಲೂ ವಿಸ್ತರಿಸಿಕೊಂಡಿದೆ, ಇಂದು ಎಲ್ಲಾ ಕಡೆ ನೀರು ಕುಡಿಯುತ್ತಿದ್ದಾರೆ ಎಂದರೆ ಅದು ಬೋರ್ ವೆಲ್‌ ನಿಂದ ಮಾತ್ರ ಎಂದರು.
ಹಿಂದಿನ ಕಾಲದಲ್ಲಿ ನದಿನೀರು ಬಳಸುತ್ತಿದ್ದರು, ಕೆರೆ, ಕಟ್ಟೆ ನೀರನ್ನು ಬಳಸುತ್ತಿದ್ದರು, ಕಲ್ಯಾಣಿಗಳನ್ನು ತೋಡಿಸುತ್ತಿದ್ದರು, ತೆರೆದ ಬಾವಿಗಳನ್ನು ತೋಡಿಸುತ್ತಿದ್ದರು, ತದನಂತರ ಅನಿವಾರ್ಯವಾಗಿ ಹೊಸ ಆವಿಷ್ಕಾರ ಬಂದಾಗ ಬೋರ್ ವೆಲ್‌ ಸಂಸ್ಕೃತಿ ಬಂದು ಬೋರ್ ವೆಲ್‌ ಕೊರೆಸದಿದ್ದರೆ ನೀರು ಸಿಗುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬರಲಾಗಿದೆ ಎಂದು ಹೇಳಿದರು.
ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ರೈತರ ಬಳಿ ಹಣವಿಲ್ಲದಿದ್ದರೂ ಬಡ್ಡಿ ರಹಿತವಾಗಿ ಬೋರ್ ವೆಲ್‌ ಕೊರೆಸಿಕೊಡುತ್ತಿದ್ದೇವೆ ಎಂಬ ಬೋರ್‌ವೆಲ್‌ ಅಸೋಸಿಯೇಷನ್ ನ ಪದಾಧಿಕಾರಿಗಳ ಉದ್ದೇಶ ಬಹಳ ಉತ್ತಮವಾಗಿದೆ, ಎಲ್ಲಾ ರೀತಿಯಿಂದಲೂ ಕಷ್ಟಪಡುವವನು, ತೊಂದರೆಗೊಳಗಾಗುವವನು ರೈತನೇ ಆಗಿರುವುದರಿಂದ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅವರ ಕೈಹಿಡಿಯಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಬೇಕು ಎಂದು ತಿಳಿಸಿದರು.
ಐಕ್ಯತೆ ಒಂದೇ ಮಂತ್ರ, ಕಲಿಯುಗದಲ್ಲಿ ಸಂಘಟನೆಗೆ ಮಾತ್ರ ಶಕ್ತಿ ಇರುವಂತಹದ್ದು, ಇಂತಹ ಸಂಘಟನೆಯಿಂದ ಏನೇ ಕೆಲಸ ನಿರ್ವಹಿಸಿದರೂ ಯಶಸ್ಸು ಖಂಡಿತಾ ಸಾಧ್ಯವಾಗಲಿದೆ. ನಿಮ್ಮ ಅಸೋಸಿಯೇಷನ್‌ ಇನ್ನೂ ಉತ್ತಮವಾಗಿ ಬೆಳೆಯಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ಜಿಲ್ಲಾ ಬೋರ್ ವೆಲ್‌ ಏಜೆಂಟ್ಸ್ ಅಸೋಸಿಯೇಷನ್‌ ಅಧ್ಯಕ್ಷ ರಾಮಚಂದ್ರಮೂರ್ತಿ ರೈತರ ಕಷ್ಟಕ್ಕೆ ಸ್ಪಂದಿಸಿ, ಕಡಿಮೆ ದರದಲ್ಲಿ ಬೋರ್ ವೆಲ್‌ ಕೊರೆಸಿಕೊಡುವ ಉದ್ದೇಶದಿಂದ ತುಮಕೂರು ಜಿಲ್ಲಾ ಬೋರ್ ವೆಲ್‌ ಅಸೋಸಿಯೇಷನ್‌ ಸ್ಥಾಪನೆ ಮಾಡಲಾಗಿದೆ ಎಂದರು.
ಬೋರ್ ವೆಲ್‌ ಮಾಲೀಕರು ಕೊಳವೆಬಾವಿ ಕೊರೆಯುವ ಧರವನ್ನು ಕಾಲಕಾಲಕ್ಕೆ ಹೆಚ್ಚಿಸುವುದರಿಂದ ಅಷ್ಟೊಂದು ಮಟ್ಟದ ಹಣ ಭರಿಸುವುದು ಎಲ್ಲರಿಗೂ ಸಾಧ್ಯವಾಗದ ಕಾರಣ ಜಿಲ್ಲಾ ಮಟ್ಟದಲ್ಲಿ ನಿಗದಿತ ದರ ನಿಗದಿ ಮಾಡಿಸಿಕೊಡುವುದು ಉದ್ದೇಶವಾದರೆ, ಸಂಘಟನೆ ಮೂಲಕ ರೈತಾಪಿ ಬಂಧುಗಳಿಗೆ ಕೈಲಾದ ಸಹಾಯ ನೀಡಿ ಅತೀ ಕಡಿಮೆ ದರದಲ್ಲಿ ಬೋರ್ ವೆಲ್‌ ಕೊರೆಸಿಕೊಟ್ಟು, ಬೆಳೆಗಳನ್ನು ಬೆಳೆಯಲು ಸಹಕರಿಸುವುದು ನಮ್ಮ ಉದ್ದೇಶ ಎಂದರು.
