ತುಮಕೂರು: ನಗರದ ಜೆ.ಸಿ.ರಸ್ತೆಯ ಬಾಳನಕಟ್ಟೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ವೀರಸೌಧ ಕಟ್ಟಡದ ನಿರ್ವಹಣೆ ಹೊಣೆ ಹೊತ್ತಿರುವ ನಗರಾಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ ಎಂದು ತುಮಕೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಡಿ.ಎನ್.ಸಂಪತ್ ಆರೋಪಿಸಿದರು.
ನಗರದ ವೀರಸೌಧ ಕಟ್ಟಡ ಸಮಿತಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಸಂಘವು 40 ವರ್ಷಗಳಿಂದ ನಿರಂತರವಾಗಿ ಸ್ವಾತಂತ್ರ್ಯ ಯೋಧರ ಕ್ಷೇಮಾಭಿವೃದ್ಧಿ ಹಾಗೂ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಪೂರ್ವ ಹೋರಾಟ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೂ ಸ್ಪರ್ಧೆಗಳು, ರಾಷ್ಟ್ರೀಯ ಹಬ್ಬಗಳು, ಸಮಾಜ ಸೇವಾ ಕಾರ್ಯ ಆಯೋಜಿಸಿದ್ದು, 2004 ರಲ್ಲಿ ಸರ್ಕಾರದ ವತಿಯಿಂದ ಸುಮಾರು 40 ಲಕ್ಷ ರೂ.ಗಳನ್ನು ಮಂಜೂರು ಮಾಡಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ, ಸಾರ್ವಜನಿಕರಿಂದ ಸಹಾಯ ಪಡೆದು ಈ ಭವ್ಯವಾದ ಕಟ್ಟಡ ನಿರ್ಮಾಣವಾಗಿದ್ದು, ದೇಶದಲ್ಲೇ ಪ್ರಥಮ ಸ್ಮಾರಕ ಭವನವಾಗಿದೆ ಎಂದರು.
ಈ ವೀರಸೌಧ ಕಟ್ಟಡದ ನಿರ್ವಹಣೆಗೆ ವರಮಾನ ಬರುವಂತೆ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು, ನಡುವೆ ಸಭಾಂಗಣ ಹಾಗೂ ಕಚೇರಿಯನ್ನು ಸ್ವಾತಂತ್ರ್ಯ ಹೋರಾಟಗಾರರ ಶ್ರಮ, ಸಾಧನೆ, ಕೊಡುಗೆ ತ್ಯಾಗ ಹೋರಾಟಗಳಿಂದ ಭವ್ಯವಾದ ಕಟ್ಟಡ ನಿರ್ಮಾಣವಾಗಿದೆ. ಈಗಿನ ಸರ್ಕಾರದ ವ್ಯವಸ್ಥೆಯಲ್ಲಿ ಈ ಕಟ್ಟಡದ ನಿರ್ವಹಣೆಯಿಲ್ಲದೆ ದುರಾಡಳಿತ, ಬೇಜವಾಬ್ದಾರಿತನ, ಅವ್ಯವಸ್ಥೆಯಿಂದ ಸ್ವಾತಂತ್ರ ಹೋರಾಟಗಾರರು ಬೇಸತ್ತಿದ್ದಾರೆ ಎಂದು ಆಪಾದಿಸಿದರು.
ಈ ಕಟ್ಟಡ ನಿರ್ವಹಣೆಯನ್ನು ಜಿಲ್ಲಾಧಿಕಾರಿಗಳು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ವಹಿಸಿಕೊಂಡಿದ್ದಾರೆ. ಕಟ್ಟಡದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ವಹಿಸಲಾಗಿದ್ದು, ಇದರ ಮೇಲ್ವಿಚಾರಣೆ ಅವರ ಜವಾಬ್ದಾರಿಯಾಗಿರುತ್ತದೆ, ಈ ಕಟ್ಟಡದಲ್ಲಿ ಸುಮಾರು 13 ಮಳಿಗೆಗಳು ಇದ್ದು, ಕೆಲವು ಅಂಗಡಿ ಮಾಲೀಕರು ಒಪ್ಪಂದದ ಕರಾರಿನಂತೆ ಬಾಡಿಗೆ ಜಮಾ ಮಾಡದೆ ಹಾಗೂ ಇನ್ನಿತರ ಅಂಗಡಿ ಮಾಲೀಕರು ಬೇರೆಯವರ ಸ್ವಾಧೀನಕ್ಕೆ ನೀಡಿ ಆ ಬಾಡಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದರು.
ಇನ್ನೂ ಕೆಲವರು ಅಂಗಡಿ ಖಾಲಿ ಮಾಡಿ ಓಡಿ ಹೋಗಿದ್ದಾರೆ, ಇನ್ನಿತರೆ ಅಂಗಡಿಯವರು ಕಾರ್ಪೋರೇಷನ್ ಅನುಮತಿ ಪಡೆದಿಲ್ಲ, ಈ ಎಲ್ಲಾ ಸಮಸ್ಯೆಗಳು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಿದ ಆಯುಕ್ತರಿಗೆ ಗೊತ್ತಿದ್ದರೂ ಕಾನೂನು ರೀತಿಯ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಕಟ್ಟಡದಲ್ಲಿ ಬಾಕಿ ಬರಬೇಕಾದ 40 ಲಕ್ಷ ರೂ. ವಸೂಲಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ನಮ್ಮ ಸಮಿತಿಗೆ ದ್ರೋಹ ಮಾಡಿದ್ದಾರೆ. ಇತ್ತೀಚಿಗೆ ಲೆಕ್ಕ ಪರಿಶೋಧಕರಿಂದ ಲೆಕ್ಕ ಬರೆಸಿದ್ದು ಅದು ಸಹ ಪ್ರಾಧಿಕಾರದಲ್ಲಿ ಲೆಕ್ಕ ಹೊಂದಾಣಿಕೆ ಆಗುತ್ತಿಲ್ಲ, ಇತ್ತೀಚೆಗೆ ವೀರಸೌಧದ ವಿದ್ಯುತ್ ದರ ಪಾವತಿಸಿದ್ದರೂ ವಿದ್ಯುತ್ ಕಡಿತ ಮಾಡಲಾಗಿತ್ತು, ಆದ್ದರಿಂದ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಡಲೇ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ವೀರಸೌಧದ ಕಟ್ಟಡ ನಿರ್ವಹಣೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ, ಪ್ರಧಾನಿಗಳಿಗೆ, ಕೇಂದ್ರ ಗೃಹ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮತ್ತು ಇನ್ನಿತರೆ ಸಚಿವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಟಿ.ಆರ್.ರೇವಣ್ಣ, ಸ್ವಾತಂತ್ರ್ಯ ಹೋರಾಟಗಾರ ಶಂಕರಪ್ಪ ಮುಂತಾದವರು ಹಾಜರಿದ್ದರು.
Get real time updates directly on you device, subscribe now.
Prev Post
Next Post
Comments are closed.