ಏಜೆಂಟ್ ಗಳೆಲ್ಲಾ ಒಂದಾಗಿ ಒಗ್ಗಟ್ಟಿನಿಂದ ಅಡಿಗೆ ದರವನ್ನು ನಿಗದಿ ಮಾಡಿ ಎಲ್ಲರಿಗೂ ಸಹಕಾರಿಯಾಗುವಂತೆ ನೋಡಿಕೊಳ್ಳುವುದು ನಮ್ಮ ಸಂಘದ ಉದ್ದೇಶ, ನಮ್ಮ ಸಂಘದಿಂದ ಬಡ ರೈತರಿಗೆ ಸಹಾಯ ಮಾಡುವುದು ನಮ್ಮ ಸಂಘದ ಗುರಿಯಾಗಿದೆ ಎಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಸೋಸಿಯೇಷನ್‌ಗೆ ಶುಭ ಹಾರೈಸಿ ಮಾತನಾಡಿದ ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌, ಬೋರ್‌ವೆಲ್‌ ಏಜೆಂಟ್ಸ್ ಅಸೋಸಿಯೇಷನ್‌ ಸಂಘಕ್ಕೆ ಒಳ್ಳೆಯದಾಗಲಿ, ಈ ಸಂಘ ರಚನಾತ್ಮಕ ಕಾರ್ಯಕ್ರಮ ಕೊಡುವುದರ ಮುಖೇನ ಸಮಾಜಮುಖಿಯಾಗಿ ಕೆಲಸ ಮಾಡಲಿ ಎಂದು ಆಶಿಸಿದರು.
ರೈತರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ರೈತರಿಗೆ ಯಾವುದೇ ರೀತಿಯಿಂದಲೂ ತೊಂದರೆಯಾಗದ ಹಾಗೆ ನಿಮ್ಮ ಅಸೋಸಿಯೇಷನ್‌ ಉತ್ತಮವಾಗಿ ಕಾರ್ಯ ನಿರ್ವಹಿಸಲಿ, ನಿಮ್ಮ ಜೊತೆ ಸದಾ ನಾವಿರುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಬೋರ್ ವೆಲ್‌ ಏಜೆಂಟ್ಸ್ ಅಸೋಸಿಯೇಷನ್ ನ ನೊಂದಣಿ ಪತ್ರವನ್ನು ಸಿದ್ಧಲಿಂಗ ಸ್ವಾಮೀಜಿ ಬಿಡುಗಡೆ ಮಾಡಿದರು. ಇದೇ ವೇಳೆ ಜಗದೀಶ್‌, ಬೆಣ್ಣೆ ರಾಜಣ್ಣ, ಅನಿಲ್ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕ ಬೋರ್ ವೆಲ್‌ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಅನಿಲ್ ಕುಮಾರ್‌, ಡಾ.ರಾಜ್ ಕುಮಾರ್‌ ಪ್ರಶಸ್ತಿ ಪುರಸ್ಕೃತ ಎಂ.ವಿ.ನಾಗಣ್ಣ, ತುಮಕೂರು ಜಿಲ್ಲಾ ಬೋರ್ ವೆಲ್‌ ಏಜೆಂಟ್ಸ್ ಅಸೋಸಿಯೇಷನ್‌ ಅಧ್ಯಕ್ಷ ರಾಮಚಂದ್ರಮೂರ್ತಿ, ಗೌರವಾಧ್ಯಕ್ಷರಾದ ಬೆಣ್ಣೆ ರಾಜಣ್ಣ, ಎಸ್‌.ಜಗದೀಶ್‌, ನಗರಸಭಾ ಮಾಜಿ ಸದಸ್ಯರಾದ ಡಿ.ಆರ್‌.ಬಸವರಾಜು, ಮುನಿಯಪ್ಪ, ಮುಖಂಡರಾದ ಕೆ.ಬಿ.ಬೋರೇಗೌಡ, ಸಿದ್ಧೇಶ್‌, ಕೆ.ಸಿ.ನರಸಿಂಹಮೂರ್ತಿ, ಶಂಕರಪ್ಪ, ಬಿ.ಜಿ.ನರಸಿಂಹರಾಜು ಸೇರಿದಂತೆ ಅಸೋಸಿಯೇಷನ್ ನ ಎಲ್ಲಾ ಪದಾಧಿಕಾರಿಗಳು, ಬೋರ್ ವೆಲ್‌ ಏಜೆಂಟರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!